ಕನ್ನಡಪ್ರಭ ವಾರ್ತೆ ಬೆಳಗಾವಿ
ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಐಪಿಎಲ್-2025 ಚಾಂಪಿಯನ್ ಆಗಿ ಗೆಲುವು ಸಾಧಿಸುತ್ತಿದ್ದಂತೆಯೇ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭ್ರಮಾಚರಣೆಗೆ ಸೇರಿದ್ದ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಕೇಕೆ ಹಾಕುತ್ತ, ಈ ಸಲ ಕಪ್ಪ ನಮ್ದೆ ಆಯ್ತು.. ಎಂದು ಘೋಷಣೆ ಕೂಗಿದರು. ಆರ್‌ಸಿಬಿ ತಂಡದ ಪರವಾಗಿ ಘೋಷಣೆ ಹಾಕಿದರು. ಜನರ ಸಂಭ್ರಮ ಮುಗಿಲು ಮುಟ್ಟಿತ್ತು. ಸಿಡಿಮದ್ದುಗಳ ಆರ್ಭಟವೂ ಜೋರಾಗಿತ್ತು. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭ್ರಮಾಚರಣೆಗೆ ಸೇರಿದ್ದ ಸಹಸ್ರಾರು ಜನರು ರಾತ್ರಿ 1 ಗಂಟೆಯಾದರೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ನೂಕು ನುಗ್ಗಲು ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಪೊಲೀಸ್ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಜನರು ದಿಕ್ಕಾಪಾಲಾಗಿ ಅಲ್ಲಿಂದ ಓಡಿ ಹೋದರು. ಕೆಲವರು ನೆಲಕ್ಕೆ ಬಿದ್ದರು. ಟಿಳಕವಾಡಿಯಲ್ಲಿಯೂ ಜನರು ಸಂಭ್ರಮಾಚರಣೆ ತಡರಾತ್ರಿವರೆಗೂ ಮುಂದವರೆದಿರುವುದರಿಂದ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಜನರನ್ನು ಚದುರಿಸಿದರು.