9 ಜಿಲ್ಲೆಗಳನ್ನು ಒಳಗೊಂಡ ಕೈಗಾರಿಕೆ ಕಾರಿಡಾರ್‌ಗೆ ಕೇಂದ್ರದಿಂದ ಒಲವು

KannadaprabhaNewsNetwork |  
Published : Nov 27, 2025, 02:00 AM IST
HD Kumaraswamy

ಸಾರಾಂಶ

ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರಿಂದ ಪ್ರಸ್ತಾಪಿತ ಕರ್ನಾಟಕದ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.

  ನವದೆಹಲಿ :  ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರಿಂದ ಪ್ರಸ್ತಾಪಿತ ಕರ್ನಾಟಕದ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಕರ್ನಾಟಕದ ಕೈಗಾರಿಕೆ ಹಾಗೂ ಸಾಗಣೆ ಕ್ಷೇತ್ರಗಳಿಗೆ ಪರಿವರ್ತನಾತ್ಮಕ ಕಾಯಕಲ್ಪ ನೀಡುವ ಈ ಯೋಜನೆಗೆ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು; ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂಬತ್ತು ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವ ಬಗ್ಗೆ ಒಲವು ತೋರಿದ್ದು, ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಮಾತುಕತೆ

2025 ನ.13ರಂದು ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿದ್ದ ಸಚಿವ ಕುಮಾರಸ್ವಾಮಿ ಅವರು, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನು ಒಳಗೊಂಡ ಸುವಿಶಾಲವಾದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP) ಅನುಷ್ಠಾನ ಮಾಡಬೇಕೆಂದು ಕೋರಿ ಮನವಿಯನ್ನು ಸಲ್ಲಿಸಿ ಮಾತುಕತೆ ನಡೆಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರ ದೃಢ ಸಂಕಲ್ಪದಂತೆ ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆಯನ್ನು ಬಲಪಡಿಸಿ ಉತ್ತೇಜಿಸಲು, ಸಾಗಾಣಿಕೆಯ ಮೂಲಸೌಕರ್ಯವನ್ನು ಅಧಿಕವಾಗಿ ಅಭಿವೃದ್ಧಿಪಡಿಸಲು ಹಾಗೂ ಕರ್ನಾಟಕದ ಉದ್ದಗಲಕ್ಕೂ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಈ ಯೋಜನೆಯು ಬಹುದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತದೆ ಎಂಬ ಅಂಶವನ್ನು ಸಚಿವ ಗೋಯಲ್ ಅವರ ಜತೆ ಕುಮಾರಸ್ವಾಮಿ ಅವರು ಚರ್ಚಿಸಿದ್ದರು.

 ವಿಕಸಿತ ಭಾರತಕ್ಕೆ ಪೂರಕ

ಸಚಿವ ಗೋಯಲ್‌ ಅವರೊಂದಿಗಿನ ಚರ್ಚೆ ಉತ್ತಮವಾಗಿತ್ತು. ಅವರು ಈ ಪ್ರಸ್ತಾವನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಸಾಕಾರಕ್ಕೆ ಈ ಯೋಜನೆ ಪೂರಕವಾಗಿದೆ. ಉತ್ಪಾದನೆ ಮತ್ತು ಕೈಗಾರಿಕಾ ಸ್ಪರ್ಧಾತ್ಮಕತೆಯನ್ನು ಬಲಪಡಿಸುವ ಕೇಂದ್ರ ಸರ್ಕಾರದ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಉಪಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.

-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ