ಸಂಸದ ಬಿ.ವೈ.ರಾಘವೇಂದ್ರ ಅಭಿಮತ । ಮೋದಿ ಸರ್ಕಾರದ 11 ವರ್ಷದ ಸಾಧನೆಯ ಪ್ರದರ್ಶಿನಿ, ಪ್ರಬುದ್ಧರೊಂದಿಗೆ ಸಂವಾದ
ಸಾವಿರಾರು ಜಾತಿ-ಧರ್ಮವಿರುವ ಭಾರತದಲ್ಲಿ ಅಮೃತಕಾಲ ಬಂದಿದ್ದು, ಸುಭದ್ರ-ಸದೃಢ ಸರ್ಕಾರ ದೇಶದಲ್ಲಿ ಬಂದಿದೆ. ಕೇಂದ್ರ ಸರ್ಕಾರದ ದಿಟ್ಟ ಹೆಜ್ಜೆಗಳು ನವಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ನಗರದ ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠದ ಸಮೀಪವಿರುವ ಸರ್ಜಿ ಫರ್ಟಿಲಿಟಿ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ ಹಮ್ಮಿಕೊಂಡಿದ್ದ ಮೋದಿ ಸರ್ಕಾರದ 11 ವರ್ಷದ ಸಾಧನೆಯ ಪ್ರದರ್ಶಿನಿ ಮತ್ತು ಪ್ರಬುದ್ಧರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಬಡವರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿಯವರು ವಿಕಸಿತ ಭಾರತದ ದಾರಿಯಲ್ಲಿದ್ದು, ಇದು ಅಮೃತ ಕಾಲವಾಗಿದೆ ಎಂದರು.ಸರ್ಕಾರದ ಸಾಧನೆಯನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ದೇಶವನ್ನು 65 ವರ್ಷ ಆಳಿದ ಕಾಂಗ್ರೆಸ್ ಸರ್ಕಾರ ಜಾತಿ ಜಾತಿಗಳಿಗೆ ಬೆಂಕಿಹಚ್ಚಿ ಬೇಳೆ ಬೇಯಿಸಿಕೊಂಡು, ರಾಜಕಾರಣ ಮಾಡಿರುವ ಕಾಲ ಬೇರೆ. ಯುಪಿಎ ಸರ್ಕಾರದ ಕಾಲದಲ್ಲಿ ನಡೆದ ಭ್ರಷ್ಟಾಚಾರ ದೇಶದ ಜನರಿಗೆ ಅರಿವಿದೆ. ಭ್ರಷ್ಟಾಚಾರ ಮುಕ್ತ ಮೋದಿ ಸರ್ಕಾರ ಮೂರನೇ ಅವಧಿಗೆ ಕಾಲಿಟ್ಟಿದೆ ಎಂದು ತಿಳಿಸಿದರು.
ರಾಜ್ಯ ಶಿಕ್ಷಣ ಪ್ರಕೋಷ್ಠದ ಸಹಸಂಚಾಲಕ ಎಂ.ಜಿ. ಭಟ್ ಮಾತನಾಡಿ, 2014ರಲ್ಲಿ ಯುಪಿಎ ಸರ್ಕಾರದ ಕೊನೆಯ ಅವಧಿಯಲ್ಲಿ ಹಿಂದೂಗಳ ಸ್ವಾತಂತ್ರ ಮುರಿಯುವ ಬಿಲ್ ಮಂಡನೆಗೆ ಸಿದ್ಧವಾಗಿತ್ತು. ಕೋಮುಗಲಭೆಯಾದಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡುವುದು, ಅನ್ಯಕೋಮಿನವರು ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿದಾಗ ಆರೋಪಿಯನ್ನು ಬಂಧಿಸುವ ಬದಲು ಹಿಂದೂ ಹೆಣ್ಣುಮಕ್ಕಳ ಹೇಳಿಕೆಯನ್ನೇ ತೆಗೆದುಕೊಂಡು ಆಕೆಯನ್ನು ಆರೋಪಿ ಎನ್ನುವ ರೀತಿಯಲ್ಲಿ ಬಿಂಬಿಸುವ ಕಾನೂನನ್ನು ತರಲು ಯುಪಿಎ ಸರ್ಕಾರ ಹೊರಟಿತ್ತು. ಆದರೆ ಅದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ ಎಂದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಯಾದ ಸೋಮಶೇಖರ್, ಮುದ್ರಾ ಯೋಜನೆಯಡಿ ಮುದ್ರಾ ಫಲಾನುಭವಿ ಗುರುರಾಜ್, ಕೇವಲ 3600 ರು. ಕಟ್ಟಿ 80,000 ರು. ಬೆಳೆವಿಮೆ ಪಡೆದ ಯೋಗೇಂದ್ರಾಚಾರ್, ಉಜ್ವಲ ಯೋಜನೆ ಫಲಾನುಭವಿ ಸರೋಜಮ್ಮ, ರೈತ ಪ್ರವೀಣ್ ಕುಮಾರ್ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಅಭಿನಂದಿಸಲಾಯಿತು.
----------------