ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ದಿನಗಳಲ್ಲಿ ದುಪ್ಪಟ್ಟು ಮಳೆಯಾಗಿದೆ. ಕಾಫಿ, ಕರಿಮೆಣಸು ಬೆಳೆ ನಷ್ಟಗಳಿಗೆ ಕೇಂದ್ರ ಸರ್ಕಾರದಿಂದಲೂ ಪರಿಹಾರ ಒದಗಿಸಲು ಸಂಸದರೊಂದಿಗೆ ಮಾತುಕತೆ ನಡೆಸಿ, ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಭರವಸೆ ನೀಡಿದರು.ಮಳೆ ಹಾನಿ ಸಂಭವಿಸಿದ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಭಾರೀ ಮಳೆಯಿಂದಾಗಿ ಮನೆ ಕುಸಿತಗೊಂಡಿರುವ ತೋಳೂರುಶೆಟ್ಟಳ್ಳಿಯ ಟಿ. ಲಕ್ಷ್ಮಮ್ಮ್ಮ ಊರೊಳಗಿನಕೊಪ್ಪದ ಕೆ.ಜೆ. ನವೀನ್, ವಣಗೂರುಕೊಪ್ಪದ ವಿ.ಕೆ. ಇಂದಿರಾ, ಜಾನಕಿ ಅವರುಗಳ ಮನೆಗಳನ್ನು ಶಾಸಕರು ವೀಕ್ಷಿಸಿದರು. ಇದರೊಂದಿಗೆ ಯಡೂರು ಗ್ರಾಮದಲ್ಲಿ ಸುಮಾರು ಮುಕ್ಕಾಲು ಎಕರೆ ತೋಟ ಕುಸಿದು, ಅಪಾಯದ ಸ್ಥಿತಿಯಲ್ಲಿರುವುದನ್ನು ಪರಿಶೀಲಿಸಿ, ತುರ್ತು ಕ್ರಮ ಕೈಗೊಳ್ಳಲು ಕಂದಾಯ ಇಲಾಖಾಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಸೋಮವಾರಪೇಟೆ- ಶಾಂತಳ್ಳಿ ರಾಜ್ಯ ಹೆದ್ದಾರಿಯ ಜೇಡಿಗುಂಡಿಯಲ್ಲಿ ಬರೆ ಕುಸಿದು ಅಪಾಯದ ಸ್ಥಿತಿ ನಿರ್ಮಾಣವಾಗಿರುವುದನ್ನು ಪರಿಶೀಲಿಸಿದ ಸುಜಾ ಕುಶಾಲಪ್ಪ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ತಿಳಿಸಿದರು. ಹೊಸಬೀಡು ಗ್ರಾಮದಲ್ಲಿ ಲೋಕೋಪಯೋಗಿ ರಸ್ತೆಗೆ ನಿರ್ಮಿಸಿರುವ ತಡೆಗೋಡೆ ಕುಸಿದು ಹಾನಿಯಾಗಿರುವುದನ್ನು ಪರಿಶೀಲಿಸಿದರು.ಮನೆ ಹಾನಿಯಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸಾಂತ್ವನ ಹೇಳಿ, ಶೀಘ್ರವಾಗಿ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದ ಅವರು, ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ ಆಗಿರುವ ಮನೆಗಳ ಹಾನಿ ಬಗ್ಗೆ ಕಂದಾಯ ನಿರೀಕ್ಷಕ ದಾಮೋಧರ್, ಗ್ರಾಮ ಆಡಳಿತಾಧಿಕಾರಿ ತಳವಾರ್ ಕರಿಬಸವರಾಜು ಅವರುಗಳೊಂದಿಗೆ ಮಾಹಿತಿ ಸಂಗ್ರಹಿಸಿದರು.
ಸರ್ಕಾರ ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಸ್ಥಳೀಯ ಶಾಸಕರು ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು. ಮುಖ್ಯಮಂತ್ರಿಗಳು ಸಹ ಕೊಡಗಿನ ಸಮಸ್ಯೆಗೆ ಸ್ಪಂದಿಸಬೇಕು ಎಂದು ಅವರು ಹೇಳಿದರು.