ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಮತ್ತು ಬಾದಾಮಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿ, ಶಾಲೆ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಮಂಗಳವಾರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಗುಳೇದಗುಡ್ಡ ತಾಲೂಕಿನ ಹಂಗರಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ್ದ ಸಿಇಒ ಸಂಜೀವಿನಿ ಶೆಡ್ ಪರಿಶೀಲನೆ ನಡೆಸಿದರು. ಬಳಿಕ, ಕೋಟೆಕಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಜೀವಿನಿ ಶೆಡ್, ಗ್ರಂಥಾಲಯ, ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ, ಕೂಸಿನ ಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ, ಹಾನಾಪೂರ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಲ್ಲಿ ಕರ ವಸೂಲಿ, ಇ-ಹಾಜರಾತಿ ಪುಸ್ತಕ ಪರಿಶೀಲಿಸಿದರು. ಶಾಲೆಗೆ ಭೇಟಿ ನೀಡಿದ್ದು, ಶಾಲೆಯ ಆಟದ ಮೈದಾನ, ಶೌಚಾಲಯ ವೀಕ್ಷಿಸಿ ಹಾನಾಪೂರ ಎಸ್.ಪಿ.ತಾಂಡಾದ ಪ್ರೌಢಶಾಲೆಯ ಮಕ್ಕಳೊಂದಿಗೆ ಸಂವಾದವನ್ನು ನಡೆಸಿದರು.
ಗ್ರಾಮ ಪಂಚಾಯತಿ ನಂದಿಕೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗೆ ನೀಡುವ ಚಿಕಿತ್ಸೆ, ಔಷಧಿ ವಿತರಣೆ ಬಗ್ಗೆ ಹಾಗೂ ಸಂಜೀವಿನಿ ಶೆಡ್ ಪರಿಶೀಲಿಸಿ ನಂತರ ಮಂಗಳೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಾಲಾ ಕಂಪೌಂಡ್‌ನ್ನು ಪರಿಶೀಲಿಸಿದರು. ಇದೇ ವೇಳೆ ಹೊಸೂರ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಿಇಒ ಕುರೇರ ಅವರು, ಕೂಲಿಕಾರ್ಮಿಕರಿಗೆ ನೀಡುವ ಕೆಲಸದ ಪ್ರಮಾಣ, ಅವಧಿ, ಮೂಲಭೂತ ಸೌಲಭ್ಯಗಳ ನೀಡುತ್ತಿರುವ ಬಗ್ಗೆ ವಿಚಾರಿಸಿದರು.ಬೇಲೂರಗೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಪ್ರೊಫೈಲ್ ಅಪಡೇಷನ್, ಕರ ವಸೂಲಿ, ಇ-ಹಾಜರಾತಿ ಪರಿಶೀಲಿಸಿದರು. ನಂತರ ಬಾದಾಮಿಯ ಸಾರ್ವಜನಿಕ ಆಸ್ಪತ್ರೆ ಭೇಟಿ ನೀಡಿ ಸಿಬ್ಬಂದಿಯ ಹಾಜರಾತಿ, ರೋಗಿಗಳ ನೋಂದಣಿ ಕೌಂಟರ್ ಹಾಗೂ ಔಷಧ ದಾಸ್ತಾನುಗಳನ್ನು ಪರಿಶೀಲಿಸಿ ಮಾಹಿತಿ ಪಡೆದರು. ಇದೇ ವೇಳೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವಂತೆ ಆಸ್ಪತ್ರೆಯ ಸಿಬ್ಬಂದಿಗೆ ಸೂಚನೆಗಳನ್ನು ನೀಡಿದರು.
ಭೇಟಿ ಸಮಯದಲ್ಲಿ ಗುಳೇದಗುಡ್ಡ ಮತ್ತು ಬಾದಾಮಿ ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ ಸೇರಿದಂತೆ ತಾಪಂ ಸಹಾಯಕ ನಿರ್ದೇಶಕ ಸತೀಶ ಮಾಗೋಂಡ, ರಾಮಚಂದ್ರ ಮೈತ್ರಿ ಸೇರಿದಂತೆ ತಾಲೂಕ ಆರೋಗ್ಯಾಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ಐ.ಇ.ಸಿ. ಸಂಯೋಜಕರು, ತಾಂತ್ರಿಕ ಸಹಾಯಕ ಅಭಿಯಂತರರು ಇದ್ದರು.