ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರದ ಬಹುತೇಕ ವಾರ್ಡ್ ಹಾಗೂ ಕಾಲನಿಯಲ್ಲಿ ಮ್ಯಾನ್ಹೋಲ್ ಕ್ಯಾಪ್ಗಳು ಒಡೆದು ಹೋಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅಧಿಕಾರಿಗಳು ಹೊಸ ಮ್ಯಾನ್ ಹೋಲ್ ಕ್ಯಾಪ್ ಅಳವಡಿಸಬೇಕು ಎಂದು ಮೇಯರ್ ರಾಮಪ್ಪ ಬಡಿಗೇರ ತಿಳಿಸಿದರು.
ಈ ಕುರಿತು ಸಾರ್ವಜನಿಕರಿಂದ ನಿತ್ಯ ಅನೇಕ ದೂರುಗಳು ಬರುತ್ತಿದ್ದು, ಕೂಡಲೇ ಅಧಿಕಾರಿಗಳು ಹೊಸ ಮ್ಯಾನ್ಹೋಲ್ ಕ್ಯಾಪ್ ಅಳವಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಪಾಲಿಕೆಯ ವ್ಯಾಪ್ತಿಯ ವಲಯ ಕಚೇರಿಗಳಲ್ಲಿ ಸಾಕಷ್ಟು ಸಿಬ್ಬಂದಿ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ವ್ಯವಸ್ಥೆ ಇದ್ದರೂ, ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳು ಬೇಗನೆ ಪರಿಹರಿಸುವ ಕೆಲಸ ಮಾಡುತ್ತಿಲ್ಲ. ಖುದ್ದು ವಲಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮ್ಯಾನ್ಹೋಲ್ ಸಮಸ್ಯೆಗಳನ್ನು ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಬೇಕು. ಇಲ್ಲದೇ ಹೋದಲ್ಲಿ ಮೇಯರ್ ಪೋನ್ಇನ್ ಕಾರ್ಯಕ್ರಮ ವಿಫಲವಾದಂತಾಗುತ್ತದೆ ಎಂದು ಎಚ್ಚರಿಸಿದರು.ಅವಳಿ ನಗರದ ಸಮಗ್ರ ಅಭಿವೃದ್ಧಿ ಹಾಗೂ ಸ್ಥಳೀಯ ಸಮಸ್ಯೆಗಳನ್ನು ಸ್ವತಃ ಆಲಿಸಿದ ಮೇಯರ್, ಕೆಲವೊಂದಿಷ್ಟು ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಸ್ಯೆಗೆ ಪರಿಹಾರ ಕಲ್ಪಿಸೋಣ: ಮಹಾನಗರದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾದ ಕೆಲಸ ಮಾಡುತ್ತಿದ್ದೇವೆ. ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಒಟ್ಟು ಐದು ಪೋನ್ ಇನ್ ಕಾರ್ಯಕ್ರಮಗಳನ್ನು ಮಾಡಲಾಗಿದೆ. ನಾಲ್ಕು ಕಾರ್ಯಕ್ರಮಗಳಲ್ಲಿ ಒಟ್ಟು 203 ದೂರುಗಳು ಬಂದಿದ್ದು, ಅವುಗಳಲ್ಲಿ ಎ ವಿಭಾಗದಲ್ಲಿ 110, ಬಿ ವಿಭಾಗದಲ್ಲಿ 10 ಹಾಗೂ ಸಿ ವಿಭಾಗದಲ್ಲಿ 83 ದೂರುಗಳು ಬಂದಿದ್ದವು. ಅವುಗಳನ್ನು ಪರಿಹರಿಸುವ ಕೆಲಸ ಮಾಡಲಾಗಿದ್ದು, ಸದ್ಯ ಸಿ ವಿಭಾಗದಲ್ಲಿ 70 ದೂರುಗಳು ಮಾತ್ರ ಬಾಕಿ ಉಳಿದಿವೆ. ಅವುಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ಪೋನ್ ಇನ್ ಕಾರ್ಯಕ್ರಮದ ಮೂಲಕ ಅವಳಿ ನಗರದಲ್ಲಿ ಒಟ್ಟು ₹7.92 ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಸದ್ಯ ವಿವಿಧ 35 ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಉಪಮೇಯರ್ ದುರ್ಗಮ್ಮ ಬಿಜವಾಡ ಸೇರಿದಂತೆ ಪಾಲಿಕೆ ವಲಯ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಹಾಗೂ ಎಂಜಿನೀಯರ್ಗಳು, ಸಿಬ್ಬಂದಿ ಉಪಸ್ಥಿತರಿದ್ದರು.