ಯಾರದ್ದೋ ಹೆಸರಿನಲ್ಲಿ ಮತ್ಯಾರಿಂದಲೋ ಜನಗಣತಿ?

KannadaprabhaNewsNetwork |  
Published : Apr 21, 2026, 02:15 AM IST
ಜನಗಣತಿ | Kannada Prabha

ಸಾರಾಂಶ

ದೇಶದ ಸೂಚ್ಯಂಕವನ್ನು ನಿರ್ಧರಿಸಲು ಮತ್ತು ಜನರ ಸ್ಥಿತಿಗತಿ ಅರಿಯಲು ಮಾಡುವ ಮಹತ್ವದ ಜನಗಣತಿಯ ಹೊಣೆಯನ್ನು ಶಿಕ್ಷಕರು ಯಾರ್ಯಾರದೋ ಕೈಯಲ್ಲಿ ಮಾಡಿಸುತ್ತಿದ್ದಾರೆ ಎನ್ನುವುದು ಶಿಕ್ಷಕರ ವಲಯದಲ್ಲಿಯೇ ಭಾರಿ ಚರ್ಚೆಯಾಗುತ್ತಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ದೇಶದಲ್ಲಿ 2021ರಲ್ಲಿಯೇ ಆಗಬೇಕಾಗಿದ್ದ ಜನಗಣತಿ ತಡವಾಗಿಯಾದರೂ ಪ್ರಾರಂಭವಾಗಿದೆ. ದೇಶದ ಸೂಚ್ಯಂಕವನ್ನು ನಿರ್ಧರಿಸಲು ಮತ್ತು ಜನರ ಸ್ಥಿತಿಗತಿ ಅರಿಯಲು ಮಾಡುವ ಮಹತ್ವದ ಜನಗಣತಿಯ ಹೊಣೆಯನ್ನು ಶಿಕ್ಷಕರು ಯಾರ್ಯಾರದೋ ಕೈಯಲ್ಲಿ ಮಾಡಿಸುತ್ತಿದ್ದಾರೆ ಎನ್ನುವುದು ಶಿಕ್ಷಕರ ವಲಯದಲ್ಲಿಯೇ ಭಾರಿ ಚರ್ಚೆಯಾಗುತ್ತಿದೆ.

ಕೆಲ ಶಿಕ್ಷಕರು ಬೇರೆ ಶಿಕ್ಷಕರ ಜನಗಣತಿ ಮಾಡುತ್ತಿದ್ದರೆ, ಇನ್ನೂ ಕೆಲವರು ಖಾಸಗಿಯವರ ಮೂಲಕ ಜನಗಣತಿ ಮಾಡಿಸುತ್ತಿದ್ದಾರೆ. ಇನ್ನೂ ಅಚ್ಚರಿ ಎಂದರೆ ಕೆಲವರಂತೂ ತಮ್ಮ ಮಕ್ಕಳು ಇಲ್ಲವೇ ಸಂಬಂಧಿಕರ ಮೂಲಕ ಜನಗಣತಿ ಮಾಡಿಸುತ್ತಿರುವುದು ಕಂಡು ಬಂದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಜನಗಣತಿ ಪ್ರಾರಂಭವಾಗಿದ್ದು, ಮೊದಲ ಹಂತದಲ್ಲಿ ಮ್ಯಾಪಿಂಗ್ ಮಾಡುವುದು ಮತ್ತು ಮನೆ ಗಣತಿ ಮತ್ತು ಮನೆಯ ಮಾಲೀಕರ ಹೆಸರು ಹಾಗೂ ವಿವರವನ್ನು ಮಾತ್ರ ಭರ್ತಿ ಮಾಡಲಾಗುತ್ತಿದೆ. ಆದರೆ, ಇದನ್ನು ಮಾಡಲು ಆಗದೆ ಕೆಲವರು ಯಾರದ್ದೋ ಕೈಯಲ್ಲಿ ಮಾಡಿಸುತ್ತಿದ್ದಾರೆ. ಕೆಲವು ಶಿಕ್ಷಕರು ದುಡ್ಡಿನಾಸೆಗಾಗಿ ನಾಲ್ಕಾರು ಶಿಕ್ಷಕರ ಜನಗಣತಿ ತಾವೇ ಮಾಡುತ್ತಿದ್ದಾರೆ ಎಂಬ ಆರೋಪವೂ ಶಿಕ್ಷಕ ವಲಯದಿಂದಲೇ ಕೇಳಿ ಬರುತ್ತಿದೆ.

ಜನಗಣತಿಗೆ ನೀಡುವ ₹ 25 ಸಾವಿರ ಹಾಗೂ 11 ಇಎಲ್‌ಗಳಿಂದ ಬರುವ ಆದಾಯದ ಬಹುತೇಕ ಹಣವನ್ನು ಬೇರೆಯವರ ಮೂಲಕ ಮಾಡಿಸಿ ಕೊಡುತ್ತಿದ್ದಾರೆ. ಇದಕ್ಕಾಗಿ ಒಬ್ಬೊಬ್ಬರು ಒಂದೊಂದು ದರ ನಿಗದಿ ಮಾಡಿದ್ದಾರೆ. ಅಷ್ಟೂ ಗಣತಿಯನ್ನು ಮಾಡಿದರೆ ಸರ್ಕಾರ ಕೊಡಮಾಡುವ ಹಣ ನೀಡುತ್ತಿದ್ದರೆ ಇನ್ನು ಕೆಲವರು ಸರ್ಕಾರ ಕೊಡಮಾಡುವ ಹಣ ಮತ್ತು ಇಎಲ್ ನಿಂದ ಬರುವ ಹಣವನ್ನೂ ನೀಡುತ್ತಿದ್ದಾರೆ. ಇದು ಈಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ತಪ್ಪು ಮಾಹಿತಿ ದೇಶವನ್ನು ಕಟ್ಟುವಲ್ಲಿ ಅಗತ್ಯವಾಗಿ ಬೇಕಾಗಿರುವ ಪರಿಪೂರ್ಣ ಮತ್ತು ಸತ್ಯ ಮಾಹಿತಿಯನ್ನು ದಾಖಲಿಸುವ ಮಹತ್ವದ ಕಾರ್ಯದಲ್ಲಿಯೂ ಬೇಕಾಬಿಟ್ಟಿಯಾಗಿ ಭರ್ತಿ ಮಾಡುತ್ತಿದ್ದಾರೆ. ಮನೆಯ ಮಾಲೀಕರ ಹೆಸರು ಮತ್ತು ನಾಲ್ಕಾರು ಮಾಹಿತಿಗಳನ್ನು ಮಾತ್ರ ಸರಿಯಾಗಿ ಭರ್ತಿ ಮಾಡಿಕೊಂಡು ಇನ್ನುಳಿದ ಮಾಹಿತಿಯನ್ನು ತಾವೇ ತಮಗೆ ತೋಚಿದಂತೆ ತುಂಬಿಕೊಂಡು ಹೋಗುತ್ತಿದ್ದಾರೆ. ಇದು ಗಣತಿಯ ಲೆಕ್ಕಾಚಾರವನ್ನೇ ಬುಡಮೇಲು ಮಾಡುವಂತಾಗಿದೆ.

ಮರು ಪರಿಶೀಲನೆ

ಗಣತಿ ಕಾರ್ಯ ಮಾಡುತ್ತಿರುವ ಶಿಕ್ಷಕರ ಕುರಿತು ನಿಗಾ ಇರಬೇಕು ಮತ್ತು ಗಣತಿಯ ವೇಳೆಯಲ್ಲಿ ಭರ್ತಿ ಮಾಡಿಕೊಂಡಿರುವ ಮಾಹಿತಿ ಮರು ಪರಿಶೀಲನೆ ಮಾಡುವಂತಾಗಬೇಕು. ಶೇಕಡಾ 90ರಷ್ಟು ಮಾಹಿತಿ ಬೋಗಸ್ ಭರ್ತಿ ಮಾಡಿಕೊಳ್ಳುತ್ತಿರುವುದೂ ಈಗ ಗಣತಿದಾರರ ವಲಯದಲ್ಲಿಯೇ ಕೇಳಿಬರುತ್ತಿದೆ.

ಕೆಲವರು ಗಣತಿ ಕಾರ್ಯ ಮಾಡುತ್ತಿಲ್ಲ. ಅವರಿವರ ಕೈಯಿಂದ ಮಾಡಿಸುತ್ತಿದ್ದಾರೆ. ಅವರದೇ ಮೊಬೈಲ್ ಅನ್ನು ಕೊಟ್ಟು ಕಳುಹಿಸಿ, ಬೇರೆ ಶಿಕ್ಷಕರಿಂದ ಮತ್ತು ಖಾಸಗಿ ವ್ಯಕ್ತಿಗಳಿಂದ ಮಾಡಿಸುತ್ತಿದ್ದಾರೆ ಎಂದು ಶಿಕರೊಬ್ಬರು ಹೇಳಿದರು.

ಶಿಕ್ಷಕರು ಗಣತಿ ಮಾಡುತ್ತಿರುವುದನ್ನು ಮೇಲುಸ್ತುವಾರಿಯಾಗಿ ನೋಡಿಕೊಳ್ಳುತ್ತಿರುವ ಸೂಪರ್‌ವೈಸರ್‌ಗೆ ಅದೆಲ್ಲವೂ ಗೊತ್ತಿದೆ. ಅವರ ಸಹಕಾರದಿಂದಲೇ ಬೇರೆಯವರ ಮೂಲಕ ಗಣತಿ ಮಾಡುವ ಕಳ್ಳಾಟ ನಡೆದಿದೆ ಎಂದು ಗಣತಿದಾರರು ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿಯಲ್ಲಿ ಕಿಡಿಗೇಡಿಗಳಿಂದ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಧ್ವಂಸ
ವಚನಗಳು ಸರ್ವಕಾಲಕ್ಕೂ ಶ್ರೇಷ್ಠ: ಅಪರ ಜಿಲ್ಲಾಧಿಕಾರಿ