ರಾಜಕೀಯ ಗಂಭೀರತೆ ಇಲ್ಲದೆ ಸೇನೆಯ ಶೌರ್ಯ-ತ್ಯಾಗಕ್ಕೆ ಸೂಕ್ತ ಮಾನ್ಯತೆ ದೊರಕಿಲ್ಲ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಾರತ ಸೇನೆ ಯಶಸ್ವಿಯಾಗಿ ಆಪರೇಷನ್ ಸಿಂದೂರ ನಡೆಸಿದಾಗ ಕೇಂದ್ರ ಸರ್ಕಾರ ಸ್ಪಷ್ಟ ರಾಜಕೀಯ ನಿಲುವು ತಾಳುವಲ್ಲಿ ವಿಫಲವಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಗಂಭೀರತೆ ಇಲ್ಲದ ಕಾರಣದಿಂದ ಸೇನೆಯ ಶೌರ್ಯ ಮತ್ತು ತ್ಯಾಗಕ್ಕೆ ಸರಿಯಾದ ಮಾನ್ಯತೆ ದೊರಕಿಲ್ಲ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಪತ್ರಿಕಾಗೋಷ್ಠಿ ನಡೆಸಿ ಪರಿಸ್ಥಿತಿಯ ಬಗ್ಗೆ ದೇಶ ವಾಸಿಗಳಿಗೆ ವಿವರಣೆ ನೀಡಬೇಕೆಂದು ಆಗ್ರಹಿಸಿದರು.ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಸೀಸ್ ಫೈರ್ ಕುರಿತು ಕೇಂದ್ರ ಸರ್ಕಾರ ಮೌನ ವಹಿಸಿದ್ದು, ದೇಶದ ಪರ ವಾಗಿ ಸ್ಪಷ್ಟವಾದ ರಾಜಕೀಯ ಹೇಳಿಕೆ ನೀಡಬೇಕಿದ್ದ ಸಂದರ್ಭದಲ್ಲಿ ಮೌನ ವಹಿಸಿದೆ. ವಿದೇಶಿ ಒತ್ತಡಕ್ಕೆ ಮಣಿದು ದೇಶದ ಭದ್ರತೆಗೆ ಕುತ್ತು ತಂದಿರುವುದು ಮೋದಿ ಸರ್ಕಾರದ ದೌರ್ಬಲ್ಯ ಎಂದು ಟೀಕಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗೈರು ಹಾಜರಿಯಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಪೆಹಲ್ಗಾಮ್‌ನಲ್ಲಿ ನಡೆದ ದುರಂತಕ್ಕೆ ಬೇಹುಗಾರಿಕೆ ಮತ್ತು ಭದ್ರತಾ ವೈಫಲ್ಯ ಕಾರಣ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿತು ಎಂದರು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಗಂಭೀರ ಭದ್ರತಾ ಪರಿಸ್ಥಿತಿ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಭೆ ಕರೆಯಬೇಕಾಗಿತ್ತು. ಇದು ಕೇವಲ ಸಂವಿಧಾನಿಕ ಶಿಷ್ಟಾಚಾರವಲ್ಲ, ಜವಾಬ್ದಾರಿ ಮತ್ತು ಭದ್ರತೆ ಕುರಿತು ಗಂಭೀರ ಅಭಿಪ್ರಾಯ ವಿನಿಮಯ ಮಾಡಲು ಅಗತ್ಯವಿದ್ದಂತೆ ಪ್ರತಿ ಪಕ್ಷಗಳನ್ನೂ ಒಳಗೊಂಡಿರುವ ಎಲ್ಲಾ ಪಕ್ಷಗಳ ಸಭೆ, ರಾಷ್ಟ್ರದ ಏಕತೆ, ಭದ್ರತೆ, ಮತ್ತು ಸಾಮೂಹಿಕ ಸಮಾಲೋಚನೆಗೆ ಸಾಕ್ಷಿಯಾಗುತ್ತಿತ್ತು. ಆದರೆ ಪ್ರಧಾನಿ ಮೋದಿಯವರು ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರಎಂಬುದನ್ನು ಮರೆತು ಇದನ್ನು ಲಘುವಾಗಿ ತೆಗೆದುಕೊಂಡು, ರಾಜಕೀಯವಾಗಿ ತಾನೊಬ್ಬನೇ ನಿರ್ಧಾರ ಮಾಡುವಂತೆ ನಡೆದುಕೊಂಡಿದ್ದಾರೆ ಎಂದು ಟೀಕಿಸಿದರು.ಇದೇ ಸಮಯದಲ್ಲಿ, ಸಂಸತ್ ಅಧಿವೇಶನವನ್ನೂ ಕರೆದು, ಈ ವಿಚಾರದಲ್ಲಿ ವಿಸ್ತೃತ ಚರ್ಚೆ ನಡೆಯಬೇಕಿತ್ತು. ಇದು ಜನಪ್ರತಿ ನಿಧಿ ಸಂಸ್ಥೆಗಳ ಗೌರವವನ್ನು ಹೆಚ್ಚಿಸುತ್ತಿತ್ತು, ಜನರ ಭರವಸೆಯನ್ನು ಕಟ್ಟಿಕೊಡುತ್ತಿತ್ತು. ರಾಜಕೀಯ ವೈಚಾರಿಕ ಭಿನ್ನತೆಗಳ ಹೊರತಾಗಿ, ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಸಾಮೂಹಿಕ ಸಹಕಾರ, ಸಮಾಲೋಚನೆ, ಪ್ರಾಮಾಣಿಕತೆ ಅಗತ್ಯವಾಗಿವೆ. ಅದಕ್ಕೆ ಪ್ರಧಾನಿ ಮೋದಿಯವರು ಮುನ್ನುಡಿಯಾಗಬೇಕಾಗಿತ್ತು ಎಂದರು.ಆದರೆ, ನಮ್ಮ ಸೈನ್ಯ ಪಾಕಿಸ್ತಾನದ ಸೈನ್ಯವನ್ನು ಹಿಮ್ಮೆಟ್ಟಿಸಿ ಹೋರಾಡುವ ಸಮಯದಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಏಕಾಏಕಿಯಾಗಿ ಕದನ ವಿರಾಮ ಘೋಷಿಸಿದ್ದು ದುರದೃಷ್ಟಕರ ಎಂದರು.ಭಾರತ ಸೇನೆ ಶೌರ್ಯ ಮತ್ತು ತ್ಯಾಗವನ್ನು ಗೌರವದಿಂದ ಸ್ಮರಿಸುತ್ತೇವೆ. ಆಪರೇಷನ್ ಸಿಂದೂರದಲ್ಲಿ ನಮ್ಮ ಯೋಧರು ತೋರಿಸಿದ ಧೈರ್ಯ, ತಾಂತ್ರಿಕ ಚಾತುರ್ಯ ಮತ್ತು ದೇಶಾಭಿಮಾನ ನಿಜಕ್ಕೂ ಅಭಿಮಾನದ ಸಂಗತಿ ಎಂದರು.ಭಾರತದ ಭದ್ರತೆಗೆ ಬೆನ್ನು ತಟ್ಟುವಂತೆ ಕಾರ್ಯನಿರ್ವಹಿಸಿದ ಸೇನೆ, ಉಗ್ರರನ್ನು ನಿಷ್ಪಕ್ಷಪಾತವಾಗಿ ಎದುರಿಸಿ, ದೇಶದ ನಾಗರಿಕರನ್ನು ರಕ್ಷಿಸಿರುವುದು ಅತ್ಯಂತ ಶ್ಲಾಘನೀಯ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಯೋಧರು ದೇಶದ ಹೆಮ್ಮೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಹಾಗೂ ಈ ಅಪೂರ್ವ ಕಾರ್ಯಾಚರಣೆ ಯಶಸ್ಸಿಗೆ ಶ್ಲಾಘಿಸಿದರು.
ಏ. ೨೨ ರಂದು ಪೆಹಲ್ಗಾಮ್‌ನಲ್ಲಿ ನಡೆದ ಆತಂಕವಾದಿ ಕೃತ್ಯದಿಂದ ಸುಮಾರು ೨೬ ಜನರು ಹತ್ಯೆಗೀಡಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿ ಸರ್ವ ಪಕ್ಷ ಸಭೆ ಮತ್ತು ವಿಶೇಷ ಅಧಿವೇಶನ ಕರೆಯಲು ಒತ್ತಾಯಿಸಿದರು ಎಂದು ತಿಳಿಸಿದರು.ನಂತರ ಸರ್ಕಾರ ಪಾಕಿಸ್ತಾನದ ೯ ಉಗ್ರ ನೆಲೆಗಳನ್ನು ದ್ವಂಸ ಮಾಡಿ ಪಾಕಿಸ್ತಾನಕ್ಕೆ ಸಿಂಹ ಸ್ವಪ್ನವಾಯಿತು. ಇಡೀ ದೇಶ ೧೯೭೧ ರಲ್ಲಿ ಇಂದಿರಾಗಾಂಧಿ ಅವರು ಪ್ರಧಾನಮಂತ್ರಿ ಆದ ಸಂದರ್ಭದಲ್ಲಿ ನಮ್ಮ ಸೇನೆ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶವನ್ನು ಎರಡು ತುಂಡುಗಳಾಗಿ ಮಾಡಿ ೯೩ ಸಾವಿರ ಪಾಕಿಸ್ತಾನಿ ಸೈನಿಕರನ್ನು ಭಾರತದ ಸೈನ್ಯದ ಎದುರು ಮಂಡಿ ಯೂರಿ ಶರಣಾಗಿದ್ದನ್ನು ದೇಶ ಸ್ಮರಿಸಿಕೊಳ್ಳುತ್ತದೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ತಾಲೂಕು ಅಧ್ಯಕ್ಷ ಮಲ್ಲೇಶ ಸ್ವಾಮಿ, ನಗರ ಕಾಂಗ್ರೆಸ್ ಅಧ್ಯಕ್ಷ ತನೂಜ್ ಕುಮಾರ್ ನಾಯ್ಡು , ಎನ್‌ಎಸ್‌ಯುಐ ನ ಸುಮಂತ್ ಉಪಸ್ಥಿತರಿದ್ದರು.