ಅಂಗವಿಕಲರಲ್ಲದವರಿಗೂ ಸರ್ಟಿಫಿಕೆಟ್: ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Aug 29, 2024, 12:59 AM IST
ಮ | Kannada Prabha

ಸಾರಾಂಶ

ಬ್ಯಾಡಗಿ ತಾಲೂಕಿನಲ್ಲಿ ಸುಳ್ಳು ಪ್ರಮಾಣಪತ್ರದ ಹಾವಳಿ ಮೀತಿಮೀರಿ ನಡೆಯುತ್ತಿದೆ, ದುಡ್ಡು ಕೊಟ್ಟರೆ ಸಾಕು ಸಾರ್ವಜನಿಕ ಆಸ್ಪತ್ರೆ ವೈದ್ಯರು ಎಲ್ಲ ನ್ಯೂನತೆಗಳಿವೆ ಎಂದು ಸರ್ಟಿಫಿಕೆಟ್‌ ನೀಡುತ್ತಿದ್ದಾರೆ ಎಂದು ವಿಶೇಷ ಚೇತನರ ಸಂಘದ ತಾಲೂಕಾಧ್ಯಕ್ಷ ಪಾಂಡುರಂಗ ಸುತಾರ ಆರೋಪಿಸಿದ್ದಾರೆ.

ಬ್ಯಾಡಗಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಎಲುಬು ಕೀಲು ತಜ್ಞರು ವಿಶೇಷ ಚೇತನರಲ್ಲದವರಿಗೂ ಸರ್ಟಿಫಿಕೆಟ್ ನೀಡುತ್ತಿದ್ದು, ಕೂಡಲೇ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶೇಷ ಚೇತನರ ಸಂಘದ ತಾಲೂಕಾಧ್ಯಕ್ಷ ಪಾಂಡುರಂಗ ಸುತಾರ ಆಗ್ರಹಿಸಿದ್ದಾರೆ.

ಬುಧವಾರ ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ನಡೆದ ವಿಶೇಷಚೇತನರ ಕುಂದು-ಕೊರತೆ ಸಭೆಯಲ್ಲಿ ಅವರು ದೂರಿದ್ದಾರೆ. ತಾಲೂಕಿನಲ್ಲಿ ಸುಳ್ಳು ಪ್ರಮಾಣಪತ್ರದ ಹಾವಳಿ ಮೀತಿಮೀರಿ ನಡೆಯುತ್ತಿದೆ, ದುಡ್ಡು ಕೊಟ್ಟರೆ ಸಾಕು ಸಾರ್ವಜನಿಕ ಆಸ್ಪತ್ರೆ ವೈದ್ಯರು ಎಲ್ಲ ನ್ಯೂನತೆಗಳಿವೆ ಎಂದು ಸರ್ಟಿಫಿಕೆಟ್‌ ನೀಡುತ್ತಿದ್ದಾರೆ. ಹಿಂದೆಯೂ ಇಂತಹ ಪ್ರಕರಣ ಬೆಳಕಿಗೆ ಬಂದಾಗ ವೈದ್ಯರ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದ್ದೇವೆ. ಅದಾಗ್ಯೂ ಯಾವುದೇ ಕ್ರಮಗಳಾಗಿಲ್ಲ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್‌ ಫೀರೋಜ್‌ಷಾ ಸೋಮನಕಟ್ಟಿ, ವಿಶೇಷ ಚೇತನರ ಸೌಲಭ್ಯಕ್ಕೆ ಬಂದ ಅರ್ಜಿಗಳನ್ನು ಖುದ್ದಾಗಿ ಪರೀಶೀಲಿಸಿದ್ದೇನೆ. ಸಲ್ಲಿಸಿದ ಅರ್ಜಿಗಳಲ್ಲಿ ಶೇ. 99ರಷ್ಟು ಜನರಿಗೆ ಯಾವುದೇ ನ್ಯೂನತೆಗಳಿಲ್ಲ, ಜಿಲ್ಲಾ ಹಂತದಲ್ಲಿಯೂ ಪರೀಕ್ಷಿಸಿದಾಗಲೂ ಯಾವುದೇ ನ್ಯೂನತೆಯಿಲ್ಲ ಎಂದು ತಿಳಿಸಿದ್ದಾರೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ಆಸ್ಪತ್ರೆ ವೈದ್ಯರಿಗೆ ತಮ್ಮ ತಪ್ಪನ್ನು ತಿದ್ದಿಕೊಳ್ಳುವಂತೆ ಸೂಚನೆ ನೀಡಿದರೂ ತಾತ್ಸಾರ ಮನೋಭಾವನೆ ಮುಂದುವರಿಸಿದ್ದಾರೆ, ಹೀಗಾದರೆ ಮುಂದಿನ ಎಲ್ಲ ಕ್ರಮಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಒಂದು ವೇಳೆ ತನಿಖೆಯಿಂದ ಸಾಬೀತಾದಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡಲು ಹಿಂಜರಿಯುವುದಿಲ್ಲ ಎಂದರು.

ಸರ್ವೇ ಮಾಡಿ: ಗಣೇಶ ಬಡಿಗೇರ ಮಾತನಾಡಿ, ತಾಲೂಕಿನ ಕಲ್ಲೇದೇವರು ಹಾಗೂ ಅಳಲಗೇರಿ ಗ್ರಾಮದಲ್ಲಿ ಅಧಿಕ ಜನರು ಸುಳ್ಳು ವಿಶೇಷ ಚೇತನರ ಸರ್ಟಿಫಿಕೆಟ್ ಪಡೆದುಕೊಂಡು, ಮಾಸಾಶನ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಎಂಬಂತೆ ತಾಲೂಕಿನಲ್ಲಿ ವಿಶೇಷ ಚೇತನರ ಗುರುತಿನ ಚೀಟಿ (ಯುಡಿಐಡಿ) ಕಾರ್ಡಗಳಿವೆ. ಆದ್ದರಿಂದ ತಾಲೂಕಿನಲ್ಲಿ ಸೂಕ್ತ ಸರ್ವೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಬಸ್‌ಗಳನ್ನು ನಿಲ್ಲಿಸುತ್ತಿಲ್ಲ: ಶಾಂತಾ ಪಟ್ಟಣಶೆಟ್ಟಿ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ವಿಶೇಷ ಚೇತರಿಗೆ ಸೂಕ್ತ ಆಸನ ವ್ಯವಸ್ಥೆ, ಶೌಚಾಲಯ ಹಾಗೂ ರ‍್ಯಾಂಪ್‌ಗಳಿಲ್ಲ. ಇದರಿಂದ ಬಹಳ ತೊಂದರೆಯಾಗುತ್ತಿದೆ. ಬಸ್‌ಗಳನ್ನು ನಿಲ್ಲಿಸುವಂತೆ ಕೈತೋರಿಸಿದರೂ ಚಾಲಕರು ಹಾಗೇ ಹೋಗುತ್ತಿದ್ದಾರೆ. ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕೋರಿದರು.

ಅನುದಾನ ದುರ್ಬಳಕೆ: ನಾಗರಾಜ ಅಗಸನಹಳ್ಳಿ ಮಾತನಾಡಿ, ಸರ್ಕಾರದ ಎಲ್ಲ ಇಲಾಖೆಗಳಲ್ಲಿ ವಿಶೇಷ ಚೇತನರಿಗೆ ಮೀಸಲಿಟ್ಟ ಅನುದಾಗಳನ್ನು ಬೇರೆ ಬೇರೆ ಕಾರಣಕ್ಕೆ ದುರ್ಬಳಕೆ ಮಾಡುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಇದನ್ನು ಸಂಘವು ಖಂಡಿಸುತ್ತದೆ. ಇದರೊಟ್ಟಿಗೆ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ವ್ಯವಸ್ಥಾಪಕರು ಸಹಕರಿಸಬೇಕು. ಶಾಲಾ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ದೊರಕಿಸಿಕೊಡುವ ನಿಟ್ಟಿನಲ್ಲಿ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದು ಸೇರಿದಂತೆ ವಿಶೇಷ ಚೇತನರ ಹಿತ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಹಕರಿಸುವಂತೆ ಕೋರಿದರು.

ಜಿಲ್ಲಾ ಸಂಚಾಲಕ ನಾಗರಾಜ ದಿಳ್ಳೆಪ್ಪನವರ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೋಳ, ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ಸಿಡಿಪಿಒ ವೈ.ಟಿ. ಪೂಜಾರ, ಸಾಮಾಜಿಕ ಹೋರಾಟಗಾರ್ತಿ ಕೆ.ಸಿ. ಅಕ್ಷತಾ, ವಿಶೇಷ ಚೇತನರಾದ ಈರಪ್ಪ ಮಾಚಾಪುರ, ವೀರಭದ್ರಪ್ಪ ಬಂಕಾಪುರ, ಈರಣ್ಣ ನೂರೊಂದನವರ, ಸರೋಜಮ್ಮ ಮೂಡೇರ, ಆರಿಷಾ ಆಮದುನವರ, ಚೈತ್ರಾ ಹರಿಜನ, ಅಕ್ಕಮ್ಮ ಗೋಣಿ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ