ಅಂಶಿ ಪ್ರಸನ್ನಕುಮಾರ್
ಪಿರಿಯಾಪಟ್ಟಣ ತಾಲೂಕು ಚಿಕ್ಕಮಳಲಿ ಗ್ರಾಮದ ಎಸ್. ಮಹದೇವ ಅವರು 2013 ರಿಂದ ತಂಬಾಕು ಬಿಟ್ಹಾಕಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತೆಂಗು, ಅಡಿಕೆ ಜೊತೆಗೆ ನರ್ಸರಿ ನಡೆಸುತ್ತಾ ಭರ್ಜರಿ ಲಾಭ ಮಾಡುತ್ತಿದ್ದಾರೆ.
ಅವರಿಗೆ 13 ಎಕರೆ ಜಮೀನಿದೆ. ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ನಾಲ್ಕು ಕೊಳವೆ ಬಾವಿ ಕೊರೆಸಿದ್ದಾರೆ. ಸೋಲಾರ್ ಐಪಿ ಸೆಟ್ ಇದೆ. ಮೂರು ವರ್ಷ ಜಿ-9 ಹಾಗೂ ಏಲಕ್ಕಿ ಬಾಳೆ ಬೆಳೆದಿದ್ದರು. ಮೊದಲ ಬಾರಿ ದರ ಕುಸಿತದಿಂದ ನಷ್ಟವಾಯಿತು. ಎರಡನೇ ವರ್ಷ ಉತ್ತಮ ಆದಾಯ ಬಂದಿತು. ತೆಂಗು-130 ಫಸಲು ಬರುವ ಮರಗಳಿವೆ. 250 ಹೊಸದಾಗಿ ಹಾಕಿದ್ದಾರೆ. 30 ರು.ವರೆಗೆ ಸಿಕ್ಕರೆ ಎಳನೀರು ಹಂತದಲ್ಲಿಯೇ ಮಾರಾಟ ಮಾಡುತ್ತಾರೆ. ಇಲ್ಲವೇ ಕೊಬ್ಬರಿ ಮಾಡಿ, ತಿಪಟೂರಿನಲ್ಲಿ ಮಾರಾಟ ಮಾಡುತ್ತಾರೆ.ಕ್ವಿಂಟಲ್‌ಗೆ 3000-3,500 ರು. ಸಿಗುತ್ತದೆ. ಅಡಿಕೆ- 2500 ಮರಗಳಿವೆ. ಈ ಪೈಕಿ 300-400 ರಲ್ಲಿ ಫಸಲಿಲ್ಲ. ಪ್ರತಿಮರಕ್ಕೆ 17 ಕೆಜಿ ಫಸಲು ಬಂದಿದ್ದು, ರಾಮನಾಥಪುರದ ಕ್ಯಾಂಪ್ಕೋ ಕಂಪನಿಗೆ ಪೂರೈಸಿದ್ದಾರೆ. ಸ್ಥಳೀಯವಾಗಿಯೂ ಮಾರಾಟ ಮಾಡಿದ್ದಾರೆ.
ಇವರ ಬಳಿ ನಾಟಿ ಹಸು-5, ಎಚ್‌ಎಫ್- 2 ಹಸುಗಳಿವೆ. ಮೇಕೆ-2, ನಾಟಿ ಕೋಳಿ- 15 ಇವೆ. ಕುರಿ ಹಾಗೂ ಕೋಳಿ ಶೆಡ್ ನಿರ್ಮಿಸಿದ್ದಾರೆ. ಕೋಳಿಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಕಾಣಿಕೆ ಮಾಡಬೇಕು ಎಂಬ ಉದ್ದೇಶ ಇತ್ತು.ಆದರೆ ನರಿ ಹಾಗೂ ನಾಯಿಗಳ ಕಾಟದಿಂದ ಸಾಧ್ಯವಾಗಿಲ್ಲ. ಕೃಷಿ ಇಲಾಖೆಯಿಂದ ಸಹಾಯಧನ ಪಡೆದು ಕೃಷಿ ಹೊಂಡ ನಿರ್ಮಿಸಿದ್ದಾರೆ. ಮೀನು ಸಾಕಾಣಿಕೆ ಮಾಡಬೇಕು ಎಂಬುದು ಕಾರ್ಯರೂಪಕ್ಕೆ ಬಂದಿಲ್ಲ. ಜೇನು ಸಾಕಾಣಿಕೆಯನ್ನು ಕೂಡ ಮಾಡುತ್ತಾರೆ. ಮೊದಲು 24 ಪೆಟ್ಟಿಗೆಗಳಿದ್ದವು. ಈಗ 5 ಪೆಟ್ಟಿಗೆಗಳಿವೆ.
ತೋಟಗಾರಿಕೆ ವಿಭಾಗದಲ್ಲಿ ಸಾಧನೆಗಾಗಿ ಮಹದೇವ ಅವರನ್ನು 2022ರ ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ. ಪೊನ್ನಂಪೇಟೆ ಅರಣ್ಯ ಕಾಲೇಜಿಗೆ ಹೋಗಿ ಜೇನುಕೃಷಿಯ ಬಗ್ಗೆ ತರಬೇತಿ ನೀಡಿದ್ದಾರೆ.
ಎಸ್. ಮಹದೇವ ಬಿನ್ ಶಿವಣ್ಣೇಗೌಡ
ಬೆಟ್ಟದಪುರ ಹೋಬಳಿ
ಮೈಸೂರು ಜಿಲ್ಲೆ