ವಿಜಯಪುರ: ಭಕ್ತಿಗೆ ಬಸವಣ್ಣ ಜ್ಞಾನಕ್ಕೆ ಅಲ್ಲಮಪ್ರಭು ಇದ್ದಂತೆ ಶೈವಾಚಾರ ನಿರೂಪಣೆಗೆ ಹೆಸರಾದ ಚನ್ನಬಸವಣ್ಣ, ಷಟ್ಸ್ಥಲ ಸಿದ್ಧಾಂತಕ್ಕೆ ಸೂಕ್ತ ತಳಹದಿ ಹಾಕಿ ಸೃಷ್ಟಿಶಾಸ್ತ್ರ ಮತ್ತು ಮನಃಶಾಸ್ತ್ರಗಳನ್ನು ಬಹುವಿಸ್ತಾರವಾಗಿ ವರ್ಣಿಸಿದ್ದಾರೆ. ಅವರ ವಚನಗಳಲ್ಲಿ ಆತ್ಮಪ್ರತ್ಯಯ, ಸ್ಪಷ್ಟೋಕ್ತಿಗಳಿದ್ದು ಪ್ರಶಂಸಾರ್ಹವಾದವು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ಪಟ್ಟಣದ ಜೆ.ಸಿ.ಉದ್ಯಾನವನದಲ್ಲಿ ಮಾತೃಮಡಿಲು ಸೇವಾ ಸಂಸ್ಥೆ, ವಚನಬಳಗ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಕ್ಷಮ ಸಹಯೋಗದಲ್ಲಿ ವಿಶೇಷ ಚೇತನರೊಂದಿಗೆ ಹಮ್ಮಿಕೊಂಡಿದ್ದ ಚನ್ನಬಸವಣ್ಣ ಜಯಂತಿ, ಕನ್ನಡ ರಾಜ್ಯೋತ್ಸವ, ದೀಪಾವಳಿ ಸಾಂಪ್ರದಾಯಿಕ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕರಣ ಹಸುಗೆ, ಮಿಶ್ರಾರ್ಪಣ, ಮಂತ್ರಗೋಪ್ಯ, ಕಾಲಜ್ಞಾನ ಕೃತಿಗಳಲ್ಲದೇ ಷಟ್ಸ್ಥಲ ಹಾಗೂ ಇತರೆ ವಚನಗಳು ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಅದ್ಭುತ ಕೊಡುಗೆಗಳಾಗಿವೆ ಎಂದರು.ಧಾರ್ಮಿಕ ಚಿಂತಕ ಬಾಬುರಾಜೇಂದ್ರಪ್ರಸಾದ್ ಮಾತನಾಡಿ, ಗಡಿಭಾಗದ ಜಿಲ್ಲೆಗಳಲ್ಲಿ ಕನ್ನಡಭಾಷೆ ಮಾಯವಾಗುತ್ತಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಭಾಷಾ ವಿಷಯದಲ್ಲಿ ಅಪಾರ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅನ್ಯಭಾಷಿಕರಿಗೆ ಕನ್ನಡ ಕಲಿತು ಇಲ್ಲಿನ ನೆಲ, ಜಲ ಸೇವಿಸಿ ಬದುಕಲು ತಿಳಿಹೇಳಬೇಕಿದೆ. ರಾಜ್ಯವನ್ನು ಆಳಿದ ರಾಜಮನೆತನಗಳು ಕಲೆ, ಸಂಸ್ಕೃತಿ, ಸಾಹಿತ್ಯದ ಉಳಿವಿಗೆ ಸಾಕಷ್ಟು ಕೊಡುಗೆ ನೀಡಿವೆ. ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಗಟ್ಟಿನಲ್ಲಿ ಕನ್ನಡ ನೆಲ ಅನೇಕ ಸಿಡಿಲಮರಿಗಳಿಗೆ ಜನ್ಮನೀಡಿದೆ. ಭಾಷಾ ಸಮಸ್ಯೆ, ಗಡಿ ಸಮಸ್ಯೆ, ಮಾಧ್ಯಮ ಸಮಸ್ಯೆಗಳು ಅಖಂಡ ಕರ್ನಾಟಕದ ಭಾವನೆಗೆ ಧಕ್ಕೆ ತರುತ್ತಿವೆ ಎಂದರು.
ಶಿಡ್ಲಘಟ್ಟ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಕನ್ನಡ ಧ್ವಜಾರೋಹಣ ನೆರವೇರಿಸಿದರು.ಗ್ರಾಮಾಂತರ ಟ್ರಸ್ಟ್‌ನ ಉಷಾಶೆಟ್ಟಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ, ನ್ಯಾಯಾಲಯ ನೌಕರ ಶ್ರೀನಿವಾಸ್, ಜಿಲ್ಲಾ ಸಕ್ಷಮ ಕಾರ್ಯದರ್ಶಿ ಬಿ.ಎಂ.ಜಗದೀಶ್‌ಕುಮಾರ್ ಮಾತನಾಡಿದರು. ಕಾರವಾರ ಜಿಲ್ಲೆಯ ಯಲ್ಲಾಪುರದ ಅಂಗವಿಕಲ ಮಗುವಿಗೆ ವೀಲ್‌ಚೇರ್ ಮತ್ತು ಅಗತ್ಯ ಪರಿಕರಗಳನ್ನು ವಿತರಿಸಲಾಯಿತು. ಶಾಲಾಮಕ್ಕಳಿಗೆ ಉಚಿತ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ವಿಶೇಷಚೇತನ ವಿದ್ಯಾರ್ಥಿ ಧನುಷ್ ಮತ್ತು ಸಂಗಡಿಗರಿಂದ ಏಕಪಾತ್ರಾಭಿನಯ, ನೃತ್ಯ ಮತ್ತಿತರ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಬೆಂಗಳೂರಿನ ಹೆಸರಾಂತ ಕಲಾವಿದ ಮೂರ್ತಿ ಅವರಿಂದ ಜಂಬೆ ವಾದ್ಯವಾದನ ಎಲ್ಲರ ಆಕರ್ಷಣೆಯಾಗಿತ್ತು. ಪುರಸಭಾ ಮಾಜಿಸದಸ್ಯ ಎಸ್.ಭಾಸ್ಕರ್, ಮಾತೃಮಡಿಲು ಸಂಸ್ಥೆಯ ಎಸ್.ಶಂಕರ್, ವಂದನಾಜಗದೀಶ್, ಮದನ್, ರವಿ, ಹಾರೋಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ, ಶಶಿಕುಮಾರ್, ಶಿಕ್ಷಕ ವಿಜಯಕುಮಾರ್, ಗಾಯಕಿ ಭಾನು, ಪತಂಜಲಿ ಯೋಗಶಿಕ್ಷಣ ಸಮಿತಿಯ ದೀಪಾರಮೇಶ್, ಟೌನ್ ಬಿಜೆಪಿ ಮುಖಂಡ ರವಿಕುಮಾರ್,ಬಳುವನಹಳ್ಳಿ ಕೃಷ್ಣಪ್ಪ, ಸಕ್ಷಮ ಪದಾಧಿಕಾರಿಗಳು, ಮತ್ತಿತರರು ಇದ್ದರು. ವಿಶೇಷಚೇತನರೊಂದಿಗೆ ಸಿಹಿ ವಿತರಿಸಿ ಸಾಂಪ್ರದಾಯಿಕವಾಗಿ ದೀಪಾವಳಿ ಆಚರಿಸಲಾಯಿತು.