ಕೈ ಸಾರಥಿಗಳ ಮುಂದಿವೆ ಸವಾಲು

KannadaprabhaNewsNetwork |  
Published : Sep 11, 2026, 04:15 AM ISTUpdated : Sep 11, 2026, 05:08 AM IST
Congress

ಸಾರಾಂಶ

ಕಾಂಗ್ರೆಸ್‌ನಲ್ಲಿ ಜಿಲ್ಲಾಧ್ಯಕ್ಷರ ಹುದ್ದೆಗಾಗಿ ತಿಂಗಳುಗಟ್ಟಲೆ ನಡೆದ ಕಸರತ್ತು ಮುಗಿದಿದೆ. ಮೂರು ಜಿಲ್ಲಾಧ್ಯಕ್ಷರ ನೇಮಕದ ಮೂಲಕ ಬೆಳಗಾವಿ ಕಾಂಗ್ರೆಸ್‌ನ ಸಂಘಟನಾ ಲೆಕ್ಕಾಚಾರಕ್ಕೆ ವರಿಷ್ಠರು ತೆರೆ ಎಳೆದಿದ್ದಾರೆ. ಆದರೆ, ಹುದ್ದೆ ಹಂಚಿಕೆಯೊಂದಿಗೆ ಪಕ್ಷದೊಳಗಿನ ಲೆಕ್ಕಾಚಾರ ಮುಗಿದಿಲ್ಲ.

ಶ್ರೀಶೈಲ ಮಠದ

 ಬೆಳಗಾವಿ : ಕಾಂಗ್ರೆಸ್‌ನಲ್ಲಿ ಜಿಲ್ಲಾಧ್ಯಕ್ಷರ ಹುದ್ದೆಗಾಗಿ ತಿಂಗಳುಗಟ್ಟಲೆ ನಡೆದ ಕಸರತ್ತು ಮುಗಿದಿದೆ. ಮೂರು ಜಿಲ್ಲಾಧ್ಯಕ್ಷರ ನೇಮಕದ ಮೂಲಕ ಬೆಳಗಾವಿ ಕಾಂಗ್ರೆಸ್‌ನ ಸಂಘಟನಾ ಲೆಕ್ಕಾಚಾರಕ್ಕೆ ವರಿಷ್ಠರು ತೆರೆ ಎಳೆದಿದ್ದಾರೆ. ಆದರೆ, ಹುದ್ದೆ ಹಂಚಿಕೆಯೊಂದಿಗೆ ಪಕ್ಷದೊಳಗಿನ ಲೆಕ್ಕಾಚಾರ ಮುಗಿದಿಲ್ಲ. ಬದಲಿಗೆ ನೂತನ ಅಧ್ಯಕ್ಷರ ಮುಂದೆ ಕಾರ್ಯಕರ್ತರನ್ನು ಒಗ್ಗೂಡಿಸುವುದು, ಬಣಗಳನ್ನು ಸಮನ್ವಯಗೊಳಿಸುವುದು ಹಾಗೂ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ದೊಡ್ಡ ಸವಾಲು ತೆರೆದುಕೊಂಡಿದೆ.

ರಾಜ್ಯದಲ್ಲೇ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ಮೂರು ಜಿಲ್ಲಾಧ್ಯಕ್ಷ ಸ್ಥಾನ

ರಾಜ್ಯದಲ್ಲೇ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ಮೂರು ಜಿಲ್ಲಾಧ್ಯಕ್ಷ ಸ್ಥಾನಗಳನ್ನು ಮುಂದುವರಿಸಿರುವ ಕಾಂಗ್ರೆಸ್, ಬೆಳಗಾವಿ ಗ್ರಾಮೀಣ, ನಗರ ಮತ್ತು ಚಿಕ್ಕೋಡಿ ಭಾಗಗಳಿಗೆ ಪ್ರತ್ಯೇಕ ನಾಯಕತ್ವ ನೀಡಿದೆ. ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಬಸವರಾಜ ಶೇಗಾವಿ, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ರಾಜಾಸಲೀಮ್ ಕಾಶೀಮನವರ್ ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಲಕ್ಷ್ಮಣರಾವ್ ಚಿಂಗಳೆ ಅವರನ್ನು ನೇಮಕ ಮಾಡಲಾಗಿದೆ.ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ನೇಮಕಾತಿಗೆ ತೆರೆ ಬಿದ್ದಿರುವುದು ಪಕ್ಷದೊಳಗೆ ಹೊಸ ಚರ್ಚೆಗೆ ಕಾರಣವಾಗಿದೆ.

ಯಾರಿಗೆ ಹುದ್ದೆ ಸಿಕ್ಕಿತು ಎಂಬ ಕುತೂಹಲ

ಯಾರಿಗೆ ಹುದ್ದೆ ಸಿಕ್ಕಿತು ಎಂಬ ಕುತೂಹಲದ ಜತೆಗೆ, ಇನ್ನು ಮುಂದೆ ಈ ಮೂವರು ಅಧ್ಯಕ್ಷರು ಯಾರನ್ನು ಜೊತೆಯಲ್ಲಿ ಕರೆದೊಯ್ಯುತ್ತಾರೆ. ಯಾವ ರೀತಿಯಲ್ಲಿ ಸಂಘಟನೆ ಕಟ್ಟುತ್ತಾರೆ ಮತ್ತು ಸ್ಥಳೀಯ ಮಟ್ಟದ ಭಿನ್ನಾಭಿಪ್ರಾಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೇ ಮುಂದಿರುವ ದೊಡ್ಡ ಸವಾಲಾಗಿದೆ. ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ನಲ್ಲಿ ಸ್ಥಳೀಯ ನಾಯಕತ್ವಗಳ ನಡುವಿನ ಸಮನ್ವಯ, ಕಾರ್ಯಕರ್ತರ ವಿಶ್ವಾಸ ಹಾಗೂ ಬೂತ್ ಮಟ್ಟದ ಸಂಘಟನೆ ಬಸವರಾಜ ಶೇಗಾವಿ ಅವರ ಮೊದಲ ಪರೀಕ್ಷೆ. ನಗರ ಕಾಂಗ್ರೆಸ್‌ನಲ್ಲಿ ಮಹಾನಗರ ಪಾಲಿಕೆ ರಾಜಕಾರಣ, ನಗರ ಸಮಸ್ಯೆಗಳು ಹಾಗೂ ವಿವಿಧ ಸಮುದಾಯಗಳ ನಡುವೆ ಪಕ್ಷದ ಸಂಪರ್ಕ ಬಲಪಡಿಸುವ ಹೊಣೆ ರಾಜಾಸಲೀಮ್ ಕಾಶೀಮನವರ್ ಅವರ ಮೇಲಿದೆ. ಚಿಕ್ಕೋಡಿಯಲ್ಲಿ ಕ್ಷೇತ್ರವಾರು ಸಂಘಟನೆಗೆ ಹೊಸ ವೇಗ ನೀಡುವುದು ಲಕ್ಷ್ಮಣರಾವ್ ಚಿಂಗಳೆ ಅವರ ಮುಂದಿರುವ ಸವಾಲು.

ಸರ್ಕಾರ ಅಧಿಕಾರದಲ್ಲಿದೆ ಎಂಬುದು ಕಾಂಗ್ರೆಸ್‌ಗೆ ಅನುಕೂಲವಾದರೂ, ಅದೇ ಕಾರಣಕ್ಕೆ ಸಂಘಟನೆಯ ಮೇಲಿನ ನಿರೀಕ್ಷೆಯೂ ಹೆಚ್ಚಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದರ ಜತೆಗೆ, ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಪಕ್ಷದೊಳಗಿನ ಅಸಮಾಧಾನವನ್ನು ಚುನಾವಣಾ ಸಂದರ್ಭದಲ್ಲಿ ಸ್ಫೋಟಗೊಳ್ಳದಂತೆ ನೋಡಿಕೊಳ್ಳುವುದು ನೂತನ ಅಧ್ಯಕ್ಷರಿಗೆ ಅಗ್ನಿಪರೀಕ್ಷೆಯಾಗಲಿದೆ.ಬೆಳಗಾವಿ ಕಾಂಗ್ರೆಸ್‌ನಲ್ಲಿ ಜಿಲ್ಲಾಧ್ಯಕ್ಷರ ನೇಮಕಾತಿ ಅಧ್ಯಾಯ ಮುಗಿದಿದೆ. ಈಗ ಆರಂಭವಾಗಿರುವುದು ಸಂಘಟನೆ ಕಟ್ಟುವ ಅಧ್ಯಾಯ. ಮೂರು ಅಧ್ಯಕ್ಷರು ಮೂರು ಭಾಗಗಳಲ್ಲಿ ಪಕ್ಷದ ನೆಲೆಯನ್ನು ಎಷ್ಟು ಗಟ್ಟಿಗೊಳಿಸುತ್ತಾರೆ ಎಂಬುದೇ ಮುಂದಿನ ರಾಜಕೀಯ ಲೆಕ್ಕಾಚಾರಕ್ಕೆ ಉತ್ತರ ನೀಡಲಿದೆ.

ನೂತನ ಅಧ್ಯಕ್ಷರು ಪಕ್ಷದ ತತ್ವ, ಸಿದ್ಧಾಂತ ಮತ್ತು ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮೂಲಕ ಸಂಘಟನೆಯನ್ನು ತಳಮಟ್ಟದಿಂದ ಸದೃಢಗೊಳಿಸಬೇಕು.ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಮುನ್ನಡೆಯಬೇಕು.

-ಲಕ್ಷ್ಮೀ ಹೆಬ್ಬಾಳಕರ, ಮಾಜಿ ಸಚಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನಾಳೆಯಿಂದ ಬೃಹನ್ಮಠದ ಗುರುಪಟ್ಟಾಧಿಕಾರ ಮಹೋತ್ಸವ
ಕೋರೆ ಸಕ್ಕರೆ ಕಾರ್ಖಾನೆ ಡಿಸ್ಟಿಲರಿ ಘಟಕಕ್ಕೆ ಗೋಲ್ಡ್ ಪ್ರಶಸ್ತಿ