ಕುಕ್ಕೆ: ಸ್ಕಂದ ಪಂಚಮಿಯ ದಿನ ೨೬೭ ಭಕ್ತರಿಂದ ಎಡೆಸ್ನಾನ ಸೇವೆ

KannadaprabhaNewsNetwork |  
Published : Dec 18, 2023, 02:00 AM IST
ಕುಕ್ಕೆ: ಸ್ಕಂಧ ಪಂಚಮಿಯ ದಿನ ೨೬೭ ಭಕ್ತರಿಂದ ಎಡೆಸ್ನಾನ ಸೇವೆ | Kannada Prabha

ಸಾರಾಂಶ

ಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಭಾನುವಾರ ಸ್ಕಂದ ಪಂಚಮಿಯ ಪ್ರಯುಕ್ತ 267 ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ಮಾಡಿದರು. ಸೋಮವಾರ ಬೆಳಗ್ಗೆ ಚಂಪಾಷಷ್ಠಿ ಅಂಗವಾಗಿ ಬ್ರಹ್ಮರಥೋತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಸುಬ್ರಹಣ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸ್ಕಂದ ಪಂಚಮಿಯ ದಿನ ಭಾನುವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ 267 ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.

ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಚಂಪಾಷಷ್ಠಿಯ ಜಾತ್ರೋತ್ಸವದ ಪಂಚಮಿ ದಿನದಂದು ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು.

ನೆರವೇರಿದ ಎಡೆಸ್ನಾನ:

ಧಾರ್ಮಿಕ ದತ್ತಿ ಇಲಾಖೆಯ ಪಂಡಿತರ ಮಾರ್ಗದರ್ಶನದಂತೆ ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆ ಬಳಿಕ ದೇವಳದ ಹೊರಾಂಗಣದ ಸುತ್ತಲೂ ೪೩೨ ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇದ್ಯಗಳನ್ನು ಬಡಿಸಲಾಯಿತು. ಬಳಿಕ ದೇವಳದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿಂದವು. ಹಸುಗಳು ತಿಂದ ಅನ್ನಪ್ರಸಾದದ ಮೇಲೆ ದೇವಳದ ಎದುರಿನ ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ನಿಂತಿದ್ದ ಎಲ್ಲ ವಯೋಮಾನದ ಭಕ್ತರು ಉರುಳು ಸೇವೆ ಕೈಗೊಂಡರು. ಬಳಿಕ ಭಕ್ತರು ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ಪ್ರಸಾದ ಮತ್ತು ಪ್ರಸಾದ ಭೋಜನ ಸ್ವೀಕರಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ ವಿ. ಭಟ್, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಪಿಜಿಎಸ್‌ಎನ್ ಪ್ರಸಾದ್, ಶೋಭಾ ಗಿರಿಧರ್, ಶ್ರೀ ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಹೆಬ್ಬಾರ್ ಪ್ರಸನ್ನ ಭಟ್ ಇದ್ದರು.

ಇಂದು ಚಂಪಾಷಷ್ಠಿ: ದೇವಸ್ಥಾನದಲ್ಲಿ ಸೋಮವಾರ ಮುಂಜಾನೆ ೭.೩೩ ರ ಧನುರ್ ಲಗ್ನ ಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಬ್ರಹ್ಮರಥಾರೂಢರಾಗಿ ಸಡಗರದ ಚಂಪಾಷಷ್ಠಿ ಬ್ರಹ್ಮರಥೋತ್ಸವ ನೆರವೇರಲಿದೆ.

ರಥೋತ್ಸವದ ಮುನ್ನ ದೇವಳದ ಹೊರಾಂಗಣದಲ್ಲಿ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರುತ್ತದೆ. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಲಿದ್ದಾರೆ. ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ, ಶ್ರೀ ದೇವರಿಗೆ ಸುವರ್ಣವೃಷ್ಟಿಗೈಯಲಿದ್ದಾರೆ. ಭಕ್ತರಿಗೆ ಧನ, ಕನಕ, ಹೂವು, ಫಲವಸ್ತು ಪ್ರಸಾದಗಳನ್ನು ಅರ್ಚಕರು ರಥದಿಂದ ಎಸೆಯಲಿದ್ದಾರೆ. ನಂತರ ಅಸಂಖ್ಯಾತ ಭಕ್ತರ ಜಯಘೋಷದೊಂದಿಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಮಹಾರಥೋತ್ಸವ ನಡೆಯುತ್ತದೆ.ವರ್ಷದಲ್ಲಿ ಒಂದು ಬಾರಿ ಮಾತ್ರ ಎಳೆಯುವ ಮಹಾರಥೋತ್ಸವವನ್ನು ಮತ್ತು ಬ್ರಹ್ಮರಥಾರೂಢರಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ದರುಶನವನ್ನು ಸಹಸ್ರಾರು ಭಕ್ತರು ಪಡೆಯಲಿದ್ದಾರೆ.

ರಥ ಎಳೆಯಲು ಪಾಸ್:

ರಥೋತ್ಸವದಲ್ಲಿ ನೂಕು ನುಗ್ಗಲು ತಪ್ಪಿಸಲು ವಿಶೇಷ ಪಾಸ್ ವ್ಯವಸ್ಥೆ ದೇವಸ್ಥಾನದ ವತಿಯಿಂದ ಮಾಡಲಾಗಿದೆ. ಬ್ರಹ್ಮರಥೋತ್ಸವ ಸೇವೆ ಮಾಡಿಸಿದವರಿಗೆ ಮತ್ತು ಬ್ರಹ್ಮರಥ ಎಳೆಯುವ ಸ್ಥಳೀಯ ಭಕ್ತರಿಗೆ ರಥ ಎಳೆಯುವ ಪಾಸನ್ನು ನೀಡಲಾಗುತ್ತದೆ.

ಬೆತ್ತ ದೇವಳಕ್ಕೆ:

ರಥೋತ್ಸವದ ಬಳಿಕ ರಥ ಎಳೆದ ಬೆತ್ತವನ್ನು ದೇವಸ್ಥಾನಕ್ಕೆ ಕೊಂಡೋಯ್ಯಲಾಗುತ್ತದೆ. ಹಿಂದೆಲ್ಲಾ ಬ್ರಹ್ಮರಥ ಎಳೆದ ಬೆತ್ತವನ್ನು ರಥ ಎಳೆದ ಭಕ್ತರಿಗೆ ನೀಡಲಾಗುತ್ತಿತ್ತು. ಇದರಿಂದಾಗಿ ರಥ ಎಳೆದ ತಕ್ಷಣ ಬೆತ್ತಕ್ಕಾಗಿ ಭಕ್ತರು ನೂಕು ನುಗ್ಗಲು ಮಾಡುತ್ತಿದ್ದರು. ಇದನ್ನು ತಪ್ಪಿಸಲು ಮತ್ತು ಶ್ರೀ ದೇವಳಕ್ಕೆ ಸಾಕಷ್ಟು ಬೆತ್ತವು ಮಹಾಪ್ರಸಾದದಲ್ಲಿ ನೀಡಲು ಅವಶ್ಯಕವಾಗಿ ಬೇಕಾಗಿರುವುದರಿಂದ ಈ ರೀತಿ ವ್ಯವಸ್ಥೆ ಕಂಡುಕೊಳ್ಳಲಾಗಿತ್ತು.

ಕುಡುಪು ದೇವಾಲಯದಲ್ಲಿ ಪಂಚಮಿ ಉತ್ಸವ-

ಮಂಗಳೂರಿನ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವದ ಪ್ರಯುಕ್ತ ಭಾನುವಾರ ಪಂಚಮಿ ಉತ್ಸವ ಸಂಭ್ರಮದಿಂದ ಜರುಗಿತು.

ಪಂಚಮಿ ಸಂಭ್ರಮದ ವೇಳೆ ವಿಶೇಷ ಅಭಿಷೇಕಾದಿ ಸೇವಾ ಪೂಜೆಗಳು ನಡೆದವು. ಸಾಗರೋಪಾದಿಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಭಕ್ತ ಜನರು ಮುಂಜಾನೆಯಿಂದಲೇ ದೇವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು. ಮಧ್ಯಾಹ್ನದ ಮಹಾಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ಮಹಾ ಅನ್ನಸಂತರ್ಪಣೆಯು ನಡೆಯಿತು. ಮಧ್ಯಾಹ್ನ 20 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.ರಾತ್ರಿ ಸವಾರಿ ಬಲಿ, ಕಟ್ಟೆಪೂಜೆ ನಡೆದ ಬಳಿಕ ದೇವಸ್ಥಾನದ ಕೆರೆಯಲ್ಲಿ ವೈಭವದ ತೆಪ್ಪೋತ್ಸವ ಹಾಗೂ ಅಶ್ವವಾಹನೋತ್ಸವ, ಪಂಚಮಿ ಪ್ರಸಾದ ವಿತರಣೆ ಜರುಗಿತು.ಇಂದು ಬ್ರಹ್ಮ ರಥೋತ್ಸವ: ಡಿ.18ರಂದು ಷಷ್ಠಿ ಉತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆ ರಥ ಕಲಶ, ಮಧ್ಯಾಹ್ನ 1 ಗಂಟೆಗೆ ಷಷ್ಠಿಯ ‘ಬ್ರಹ್ಮ ರಥೋತ್ಸವ’, ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಡಿ.19ರಂದು ಬೆಳಗ್ಗೆ 7ಕ್ಕೆ ಜೋಡು ದೇವರ ಬಲಿ ಉತ್ಸವ, ಚಂದ್ರಮಂಡಲ ಉತ್ಸವ, ಪಾಲಕಿ ಉತ್ಸವದೊಂದಿಗೆ ಪ್ರಸಾದ ವಿತರಣೆ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ