ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ
ರಾಜ್ಯ ಸರ್ಕಾರಿ ನೌಕರರಿಗೆ 2026-27 ಅಂತ್ಯದೊಳಗೆ ಕೇಂದ್ರ ವೇತನ ಜಾರಿಗೆ ತರಲು ಸಂಘ ಬದ್ಧವಾಗಿದ್ದು, ಹಬ್ಬದ ಮುಂಗಡವನ್ನು ₹25 ಸಾವಿರದಿಂದ 50 ಸಾವಿರ ತನಕ ಹೆಚ್ಚಳ, ಎನ್‌ಪಿಎಸ್ ಬದಲಾಗಿ ಒಪಿಎಸ್ ಜಾರಿಗೆ ತರುವ ಬಗ್ಗೆ ಸಂಘ ಸತತವಾಗಿ ಪ್ರಯತ್ನಿಸುತ್ತಿದ್ದು, ರಾಜ್ಯದ ನೌಕರರು ನೆಮ್ಮದಿಯಂದ ಇರುವಂತೆ ಮಾಡುವುದು
ಸಂಘದ ಕರ್ತವ್ಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.ಶನಿವಾರ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉತ್ತರ ಕನ್ನಡ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರು ಕರ್ತವ್ಯದಲ್ಲಿರುವಾಗ ಮರಣ ಹೊಂದಿದರೆ ₹1 ಕೋಟಿ ವಿಮೆ ದೊರೆಯುವ ಸ್ಯಾಲರಿ ಪ್ಯಾಕೇಜ್ ಜಾರಿಗೆ ತರಲಾಗಿದೆ. ಆರೋಗ್ಯ ಸಂಜೀವಿನಿ ಯೋಜನೆ ಅ. 1ರಿಂದ ಜಾರಿಗೆ ತರಲಾಗಿದ್ದು, ಮೊದಲ ಹಂತದಲ್ಲಿ ಒಳರೋಗಿಗಳಾಗಿ ಹಾಗೂ ಮುಂದಿನ ದಿನಗಳಲ್ಲಿ ಹೊರ ರೋಗಿ ಸೌಲಭ್ಯ ಪಡೆಯಲು ಕ್ರಮವಹಿಸಲಾಗಿದೆ. ಮಹಿಳಾ ನೌಕರರು ತಮ್ಮ ತಂದೆ-ತಾಯಿಗಳನ್ನು ಈ ಯೋಜನೆಗೆ ಸೇರಿಸಲು ಅವಕಾಶ ನೀಡಲಾಗಿದ್ದು, ಈ ಯೋಜನೆಯ ಬಗ್ಗೆ ಯಾವುದೇ ಗೊಂದಲ ಬೇಡ ಎಂದರು.
ರಾಜ್ಯ ನೌಕರರ ಸಂಘದ ರಾಜ್ಯ ಸಂಘಟನೆಯಲ್ಲಿ, ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ನೌಕರರ ಬಗ್ಗೆ ಕಳಕಳಿ, ಅಭಿಮಾನ ಇರುವ ಶಾಖೆ ಎಂದರೆ ಉತ್ತರ ಕನ್ನಡ ಜಿಲ್ಲೆ ಎಂಬುದು ಹೆಮ್ಮೆಯ ವಿಷಯ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಗೌಡ ಎಚ್., ಗೌರವಾಧ್ಯಕ್ಷ ಎಸ್. ಬಸವರಾಜು, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ. ಬಳ್ಳಾರಿ, ಹಿರಿಯ ಉಪಾಧ್ಯಕ್ಷ ಆರ್. ಮೋಹನಕುಮಾರ್, ಉಪಾಧ್ಯಕ್ಷ ಸದಾನಂದ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವ್ ಕುಮಾರ್ ಎಸ್. ನಾಯ್ಕ, ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಧ್ಯಕ್ಷ ಕಿರಣಕುಮಾರ ಎಚ್. ನಾಯಕ್ ಮತ್ತಿತರರು ಇದ್ದರು.