ಗ್ರಾಪಂ ಕಾಮಗಾರಿಗಳ ಪರಿಶೀಲನೆಗಿಳಿದ ಸಿಇಒ

KannadaprabhaNewsNetwork | Published : Feb 26, 2024 1:30 AM

ಸಾರಾಂಶ

ವಿಜಯಪುರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಷಿ ಆನಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಮಗಾರಿಗಳ ಪರಿಶೀಲನೆಗೆ ಇಳಿದಿದ್ದಾರೆ. ಶನಿವಾರ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ, ಸಾತಿಹಾಳ, ಕೋರವಾರ ಗ್ರಾಮ ಪಂಚಾಯತಿಗಳಿಗೆ ತೆರಳಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಷಿ ಆನಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಮಗಾರಿಗಳ ಪರಿಶೀಲನೆಗೆ ಇಳಿದಿದ್ದಾರೆ. ಶನಿವಾರ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ, ಸಾತಿಹಾಳ, ಕೋರವಾರ ಗ್ರಾಮ ಪಂಚಾಯತಿಗಳಿಗೆ ತೆರಳಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಮಾರ್ಕಬ್ಬಿನಹಳ್ಳಿ ಗ್ರಾಪಂನ ರಸ್ತೆ ಬದಿಯಲ್ಲಿ ನಡೆಯುತ್ತಿರುವ ಸಾಮಾಜಿಕ ಅರಣ್ಯ ಕಾಮಗಾರಿ ವೀಕ್ಷಿಸಿದ್ದು, ಬೇಸಿಗೆ ಸಮಯದಲ್ಲಿ ಸಸಿಗಳಿಗೆ ನೀರಿನ ವ್ಯವಸ್ಥೆ ಮಾಡುವ ಮೂಲಕ ಸಸಿಗಳು ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಜಿ.ಬಿ.ರಾಮಗಿರಿಮಠ ಬೀಟ್ ಫಾರೆಸ್ಟ್ ಸಿಬ್ಬಂದಿಗೆ ಸೂಚಿಸಿದರು. ಈ ವರ್ಷ 29 ಸಾವಿರ ಸಸಿ ನೆಡುವ ಗುರಿ ಹೊಂದಿದ್ದು, ಪೂರ್ಣಗೊಳಿಸಲು ತಿಳಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದು, ಮಕ್ಕಳ ದಾಖಲಾತಿ, ಪೌಷ್ಟಿಕ ಆಹಾರ ಮತ್ತು ಶೌಚಾಲಯ ವ್ಯವಸ್ಥೆ ಕುರಿತು ಪರಿಸೀಲಿಸಿದರು. ಮಕ್ಕಳಿಗಾಗಿ ತಯಾರಿಸಿದ ಆಹಾರವನ್ನು ಖುದ್ದು ತಾವೇ ಸೇವಿಸಿ ಪರೀಕ್ಷಿಸಿದರು.

ಸಾತಿಹಾಳ ಗ್ರಾಪಂ ವ್ಯಾಪ್ತಿಯ ಬೈರವಾಡ ಗ್ರಾಮದ ಅಮೃತ್ ಸರೋವರಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.

ಅಮೃತ್ ಸರೋವರ ಯೋಜನೆಯು ಬೇಸಿಗೆ ಸಮಯದಲ್ಲಿ ಗ್ರಾಮದ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಒದಗಿಸುವುದು ಮುಖ್ಯ. ಆದ್ದರಿಂದ ಅಮೃತ ಸರೋವರ ಯೋಜನೆ ನೀರು ಕಲುಷಿತವಾಗದಂತೆ ಸುತ್ತಲಿನ ಆವರಣವನ್ನು ಸ್ವಚ್ಛವಾಗಿಡುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋರವಾರ ಗ್ರಾಪಂ ವ್ಯಾಪ್ತಿಯ ಜಲಧಾರೆ ಯೋಜನೆಯ ಕೋರವಾರ ಸ್ಟಾಕ್ ಯಾರ್ಡ್ ಕಾಮಗಾರಿ ವೀಕ್ಷಿಸಿ ಮುದ್ದೇಬಿಹಾಳ, ದೇವರಹಿಪ್ಪರಗಿ, ಸಿಂದಗಿ ತಾಲೂಕಿಗೆ ಕುಡಿಯುವ ನೀರಿನ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಎಂಜಿನೀಯರ್ ಮಂಜುನಾಥ ಸ್ವಾಮಿಗೆ ತಿಳಿಸಿದರು.

ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ರಾಮು.ಜಿ.ಅಗ್ನಿ, ಫರಿದಾ ಪಠಾಣ, ಶಾಂತಗೌಡ ನ್ಯಾಮಣ್ಣವರ, ಸಹಾಯಕ ನಿರ್ದೇಶಕರು ಶಿವಾನಂದ ಮೂಲಿಮನಿ, ಮಾರ್ಕಬ್ಬಿನಹಳ್ಳಿ ಗ್ರಾಪಂ ಪಿಡಿಒ ಎಂ.ಎನ್.ಕತ್ತಿ, ವಲಯ ಅರಣ್ಯ ಅಧಿಕಾರಿ ಎಂ.ವೈ.ಮಲ್ಕಣ್ಣವರ, ತಾಂತ್ರಿಕ ಸಂಯೋಜಕ ಶರಣಗೌಡ ಪಾಟೀಲ, ಸೋಹೇಬ್ ಮಾರಡಗಿ, ಅರ್ಷದ್ ಕೊಟ್ನಾಳ, ಮುರುಗೇಶ್ ಕಟ್ಟಿ, ಲಾಲಸಾಬ ವಾಲೀಕಾರ, ದಾವಲಸಾಬ ಮುಜಾವರ, ಐಇಸಿ ಸಂಯೋಜಕ ಸಿದ್ದು ಕಾಂಬಳೆ ಇದ್ದರು. ಅಧಿಕಾರಿಗಳ ತರಾಟೆ

ಅಂಗನವಾಡಿ ಕೇಂದ್ರ ಮೇಲ್ಚಾವಣಿ ದುರಸ್ತಿ ಇದೆ. ಅದನ್ನು ಯಾಕೆ ದುರಸ್ತಿ ಮಾಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿ ಕಟ್ಟಡ ಮೇಲ್ಚಾವಣಿ ದುರಸ್ತಿ ಮಾಡುವಂತೆ ಮತ್ತು ಶಾಲಾ ಕೊಠಡಿಯಲ್ಲಿ ಟ್ಯೂಬ್ ಲೈಟ್, ಪ್ಯಾನ್ ವ್ಯವಸ್ಥೆ ಮಾಡಲು ಮುಖ್ಯ ಶಿಕ್ಷಕ ಎಚ್.ಎಸ್.ತಳವಾರ ಸೂಚಿಸಿದರು. ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಮಾಡಿ ಎಂದು ಗ್ರಾಪಂ ಪಿಡಿಒ ಎಂ.ಎನ್.ಕತ್ತಿ ಖಡಕ್ ಸೂಚನೆ ನೀಡಿದ್ದಾರೆ.

Share this article