ಕನ್ನಡಪ್ರಭ ವಾರ್ತೆ ಮಂಡ್ಯಮಕರ ಸಂಕ್ರಾತಿ ಹಬ್ಬದ ದಿನ ನಗರ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳು ಎಳ್ಳು-ಬೆಲ್ಲ ವಿನಿಯಮದೊಂದಿಗೆ ಸಂತಸಪಟ್ಟರೆ ಗ್ರಾಮೀಣ ಪ್ರದೇಶದಲ್ಲಿ ಪುರುಷರು ಜಾನುವಾರುಗಳ ಕಿಚ್ಚು ಹಾಯಿಸಿ ಸಂಭ್ರಮದಿಂದ ಹಬ್ ಆಚರಿಸಿದರು.
ಮುಂಜಾನೆಯೇ ಎಲ್ಲಾ ದೇವಾಲಯಗಳಲ್ಲೂ ಸಂಕ್ರಾಂತಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರವನ್ನು ಮಾಡಿದ್ದರು. ಶುಚಿರ್ಭೂತರಾದ ಮಹಿಳೆಯರು, ಮಕ್ಕಳು ಹೊಸಬಟ್ಟೆ ತೊಟ್ಟು ದೇವಾಲಯಗಳಿಗೆ ತೆರಳಿ ಪ್ರಥಮ ದರ್ಶನ ಪಡೆದು ಧನ್ಯತಾಭಾವ ಮೆರೆದರು.ಧನುರ್ಮಾಸದ ಪ್ರಯುಕ್ತ ಕಳೆದ ಒಂದು ತಿಂಗಳಿಂದ ನಾನಾ ಪೂಜೆಗಳು ನಡೆಯುತ್ತಿದ್ದು, ಧರ್ನುರ್ಮಾಸದ ಕೊನೆಯ ದಿನ ವಿಶೇಷ ಪೂಜೆ ವಿಜೃಂಭಣೆಯಿಂದ ನಡೆದವು. ದೇವಾಲಯಗಳಲ್ಲಿ ಭಕ್ತರಿಗೆ ಬಿಸಿಬಿಸಿ ಪೊಂಗಲ್‌ನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿತ್ತು. ಮನೆಯಲ್ಲಿ ರುಚಿಯಾದ ಅಡುಗೆ ತಯಾರಿಸಿ ಸವಿದು ಸಂತೋಷದಿಂದ ಹಬ್ಬ ಆಚರಿಸಿದರು.
ಸಂಜೆಯಾದ ಬಳಿಕ ಮಹಿಳೆಯರು-ಮಕ್ಕಳು ಎಳ್ಳು-ಬೆಲ್ಲದೊಂದಿಗೆ ಸ್ನೇಹಿತರು, ಬಂಧುಗಳ ಮನೆಗೆ ತೆರಳಿ ಪರಸ್ಪರ ವಿನಿಮಯ ಮಾಡಿಕೊಂಡರು. ರೈತರು ತಾವು ಬೆಳೆದ ದವಸ-ಧಾನ್ಯಗಳನ್ನು ದೇವಾಲಯಗಳಿಗೆ ನೀಡಿ ಪೂಜೆ ಸಮರ್ಪಿಸಿದರು.ರಾಸುಗಳ ಕಿಚ್ಚು ಸಂಕ್ರಾಂತಿಯ ಮತ್ತೊಂದು ವಿಶೇಷವಾಗಿತ್ತು. ಬೆಳಗ್ಗೆಯಿಂದಲೇ ಜಾನುವಾರುಗಳ ಮೈ ತೊಳೆದು ಅವುಗಳಿಗೆ ಹೊಸ ಮೂಗುದಾರ, ಕುತ್ತಿಗೆಗೆ ಹೊಸ ಕರಿದಾರ, ಕೊರಳಿಗೆ ಗಂಟೆ, ಗೊಂಡೆ ಹಾರಗಳನ್ನು ಹಾಕಿದರು.
ಕೊಂಬುಗಳನ್ನು ಸವರಿಸಿ ಆಕರ್ಷಣೆಗೊಳಿಸಿದ್ದರು. ಮೈಗೆ ಬಣ್ಣ ಹಚ್ಚಿ, ಪ್ಲಾಸ್ಟಿಕ್ ಹಾರಗಳು, ವಸ್ತುಗಳಿಂದ ಸಿಂಗರಿಸಿದರು. ಆಕರ್ಷಕ ಬಣ್ಣಗಳು, ಟೇಪು, ಥರ್ಮಾಕೋಲ್, ಹೂವು, ಹಾರ, ನಿಂಬೆಹಣ್ಣುಗಳಿಂದ ರಾಸುಗಳನ್ನು ಅಲಂಕರಿಸಲಾಗಿತ್ತು. ರಾಸುಗಳಿಗೆ ಅಲಂಕಾರಿಕ ಮೇಲುಹೊದಿಕೆ (ಗೌಸ) ಹಾಕಿ ಆಕರ್ಷಣೆಯನ್ನು ಹೆಚ್ಚಿಸಲಾಗಿತ್ತು.ಸಂಜೆ ಎಲ್ಲ ಗ್ರಾಮಗಳಲ್ಲಿ ರಾಸುಗಳನ್ನು ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯಿತು. ಕೆಲವೆಡೆ ರಾಸುಗಳ ಸ್ಪರ್ಧೆಗಳನ್ನು ನಡೆಸಲಾಯಿತು. ಉತ್ತಮ ರಾಸುಗಳು ಹಾಗೂ ಅವುಗಳ ಅಲಂಕಾರಕ್ಕಾಗಿ ಬಹುಮಾನವನ್ನು ನೀಡಲಾಯಿತು. ಕಿಚ್ಚು ಹಾಯಿಸುವಾಗಿ ಮೊದಲು ಬಂದ ರಾಸುಗಳಿಗೆ ಬಹುಮಾನ ವಿತರಿಸಲಾಯಿತು.
ನಗರದ ಸರ್ ಎಂವಿ ಕ್ರೀಡಾಂಗಣದ ಆಧುನೀಕರಣ ಕಾರ್ಯ ನಡೆಯುತ್ತಿರುವ ಕಾರಣ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದ್ದ ಕಿಚ್ಚು ಹಾಯಿಸುವ ಕಾರ್‍ಯವನ್ನು ಈ ವರ್ಷವು ಸ್ಥಗಿತಗೊಳಿಸಲಾಗಿತ್ತು.ಕ್ರೀಡಾಂಗಣದಲ್ಲಿ ಪುನಶ್ಚೇತನ ಕಾಮಗಾರಿ ನಡೆಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಕಿಚ್ಚು ಹಾಯಿಸಲು ಅನುಮತಿ ನೀಡಿರಲಿಲ್ಲ. ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದ ನಗರದ ನಿವಾಸಿಗಳು ನಿರಾಸೆಯಿಂದಲೇ ಹಿಂದಿರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಗರದ ಹಲವು ಯುವಕರು ತಮ್ಮ ರಾಸುಗಳನ್ನು ಕಿಚ್ಚು ಹಾಯಿಸಲು ಕ್ರೀಡಾಂಗಣಕ್ಕೆ ಕರೆತಂದಿದ್ದರು. ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಗುರುಭವನದ ಎದುರಿನ ರಸ್ತೆಯಲ್ಲಿ ಸರಳವಾಗಿ ರಾಸುಗಳನ್ನು ಕಿಚ್ಚು ಹಾಯಿಸಿ ಸಮಾಧಾನ ಪಟ್ಟುಕೊಂಡರು.ಉಳಿದಂತೆ ಹೊಸಹಳ್ಳಿ ವೃತ್ತ, ಸ್ವರ್ಣಸಂದ್ರ, ಗುತ್ತಲು ಬಡಾವಣೆ, ಚಿಕ್ಕೇಗೌಡನದೊಡ್ಡಿ, ಕ್ಯಾತುಂಗೆರೆ, ಉದಯಗಿರಿ, ಕಲ್ಲಹಳ್ಳಿ, ಬನ್ನೂರು ರಸ್ತೆ, ಸೇರಿದಂತೆ ನಗರದ ವಿವಿಧೆಡೆಗಳಲ್ಲೂ ಸಹ ರಸ್ತೆಗಳಲ್ಲೇ ಜಾನುವಾರುಗಳನ್ನು ಕಿಚ್ಚು ಹಾಯಿಸಲಾಯಿತು.
ಗೋವುಗಳಿಗೆ ಗೋಗ್ರಾಸ:ಮಂಡ್ಯ ತಾಲೂಕು ಪಣಕನಹಳ್ಳಿ ಗ್ರಾಮದಲ್ಲಿ ಶ್ರೀ ಭೈರವೇಶ್ವರ ದೇವಾಲಯ ಆವರಣದಲ್ಲಿ ಕಿಚ್ಚು ಹಾಯಿಸುವುದಕ್ಕೆ ಮುಂಚಿತವಾಗಿ ಶ್ರೀ ಭೈರವೇಶ್ವರ ಯುವಕರ ಸಂಘ ಹಾಗೂ ಗ್ರಾಮಸ್ಥರಿಂದ ನೂರಾರು ರಾಸುಗಳಿಗೆ ಸಾಮೂಹಿಕವಾಗಿ ಗೋಗ್ರಾಸ (ಎಳ್ಳು, ಬೆಲ್ಲ, ಕಾಯಿ, ಹಿಂಡಿ-ಬೂಸಾ, ರವೆ) ನೀಡಲಾಯಿತು. ಆಕರ್ಷಕವಾದ 40-50 ಜೋಡೆತ್ತುಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ಸಾಗುವ ರಸ್ತೆಯನ್ನು ರಂಗೋಲಿ ಇಟ್ಟು, ತಳಿರು-ತೋರಣಗಳನ್ನು ಕಟ್ಟಿ ಶೃಂಗರಿಸಲಾಗಿತ್ತು. ಹೊಳಲು ರಸ್ತೆಯಲ್ಲಿ ಜಾನುವಾರುಗಳನ್ನು ಕಿಚ್ಚು ಹಾಯಿಸಲಾಯಿತು.