ಹೆಚ್ಚುವರಿ ಹಣ ಪಾವತಿಗೆ ಸೆಸ್ಕಾಂ ನೋಟಿಸ್‌

KannadaprabhaNewsNetwork |  
Published : Nov 23, 2026, 01:30 AM IST
ಸೆಸ್ಕಾಂ ವಿರುದ್ಧ ಗ್ರಾಹಕರ ಆಕ್ರೋಶ | Kannada Prabha

ಸಾರಾಂಶ

ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟಿ ಸುಸ್ತಾಗಿರುವ ಗ್ರಾಹಕರಿಗೆ ಬೇಗೂರು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕಾಂ) ಮತ್ತೊಂದು ಶಾಕ್ ನೀಡಿದೆ. ಹೆಚ್ಚುವರಿ ಭದ್ರತಾ ಠೇವಣಿ (ಎಎಸ್‌ಡಿ) ಹೆಸರಿನಲ್ಲಿ ಮತ್ತೆ ಹಣ ಕಟ್ಟುವಂತೆ ನೋಟಿಸ್ ಜಾರಿ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟಿ ಸುಸ್ತಾಗಿರುವ ಗ್ರಾಹಕರಿಗೆ ಬೇಗೂರು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ (ಸೆಸ್ಕಾಂ) ಮತ್ತೊಂದು ಶಾಕ್ ನೀಡಿದೆ. ಹೆಚ್ಚುವರಿ ಭದ್ರತಾ ಠೇವಣಿ (ಎಎಸ್‌ಡಿ) ಹೆಸರಿನಲ್ಲಿ ಮತ್ತೆ ಹಣ ಕಟ್ಟುವಂತೆ ನೋಟಿಸ್ ಜಾರಿ ಮಾಡಲಾಗುತ್ತಿದೆ.

ತಾಲೂಕಿನ ಬೇಗೂರು ಗ್ರಾಮದ ಗ್ರಾಹಕರೊಬ್ಬರಿಗೆ 1,650 ರು. ಹೆಚ್ಚುವರಿ ಠೇವಣಿ ಕಟ್ಟುವಂತೆ ನೋಟಿಸ್ ನೀಡಿದ್ದು, 30 ದಿನದೊಳಗೆ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಸೆಸ್ಕಾಂ ಎಚ್ಚರಿಸಿದೆ.

ಎಎಸ್‌ಡಿ ಎಂದರೇನು?

ಗ್ರಾಹಕರು ಒಂದು ವರ್ಷದಲ್ಲಿ ಪಾವತಿಸಿದ ವಿದ್ಯುತ್ ಬಿಲ್ ಆಧರಿಸಿ ಭದ್ರತಾ ಠೇವಣಿಯನ್ನು ನಿಗದಿ ಮಾಡಬೇಕು ಎಂಬುದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ನಿಯಮ. ಬಿಲ್ ಮೊತ್ತ ಹೆಚ್ಚಾದರೆ ಠೇವಣಿಯೂ ಹೆಚ್ಚಾಗುತ್ತದೆ. ಇದನ್ನೇ ಎಎಸ್‌ಡಿ ಎನ್ನುತ್ತಾರೆ.

ಬೇಗೂರು ಗ್ರಾಮದ ಗ್ರಾಹಕರೊಬ್ಬರು ಒಂದು ವರ್ಷದಲ್ಲಿ 20,626 ರು. ಬಿಲ್ ಪಾವತಿಸಿದ್ದು,ಈಗಾಗಲೇ 1,740 ರು. ಠೇವಣಿ ಪಾವತಿಸಿದ್ದಾರೆ. ಇನ್ನೂ 1,650 ರು. ಕಟ್ಟಬೇಕೆಂದು ಸೆಸ್ಕಾಂ ಲೆಕ್ಕ ಹಾಕಿದೆ.

ಗ್ರಾಹಕರ ಆಕ್ರೋಶ:

ಪ್ರತಿ ತಿಂಗಳು ಬಿಲ್ ಸರಿಯಾಗಿ ಕಟ್ಟುವ ನಮಗೆ ಮತ್ತೆ ಡೆಪಾಸಿಟ್ ಏಕೆ? ಬಿಲ್ ಬಾಕಿ ಉಳಿಸಿಕೊಂಡವರಿಗೆ ಕ್ರಮ ಕೈಗೊಳ್ಳುವ ಬದಲು, ಪ್ರಾಮಾಣಿಕವಾಗಿ ಕಟ್ಟುವವರಿಗೇ ಹೊರೆ ಏಕೆ? ಈ ಹಣಕ್ಕೆ ಬಡ್ಡಿ ಸಿಗುವುದೇ? ಯಾವಾಗ ವಾಪಸ್ ಸಿಗುತ್ತದೆ? ಎಂಬುದು ಗ್ರಾಹಕರ ಪ್ರಶ್ನೆ!

ಏನು ಮಾಡಬಹುದು?:

ಸೆಸ್ಕಾಂ ನೀಡಿದ ನೋಟಿಸ್ ಬಂದ ಕೂಡಲೇ ಗ್ರಾಹಕರು ಗಾಬರಿಯಾಗುವ ಅಗತ್ಯವಿಲ್ಲ.ಆರ್‌ಆರ್ ನಂಬರ್, ಬಿಲ್ ಮೊತ್ತ ಸರಿಯಿದೆಯೇ ಎಂದು ಪರಿಶೀಲಿಸಬೇಕು. ಲೆಕ್ಕದಲ್ಲಿ ತಪ್ಪಿದೆ ಎನಿಸಿದರೆ 7 ದಿನದೊಳಗೆ ಸೆಸ್ಕಾಂ ಉಪ ವಿಭಾಗ ಕಚೇರಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಬಹುದು.

ಸರಿಯಿದ್ದರೆ 30 ದಿನದೊಳಗೆ ಸೆಸ್ಕಾಂ ಕ್ಯಾಶ್ ಕೌಂಟರ್, ಕರ್ನಾಟಕ ಒನ್ ಅಥವಾ ಆನ್‌ಲೈನ್ ಮೂಲಕ ಪಾವತಿಸಬೇಕು. ಇಲ್ಲದಿದ್ದರೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ.ಹಣ ಪಾವತಿಸಿದ ರಸೀದಿಯನ್ನು ಕಡ್ಡಾಯವಾಗಿ ಇಡಬೇಕು.

ಹೊರೆ ಆಗ್ತದೆ:

ಒಂದೇ ಬಾರಿ ಹಣ ಕಟ್ಟುವುದು ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಬಿಲ್‌ನಲ್ಲೇ ಕಂತುಗಳಲ್ಲಿ ಎಎಸ್‌ಡಿ ಕಟ್ಟಲು ಅವಕಾಶ ನೀಡಬೇಕು ಎಂಬುದು ಗ್ರಾಹಕರ ಒತ್ತಾಯವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ ಬೋರ್‌ವೆಲ್‌ ನೀರು ಬಿಕರಿ: ಚಿಕ್ಕಣ್ಣ
ಮನೆಗೆ ಇ-ಸ್ವತ್ತು: 11ಎ, 11ಬಿಗೆ ಅರ್ಜಿ ಹಾಕಿ