ಕನ್ನಡಪ್ರಭ ವಾರ್ತೆ ಮಂಡ್ಯ
ಲೋಕಾಯುಕ್ತ ವಿಶೇಷ ತನಿಖಾ ದಳದ ಎಡಿಜಿಪಿ ಎಂ. ಚಂದ್ರಶೇಖರ್ ಒಬ್ಬ ಭ್ರಷ್ಟ, ಅವಿವೇಕಿ, ದುರಹಂಕಾರಿ. ಆತನನ್ನು ತಕ್ಷಣವೇ ಅಮಾನತ್ತು ಮಾಡಲು ಸರ್ಕಾರ ಮುಂದಾಗದಿದ್ದರೆ ಮುಂದಿನ ಪರಿಣಾಮಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಎಚ್ಚರಿಸಿದರು.ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಕೇಂದ್ರ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಐಪಿಎಸ್ ಅಧಿಕಾರಿಯೊಬ್ಬರು ಲಘುವಾಗಿ ಮಾತನಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದಂತೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಆಂಧ್ರ ಮೂಲದ ಅಧಿಕಾರಿಯಾಗಿರುವ ಎಡಿಜಿಪಿ ದರ್ಜೆಯ ಚಂದ್ರಶೇಖರ್ ಕಳೆದ ಎಂಟು ವರ್ಷಗಳಿಂದಲೂ ಬೆಂಗಳೂರಿನಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನನಾಯಕರೊಬ್ಬರ ಬಗ್ಗೆ ವ್ಯಾಪ್ತಿ ಮೀರಿ ಮಾತನಾಡುವ ಅಧಿಕಾರವನ್ನು ಇವರಿಗೆ ಕೊಟ್ಟವರು ಯಾರು. ಮಾಜಿ ಮುಖ್ಯಮಂತ್ರಿಗಳೂ ಸೇರಿ ಹಲವು ಜನಪ್ರತಿನಿಧಿಗಳ ವಿರುದ್ಧ ಪ್ರಕರಣಗಳಿದ್ದು ಎಲ್ಲರನ್ನೂ ಬಂಧಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.ರಾಜ್ಯಪಾಲರ ಕಚೇರಿಯನ್ನೂ ತಪಾಸಣೆ ಮಾಡಬೇಕೆಂದು ಹೇಳುವ ಅಧಿಕಾರವನ್ನು ಪೊಲೀಸ್ ಅಧಿಕಾರಿ ಚಂದ್ರಶೇಖರ್‌ಗೆ ನೀಡಿದವರು ಯಾರು?, ಅಧಿಕಾರಿಯ ಮಾತನ್ನು ಕೇಳಿದರೆ ನಾವು ಪಾಕಿಸ್ತಾನದಲ್ಲಿದ್ದೇವಾ, ಇದೊಂದು ತಲೆತಗ್ಗಿಸುವ ಘಟನೆ. ಮುಖ್ಯ ಕಾರ್‍ಯದರ್ಶಿಗಳು ಕ್ರಮ ವಹಿಸಿ ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಯಾವುದೇ ಜನಪ್ರತಿನಿಧಿ ಅಪರಾಧವೆಸಗಿದ್ದರೆ ಕಾನೂನು ರೀತಿ ಕ್ರಮವಾಗಲಿ. ಅದಕ್ಕೆ ನ್ಯಾಯಾಲಯ ಮತ್ತು ಕಾನೂನು ತನ್ನ ಕರ್ತವ್ಯ ನಿಭಾಯಿಸುತ್ತದೆ. ಇಂತಹ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಲಜ್ಜೆಗೇಡಿತನದ ಹೇಳಿಕೆ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಇದನ್ನು ಕಾಂಗ್ರೆಸ್ ಸರ್ಕಾರ ಒಪ್ಪುವುದಾದರೆ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಐಪಿಎಸ್ ಅಧಿಕಾರಿ ಚಂದ್ರಶೇಖರ್ ಹೇಳಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಸಮರ್ಥಿಸಿಕೊಳ್ಳುವುದು ಗೌರವ ತರುವ ವಿಚಾರವಲ್ಲ. ಅಧಿಕೃತ ಲೆಟರ್‌ಹೆಡ್ ಅಥವಾ ಮೊಹರು ಬಳಸದೆ ಖಾಲಿ ಹಾಳೆಯಲ್ಲಿ ಅಧೀನ ಅಧಿಕಾರಿಗೆ ಪತ್ರ ಬರೆದು ಕ್ರಮ ವಹಿಸುವಂತೆ ತಿಳಿಸುವುದು ಕಾನೂನಿಗೆ ವಿರುದ್ಧವಲ್ಲವೇ ಎಂದು ಪ್ರಶ್ನಿಸಿದರು.
ಅಧಿಕಾರಿ ಮೇಲೆ ಹಲವು ಭ್ರಷ್ಟಾಚಾರದ ಆರೋಪಗಳಿವೆ. ಈ ಕುರಿತು ತನಿಖೆಯಾಗಬೇಕು. ಈ ಸಂಬಂಧ ರಾಜ್ಯಪಾಲರಿಗೆ ಮೈತ್ರಿ ಪಕ್ಷಗಳ ಶಾಸಕರು ಮನವಿ ಸಲ್ಲಿಸಲಿದ್ದಾರೆ. ಕೂಡಲೇ ಅವರನ್ನು ಅಮಾನತ್ತುಗೊಳಿಸಿ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದರು.