ರಾಯಚೂರು ನಗರದ ಮಾದರಿ ಸರ್ಕಾರಿ ಮಾದರಿ ಪದವಿ ಕಾಲೇಜು, ಕೇಂದ್ರ ಬಸ್ ನಿಲ್ದಾಣ ಹಾಗೂ ರಿಮ್ಸ್ ಗೆ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲಾ ಪ್ರವಾಸ ಕೈಗೊಂಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ರಾಯಚೂರು ನಗರದ ವಿವಿಧ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲ ಸ್ಥಳೀಯ ಸಿದ್ರಾಂಪುರ ರಸ್ತೆಯಲ್ಲಿರುವ ಹೊಸ ಸರ್ಕಾರಿ ಮಾದರಿ ಪದವಿ ಕಾಲೇಜು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಕಾಲೇಜ್ ಕಟ್ಟಡದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಯಾವುದೇ ಕಾಮಗಾರಿ ಪ್ರಾರಂಭಿಸುವ ಮುಂಚೆ ಬೋರ್‌ವೆಲ್ ಹಾಕಿಸುವ ಪದ್ಧತಿ ಇದೆ. ಆದರೆ ರಾಯಚೂರಿನ ಸಿದ್ರಾಂಪುರ ಕಟ್ಟಡ ಪೂರ್ಣಗೊಂಡಿದ್ದರು. ನೀರು ಸೌಲಭ್ಯವಿಲ್ಲ. ದೊಡ್ಡ ಕಟ್ಟಡವಿದ್ದು, ಹೊರಗಿನಿಂದ ನೀರು ತರುವುದು ಸೂಕ್ತವೇ ಎಂದು ಪ್ರಶ್ನಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಸವಲತ್ತು ಕಲ್ಪಿಸದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ನಂತರ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಸಿಸಿಟಿವಿಗಳ ಚಾಲನೆ, ಮಕ್ಕಳ ಸಹಾಯವಾಣಿ, ಮಹಿಳಾ ಸಹಾಯವಾಣಿ, ಇತರೆ ಸಹಾಯ ವಾಣಿಗಳ ಫಲಕಗಳನ್ನು ಅಳವಡಿಸಿರುವುದು, ಕುಡಿಯುವ ನೀರಿನ ಘಟಕ,ಮಹಿಳೆಯರ ನಿರೀಕ್ಷಣಾ ಕೊಠಡಿಗಳು, ತಾಯಿ ಮಗುವಿಗೆ ಹಾಲುಣಿಸುವ ಕೊಠಡಿಗಳಿಗೆ ಭೇಟಿ ನೀಡಿ, ಮೂಲಭೂತ ಸೌಕರ್ಯಗಳು ಒದಗಿಸಲು ತಿಳಿಸಿದರು. ಶೌಚಗೃಹದಲ್ಲಿ ಪುರುಷ ಇರುತ್ತಾರೆ. ಅಲ್ಲದೆ ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ ಎಂಬ ದೂರುಗಳು ಬರುತ್ತಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸಬೇಕು.
ನಿರ್ಲಕ್ಷ್ಯ ವಹಿಸಿದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ ಎಚ್ಚರಿಕೆ ನೀಡಿದರು. ಬಳಿಕ ಸ್ಥಳೀಯ ರಿಮ್ಸ್ ಬೋಧಕ ಆಸ್ಪತ್ರೆಗೆ ತೆರಳಿ ವಿವಿಧ ವಾರ್ಡ್‌ಗಳಿಗೆ ಪ್ರವೇಶಿಸಿ, ರೋಗಿಗಳ ಆರೋಗ್ಯ ವಿಚಾರಿಸಿದ ಅವರು ಆಸ್ಪತ್ರೆಯಲ್ಲಿ ನೀಡುತ್ತಿರುವ ವಿವಿಧ ಸೌಲಭ್ಯಗಳ ಕುರಿತು ರೋಗಿ ಗಳೊಂದಿಗೆ ಚರ್ಚಿಸಿದರು.
ಬಳಿಕ ನಾಲ್ಕನೇ ಮಹಡಿಗೆ ತೆರಳಿ ಅಲ್ಲಿನ ಶುಚಿತ್ವದ ಬಗ್ಗೆ ಪರಿಶೀಲಿಸಿದರು. ಇದೇ ವೇಳೆ ಬಾಣಂತಿಯರ ವಿಭಾಗಕ್ಕೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿ ದರು. ಔಷಧಿ ಇಲ್ಲಿಯೇ ಕೊಡ್ತಾರಾ? ಹೊರಗಡೆ ಔಷಧಿ ಬರೆದು ಕೊಡ್ತಾರಾ? ಎಂದು ಆಸ್ಪತ್ರೆಯಲ್ಲಿನ ಔಷಧೋಪಚಾರದ ಬಗ್ಗೆಯೂ ಪರಿಶೀಲಿಸಿದರು.
ಬಾಣಂತಿಯರಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಅವರನ್ನು ಸರಿಯಾಗಿ ಆರೈಕೆ ಮಾಡಬೇಕು. ಅವರಿಗೆ ಸಿಗುವ ಸೌಲಭ್ಯಗಳನ್ನು ತಪ್ಪದೇ ದೊರಕಿಸಲು ಕ್ರಮ ವಹಿಸಬೇಕು ಅಧಿಕಾರಿಗಳಿಗೆ ನಿರ್ದೇಶಿಸಿದರು. ದಂತ ವಿಭಾಗ, ರಕ್ತ್ರ ನಿಧಿ ಕೇಂದ್ರ, ಕ್ಷ-ಕಿರಣ ವಿಭಾಗ, ಅಲ್ಟ್ರಾಸೌಂಡ್ ಸ್ಕ್ಯಾನ್ ಕೊಠಡಿಗೆ ಹಾಗೂ ಔಷಧಿ ವಿತರಣೆ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದರು.
---
10ಕೆಪಿಆರ್‌ಸಿಆರ್ 04: ರಾಯಚೂರು ನಗರದ ಮಾದರಿ ಸರ್ಕಾರಿ ಮಾದರಿ ಪದವಿ ಕಾಲೇಜು, ಕೇಂದ್ರ ಬಸ್ ನಿಲ್ದಾಣ ಹಾಗೂ ರಿಮ್ಸ್ ಗೆ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ ನೀಡಿ ಪರಿಶೀಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.