ಹಿರಿಯೂರು: ಸರ್ವರಿಗೂ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಸರ್ವ ಜನಾಂಗದವರ ಏಳಿಗೆಗೆ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜರ್ಷಿ ಎಂಬ ಹೆಸರಿಗೆ ಅರ್ಹರಾಗಿದ್ದಾರೆ ಎಂದು ಪ್ರಾಂಶುಪಾಲ ಮ್ಯಾಕ್ಲೂರಹಳ್ಳಿ ಕೆ.ರಂಗಪ್ಪ ಹೇಳಿದರು.
ಒಡೆಯರು ಅರಸು ಮನೆತನದಿಂದ ಬಂದಿದ್ದರೂ ಜನತೆಯ ಪರವಾದ ಆಡಳಿತಗಾರರಾಗಿದ್ದರು. ಅವರ ಕಾಲದಲ್ಲಿ ಮೈಸೂರು ರಾಜ್ಯದಲ್ಲಿ ಹೆಸರಿಗೆ ಮಾತ್ರ ಇದ್ದ ಪ್ರಜಾ ಪ್ರತಿನಿಧಿ ಸಭೆಯು ನೂತನ ರೂಪ ಪಡೆದು ನಿಜವಾದ ಜನ ಪ್ರತಿನಿಧಿಸಭೆಯಾಗಿ ಪರಿವರ್ತನೆಯಾಯಿತು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯ್ತಿಗಳು ಕಾರ್ಯನಿರ್ವಹಿಸಲು ಆರಂಭ ಮಾಡಿದ್ದರಿಂದ ಗ್ರಾಮೀಣ ಪ್ರದೇಶಗಳ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಿದ್ದರು ಎಂದು ತಿಳಿಸಿದರು.
ಇತಿಹಾಸ ಉಪನ್ಯಾಸಕ ಈ.ಪ್ರಕಾಶ್ ಬಬ್ಬೂರು ಮಾತನಾಡಿ, ಬಡತನ ನಿರ್ಮೂಲನೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಕಾಳಜಿ ಹೊಂದಿದ್ದ ಆಧುನಿಕ ಕನ್ನಡ ನಾಡಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜರ ಸಾಧನೆ ಅಪಾರ ಹಾಗೂ ಅನನ್ಯವಾದುದು. ಬರದ ನಾಡಿಗೆ ನೀರಾವರಿ ಸೌಲಭ್ಯ ಒದಗಿಸುವ ಅವರ ದೂರದೃಷ್ಟಿಯ ಯೋಜನೆಯಾದ ವಿವಿ ಸಾಗರ ಜಲಾಶಯ ಇಂದು ಲಕ್ಷಾಂತರ ಜನರ ಬದುಕಾಗಿದೆ. ಅವರ ಹೆಸರಿನಲ್ಲಿ ತಾಲೂಕಿನಲ್ಲಿ ಒಂದು ಪುತ್ಥಳಿ ನಿರ್ಮಾಣವಾಗಬೇಕು. ಇಂದಿನ ಜನಪ್ರನಿಧಿಗಳಿಗೆ ಅವರು ಆದರ್ಶವಾಗಬೇಕು ಎಂದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಈ.ನಾಗೇಂದ್ರಪ್ಪ, ಎಚ್.ಆರ್.ಲೋಕೇಶ್, ಎಲ್.ಶಾಂತಕುಮಾರ್, ಜಯಪ್ರಕಾಶ್, ದೈಹಿಕ ಶಿಕ್ಷಣ ನಿರ್ದೇಶಕ ಮಂಜು, ಬಿ.ಎಂ.ತಿಪ್ಪೇಸ್ವಾಮಿ, ಹಿರಿಯ ವಿದ್ಯಾರ್ಥಿಗಳಾದ ಲಾವಣ್ಯ, ಲಕ್ಷ್ಮಿ,ರೇವತಿ, ಅಂಜು, ಯಶಸ್ಸು, ಕರಿಬಸಯ್ಯ ಮುಂತಾದವರು ಹಾಜರಿದ್ದರು.