‘ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಎಲ್ಲವೂ ಸಾಧ್ಯ. ಧೈರ್ಯ ಹೊಂದಿರುವ ವ್ಯಕ್ತಿ ಒಬ್ಬನೇ ಬಹುಮತ ಸೃಷ್ಟಿಸಬಲ್ಲ ಎಂಬುದನ್ನು ನಾನು ನಂಬಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ವಿಧಾನಸಭೆ

‘ರಾಜಕೀಯ ಎಂಬುದು ಸಾಧ್ಯತೆಗಳ ಕಲೆ. ಇಲ್ಲಿ ಎಲ್ಲವೂ ಸಾಧ್ಯ. ಧೈರ್ಯ ಹೊಂದಿರುವ ವ್ಯಕ್ತಿ ಒಬ್ಬನೇ ಬಹುಮತ ಸೃಷ್ಟಿಸಬಲ್ಲ ಎಂಬುದನ್ನು ನಾನು ನಂಬಿದ್ದೇನೆ. ದೃಢವಾದ ನಿಲುವು, ಸಂಕಲ್ಪ ಹಾಗೂ ಧ್ಯೇಯ ಹೊಂದಿದ್ದರೆ ಆತನ ಜತೆ 140 ಜನರೂ ಇರುತ್ತಾರೆ, ಅದಕ್ಕಿಂತಲೂ ಜಾಸ್ತಿಯೂ ಬರುತ್ತಾರೆ. 2028ರಲ್ಲಿ ನೋಡೋಣ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸುವಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಧಿಕಾರ ಹಂಚಿಕೆ ಕುರಿತು ಸ್ಪಷ್ಟತೆಗೆ ಒತ್ತಾಯಿಸಿದ್ದಕ್ಕೆ ಶಿವಕುಮಾರ್‌ ನೀಡಿದ ಪ್ರತ್ಯುತ್ತರವಿದು.ಆರ್. ಅಶೋಕ್‌ ಮಾತನಾಡಿ, ‘ಕಳೆದ ಒಂದು ತಿಂಗಳಿಂದ ಡಿ.ಕೆ. ಶಿವಕುಮಾರ್ ಅವರ ಮಾತು, ಟ್ವೀಟ್‌ ಹತ್ತಾರು ಅರ್ಥ ಬರುವಂತಿದೆ. ಇದಕ್ಕೆ ಶಿವಕುಮಾರ್‌ ಅವರು ಸ್ಪಷ್ಟನೆ ಕೊಡಬೇಕು’ ಎಂದು ಹೇಳಿದರು.

ಇದಕ್ಕೆ ಡಿ.ಕೆ. ಶಿವಕುಮಾರ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ 139 ಶಾಸಕರೂ ನನ್ನ ಬಲ. ಸಿದ್ದರಾಮಯ್ಯ ಅವರು 100% ನನ್ನ ಜತೆಗಿದ್ದಾರೆ. ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ಪರಸ್ಪರ ಕೈಜೋಡಿಸಿ, ಜತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ, ಮುಂದೆಯೂ ಕೆಲಸ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಅವರ ಕಷ್ಟಕಾಲದಲ್ಲಿ ನಾನು ನಿಂತಿದ್ದೇನೆ, ಮುಂದೆಯೂ ನಿಲ್ಲುತ್ತೇನೆ. ಅವರು ಕೂಡ ಕಷ್ಟ ಕಾಲದಲ್ಲಿ ನನ್ನ ಜತೆ ನಿಲ್ಲಲಿದ್ದಾರೆ’ ಎಂದು ಹೇಳಿದರು.

ಸಂಖ್ಯಾಬಲಕ್ಕಿಂತ ಪಕ್ಷದ ತೀರ್ಮಾನ ಅಂತಿಮ:

‘ನಮ್ಮ ಪಕ್ಷದಲ್ಲಿ ಹಾಗೂ ನಿಮ್ಮ (ಬಿಜೆಪಿ) ಪಕ್ಷದಲ್ಲಿ ಸಂಖ್ಯಾಬಲಕ್ಕಿಂತ ಪಕ್ಷವೇ ತೀರ್ಮಾನ ಮಾಡುತ್ತದೆ. ನಿಮ್ಮ ಸರ್ಕಾರದಲ್ಲಿ ಎಷ್ಟೋ ಮುಖ್ಯಮಂತ್ರಿಗಳು ಬದಲಾದರು, ಸಚಿವ ಸಂಪುಟಗಳೇ ಬದಲಾದವು. ಪಾಲಿಟಿಕ್ಸ್‌ ಈಸ್ ಆರ್ಟ್‌ ಆಫ್‌ ಪಾಸಿಬಿಲಿಟೀಸ್‌. ನಾನು ನಂಬಿರುವುದು ‘ಒನ್‌ ಮ್ಯಾನ್‌ ವಿತ್‌ ಕರೇಜ್‌ ಮೇಕ್ಸ್‌ ಮೆಜಾರಿಟಿ. ದೃಢವಾದ ನಿಲುವು, ಸಂಕಲ್ಪ, ಧ್ಯೇಯ ಇದ್ದರೆ 140 ಜನರೂ ಇರುತ್ತಾರೆ, ಅದಕ್ಕಿಂತ ಜಾಸ್ತಿಯೂ ಆಗುತ್ತಾರೆ. 2028ಕ್ಕೆ ನೋಡೋಣ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಇದೇ ವೇಳೆ ಟ್ವೀಟ್‌ಗಳನ್ನು ಕಚೇರಿಗಳು ಮಾಡುತ್ತವೆ. ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಮಾತಿಗೆ ನಾನು ಜಗ್ಗುವುದಿಲ್ಲ, ನೀವು ಸುಮ್ಮನೇ ತಲೆಕೆಡಿಸಿಕೊಳ್ಳಬೇಡಿ ಎಂದರು.

ಚರ್ಚೆ ಶುರುವಾಗಿದ್ದು ಹೇಗೆ?ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿವಿಧ ರಾಜ್ಯಗಳಲ್ಲಿನ ಬಿಯರ್‌ ಬೆಲೆಗಳ ಬಗ್ಗೆ ಹೇಳುತ್ತಾ ಪಕ್ಕದಲ್ಲಿದ್ದ ಡಿ.ಕೆ. ಶಿವಕುಮಾರ್‌ ಅವರನ್ನು ಕರೆದು, ‘ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಹಾಲಾಹಲ ಇದ್ದಂತೆ ಎನ್ನುತ್ತಿದ್ದಾರೆ (ವಿಪಕ್ಷದವರು)’ ಎಂದು ದೂರು ಹೇಳಿದರು.

ಇದಕ್ಕೆ ಡಿ.ಕೆ. ಶಿವಕುಮಾರ್‌, ‘ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಬಿಡಿ’ ಎಂದು ಹೇಳಿ ಸುಮ್ಮನಾದರು.

ಆಗ ಆರ್. ಅಶೋಕ್‌, ‘ನೋಡಿ ಕಾಲವೇ ಉತ್ತರ ಕೊಡುತ್ತದೆ ಎಂದರೆ ಅರ್ಥವೇನು? ಇದರಲ್ಲಿ ಹತ್ತು ರೀತಿ ಅರ್ಥ ಮಾಡಿಕೊಳ್ಳಬಹುದು. ಆ ಕಾಲ ಯಾವಾಗ ಬರುತ್ತೆ, ಸ್ಪಷ್ಟನೆ ಕೊಡಿ’ ಎಂದು ಹೇಳಿದಾಗ ಡಿ.ಕೆ. ಶಿವಕುಮಾರ್‌ ಉತ್ತರ ನೀಡಿದರು.

ಬಾಕ್ಸ್...

ಯಾರು ಯಾರ ಕಡೆ ಇದ್ದಾರೆ?: ಅಶೋಕ್‌

‘ನನಗೆ ಯಾರೋ ಡಿ.ಕೆ. ಶಿವಕುಮಾರ್‌ ಕಡೆ 56 ಮಂದಿ ಶಾಸಕರಿದ್ದಾರೆ ಎಂದು ಹೇಳಿದರು. ಮುಖ್ಯಮಂತ್ರಿ ಅವರ ಕಡೆಯವರನ್ನು ಕೇಳಿದರೆ ಅವರೆಲ್ಲಾ ಬೆಳಗ್ಗೆ ಇಲ್ಲಿಗೆ ಬಂದು ಸಂಜೆ ಅಲ್ಲಿಗೆ ಹೋಗುತ್ತಾರೆ ಎನ್ನುತ್ತಾರೆ. ಯಾರು ಯಾವ ಕಡೆ ಇದ್ದಾರೆ ಎಂದು ಗೊತ್ತಿಲ್ಲ’ ಎಂದು ಆರ್‌. ಅಶೋಕ್‌ ಹೇಳಿದರು.

ಆಗ ಎದ್ದು ನಿಂತಿದ್ದ ಸಚಿವ ಸಂತೋಷ್ ಲಾಡ್ ಕಡೆಗೆ ಕೈ ತೋರಿಸಿ, ‘ಇಂಥಹವರಿಂದಲೇ ಎಲ್ಲವೂ ಆಗಿದ್ದು. ಸಂತೋಷ್‌ ಲಾಡ್‌ ಅವರದ್ದೂ ಇದೇ ಕೆಟಗರಿ’ ಎಂದರು.

ಇದಕ್ಕೆ ತಿರುಗೇಟು ನೀಡಿದ ಸಂತೋಷ್ ಲಾಡ್‌, ‘ತಂದಿಕ್ಕುವ ಕೆಲಸ ಮಾಡಬೇಡಿ. ನಮ್ಮ ಚಾರಿತ್ರ್ಯಹರಣ ಮಾಡಬೇಡಿ. ಬೆಳಗ್ಗೆ, ರಾತ್ರಿ ವ್ಯವಸ್ಥೆಗಳಲ್ಲಿ ನಾವು ಇಲ್ಲ. ಇನ್ನೊಮ್ಮೆ ಇಂತಹ ಮಾತು ಮಾತನಾಡಬೇಡಿ’ ಎಂದು ಎಚ್ಚರಿಸಿದರು.