ಪ್ರಾಣಿ ಬಲಿಯಿಲ್ಲದೇ ಲಕ್ಕವ್ವದೇವಿ ಜಾತ್ರೆ ಸುಸೂತ್ರ

KannadaprabhaNewsNetwork |  
Published : May 17, 2025, 01:28 AM IST
ಆಸಂಗಿಯಲ್ಲಿ ಪ್ರಾಣಿಬಲಿ ಸ್ಥಳವಾಗಿರುವ ಲಕ್ಕವ್ವದೇವಿ ಪಾದಗಟ್ಟೆ ಸುತ್ತಲೂ ಪೊಲೀಸ್ ಸರ್ಪಗಾವಲು. | Kannada Prabha

ಸಾರಾಂಶ

ತಾಲೂಕಿನ ಆಸಂಗಿ ಗ್ರಾಮದೇವತೆ ಲಕ್ಕವ್ವದೇವಿ ಜಾತ್ರೆಯು ಈ ಹಿಂದಿನಂತೆ ಪ್ರಾಣಿ ಬಲಿ ನಡೆಯದೆ ಪೊಲೀಸ್‌ ಸರ್ಪಗಾವಲಿನಲ್ಲಿ ಶಾಂತ ರೀತಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನ ಆಸಂಗಿ ಗ್ರಾಮದೇವತೆ ಲಕ್ಕವ್ವದೇವಿ ಜಾತ್ರೆಯು ಈ ಹಿಂದಿನಂತೆ ಪ್ರಾಣಿ ಬಲಿ ನಡೆಯದೆ ಪೊಲೀಸ್‌ ಸರ್ಪಗಾವಲಿನಲ್ಲಿ ಶಾಂತ ರೀತಿಯಾಗಿ ಶುಕ್ರವಾರ ನಡೆಯಿತು.

ಪ್ರತಿ ವರ್ಷ ಗ್ರಾಮದ ಹೃದಯ ಭಾಗದಲ್ಲಿ ಲಕ್ಕವ್ವದೇವಿ ಜಾತ್ರೆ ನಡೆಯುತ್ತದೆ. ಪುರಾತನ ಕಾಲದಿಂದಲೂ ದೇವಿ ಜಾತ್ರೆ ಸಂದರ್ಭದಲ್ಲಿ ಭಕ್ತರು ದೇವಾಲಯ ಮುಂಭಾಗದ ಪಾದಗಟ್ಟೆ ಆವರಣದಲ್ಲಿ ಹರಕೆ ತೀರಿಸಲು ಪ್ರಾಣಿ ಬಲಿ ನೀಡುವುದು ಇಲ್ಲಿನ ರೂಢಿಯಾಗಿತ್ತು. ಸಾವಿರಾರು ಟಗರು, ಹೋತ, ಕೋಳಿ ಬಲಿ ನೀಡಲಾಗುತ್ತಿತ್ತು. ಆದರೆ ಪ್ರತಿ ಸಲ ನಡೆಯುತ್ತಿದ್ದ ಪ್ರಾಣಿ ಬಲಿಗೆ ಈ ಬಾರಿ, ನೂತನವಾಗಿ ನಿರ್ಮಾಣಗೊಂಡಿರುವ ಜೈನ ಬಸದಿ ಸಮುದಾಯದ ಭವನ ಕಾರಣವಾಗಿ, ದಿವಾಣಿ ವ್ಯಾಜ್ಯದ ಪ್ರದೇಶದಲ್ಲಿ ಪ್ರಾಣಿ ಬಲಿ ಮಾಡಲು ಅವಕಾಶ ನೀಡಬಾರದೆಂದು ಸಮುದಾಯದವರು ತಿಳಿಸಿದ್ದರು. ಕಳೆದೊಂದು ತಿಂಗಳಿಂದ ಧಾರ್ಮಿಕತೆಗೆ ಧಕ್ಕೆ ಬರುವ ನಿಟ್ಟಿನಲ್ಲಿ ಪೊಲೀಸರ ಮಧ್ಯಸ್ಥಿಕೆಯಲ್ಲಿ ಸಂಧಾನಗಳು ನಡೆದರೂ ವಿಫಲಗೊಂಡಿದ್ದವು. ಕಾರಣ ಈ ಬಾರಿ ಪೊಲೀಸರ ಹದ್ದಿನ ಕಣ್ಣು ಜಾತ್ರೆ ಮೇಲಿತ್ತು.

ಪೊಲೀಸ್ ಸರ್ಪಗಾವಲು:

ಜಾತ್ರೆಯಲ್ಲಿ ೫೦ ಸಾವಿರಕ್ಕೂ ಅಧಿಕ ಜನರು ಭಾಗಿಯಾಗುವ ಮೂಲಕ ಸಾವಿರಾರು ಟಗರುಗಳನ್ನು ಬಲಿ ನೀಡಲಾಗುತ್ತದೆ ಎಂಬ ಮಾಹಿತಿಯನ್ವಯ, ಅಲ್ಲದೆ ಈಗಾಗಲೇ ಗ್ರಾಮದಲ್ಲಿ ಕೊಂಚ ವಿಷಮ ಪರಿಸ್ಥಿತಿ ಎದುರಾಗಿದ್ದರಿಂದ ೭೫ ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಜಾತ್ರೆಗೆ ನಿಯೋಜಿಸಲಾಗಿತ್ತು.

ದೇವಾಲಯದ ಪಾದಗಟ್ಟೆ ಆವರಣದಲ್ಲಿ ಪ್ರಾಣಿ ಬಲಿ ತಡೆಯಲು ಸಿ.ಸಿ.ಕ್ಯಾಮೆರಾ ಅಳವಡಿಕೆ ಮೂಲಕ ಪೊಲೀಸ್ ಸರ್ಪಗಾವಲು ರೂಪಿಸಲಾಗಿತ್ತು.

ಭಕ್ತರ ಆಕ್ರೋಶ:

ದೇವರ ಹರಕೆ ತೀರಿಸಲು ೫ ದಿನದಿಂದ ಮೀಸಲು ಹಾಕಿದ್ದ ಹೈನದಲ್ಲಿ ಅನ್ನ ಕಲಿಸಿಕೊಂಡು ಹೊಸ ಮಡಕೆಯೊಳಗೆ ತಂದೀವಿ. ಇಲ್ಲಿ ನೋಡಿದ್ರ ಪೊಲೀಸ್ರು ಒಂದು ಟಗರನ್ನೂ ಗುಡಿಯತ್ತ ಬಿಡುತ್ತಿಲ್ಲ. ನಮ್ಮ ಹರಕೆ ಪೂರ್ಣ ಆಗಂಗಿಲ್ಲ. ನಮಗೆ ಕಿರಿಕಿರಿ ಮಾಡುವವರಿಗೆ ಆ ದೇವತೆ ನೋಡಿಕೊಳ್ಳುತ್ತಾಳೆಂದು ಮಹಿಳಾ ಭಕ್ತರು ಹಿಡಿಶಾಪ ಹಾಕುತ್ತಿರುವುದು ಎಲ್ಲ ಕಡೆ ಕೇಳಿ ಬರುತ್ತಿತ್ತು. ಶುಕ್ರವಾರ ಸಂಜೆವರೆಗೂ ಪೊಲೀಸ್‌ ಬಿಗಿ ಬಂದೋಬಸ್ತ್ ಇತ್ತು. ಸಂಜೆ ಹೊತ್ತು ಹರಕೆ ತೀರಿಸುವ ಭಕ್ತರು ತಮ್ಮ ತಮ್ಮ ಮನೆಯೊಳಗೆ ಗುಟ್ಟಾಗಿ ಹರಕೆ ತೀರಿಸಲು ಮುಂದಾದರು.

ಬಹಳ ವರ್ಷಗಳಿಂದ ಈ ಸಂಪ್ರದಾಯ ನಡೆದಿದೆ. ಇದ್ದಕ್ಕಿದ್ದಂತೆ ತಡೆದರೆ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಜಾತ್ರೆ ಹೊರತುಪಡಿಸಿ ಉಳಿದ ದಿನಗಳಲ್ಲಿ ದೇವಾಲಯ ಬಲಿ ಪ್ರಾಣಿ ಬಲಿ ನಡೆಯುವುದಿಲ್ಲ. ಧಾರ್ಮಿಕ ಕಾರ್ಯಕ್ರಮಕ್ಕೆ ಸರ್ಕಾರ ಅವಕಾಶ ನೀಡಬೇಕು ಎಂದು ಹರ್ಷವರ್ಧನ ಪಟವರ್ಧನ ಆಸಂಗಿ ಮುಖಂಡರು ಹೇಳಿದರು.ದಿವಾಣಿ ವ್ಯಾಜ್ಯ ಕಾರಣ ಹಿನ್ನೆಲೆಯಲ್ಲಿ ಜಾತ್ರೆ ಸಂದರ್ಭ ದೇವಾಲಯ ಸುತ್ತಲಿನ ಪ್ರದೇಶದಲ್ಲಿ ಪ್ರಾಣಿಬಲಿಯಾಗುವುದನ್ನು ತಡೆಯಲಾಗಿದೆ ಎಂದು ಪಿಎಸ್‌ಐ ಶಾಂತಾ ಹಳ್ಳಿ ತಿಳಿಸಿದರು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ