ಹನೂರು : ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ವಿಷವಿಕ್ಕಿ 5 ಹುಲಿಗಳ ಹತ್ಯೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹುಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದೆ.
ಜಿಲ್ಲೆಯ ಹನೂರು ವಲಯದ ಪಚ್ಚೆದೊಡ್ಡಿ ಗ್ರಾಮದ ಬಳಿ ಸತ್ತ ಹುಲಿಯ ಅರ್ಧ ದೇಹ ಪತ್ತೆಯಾಗಿದ್ದು, ಇದನ್ನು ಮಣ್ಣಿನಲ್ಲಿ ಹುದುಗಿಸಿಡಲಾಗಿದೆ. ವನ್ಯಜೀವಿ ಸಪ್ತಾಹದ ದಿನವೇ ಹುಲಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಇದೊಂದು ಕಳ್ಳಬೇಟೆಗಾರರ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ತಂಡ ರಚಿಸಿ, 8 ದಿನದಲ್ಲಿ ತನಿಖಾ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ.
ಆಗಿದ್ದೇನು?:
ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯದ ಪಚ್ಚೆದೊಡ್ಡಿ ಗ್ರಾಮದ ಸಮೀಪ ಗುರುವಾರ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಈ ವೇಳೆ, ಸತ್ತ ಹುಲಿಯ ಅರ್ಧ ದೇಹ ಪತ್ತೆಯಾಗಿದೆ. ಹುಲಿಯ ಕಳೇಬರವನ್ನು ಮಣ್ಣಿನಲ್ಲಿ ಹುದುಗಿಸಿರುವುದು ಪತ್ತೆಯಾಗಿದೆ. ಹುಲಿಯ ತಲೆ, ಭುಜ, ಮುಂಗಾಲುಗಳು ಪತ್ತೆಯಾಗಿದ್ದು, ಕಳೇಬರದಲ್ಲಿ ಉಗುರುಗಳು ಮತ್ತು ಹಲ್ಲುಗಳು ಸೇಫ್ ಆಗಿವೆ. ಉಳಿದ ಭಾಗಗಳು ಸಿಕ್ಕಿಲ್ಲ. ಹೀಗಾಗಿ, ಇನ್ನುಳಿದ ಭಾಗವನ್ನು ಪತ್ತೆ ಹಚ್ಚಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಸರಿ ಸುಮಾರು 12 ವರ್ಷ ವಯಸ್ಸಿನ 250 ಕೆಜಿ ತೂಕದ ಭಾರೀ ಗಾತ್ರದ ಹುಲಿ ಇದಾಗಿದೆ. ಇದು ಕಳ್ಳ ಬೇಟೆಗಾರರ ಕೃತ್ಯವಾಗಿರುವ ಶಂಕೆಯಿದೆ ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.
ಮಲೆಮಹದೇಶ್ವರ ವನ್ಯಜೀವಿ ಧಾಮ, ಬಂಡೀಪುರ, ಬಿಆರ್‌ಟಿ ಮತ್ತು ಕಾವೇರಿ ವನ್ಯಧಾಮಗಳೊಂದಿಗೆ ಸಂಪರ್ಕ ಹೊಂದಿದ್ದು, ಹುಲಿಗಳಿಗೆ ಪ್ರಮುಖ ಆವಾಸಸ್ಥಳವಾಗಿದೆ. ಇಲ್ಲಿ ಸುಮಾರು 50ಕ್ಕೂ ಹೆಚ್ಚು ಹುಲಿಗಳು ವಾಸಿಸುತ್ತಿವೆ. ಆದರೆ, ಕಳೆದ ಕೆಲ ವರ್ಷಗಳಲ್ಲಿ ಕಳ್ಳಬೇಟೆ ಮತ್ತು ವಿಷಬೆರಕೆಯಂತಹ ಕೃತ್ಯಗಳಿಂದ ಹುಲಿಗಳ ಸಾವು ವರದಿಯಾಗುತ್ತಿದೆ. 2005ರ ಜೂನ್ ನಲ್ಲಿ ಹನೂರು ತಾಲೂಕಿನ ಹೂಗ್ಯಂ ವಲಯ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ನಾಲ್ಕು ಮರಿಗಳು ವಿಷ ಬೆರೆಸಿದ ಮಾಂಸ ತಿಂದು ಸಾವನಪ್ಪಿದ್ದವು.