- ಕನಕಲಕ್ಷ್ಮೀ ನೇತೃತ್ವ ತಂಡದಿಂದ ಚನ್ನಗಿರಿ ಪಟ್ಟಣದಲ್ಲಿ ತನಿಖೆ, ವಿಚಾರಣೆ ಚುರುಕು
- ಕಲ್ಲು ತೂರಾಟ, ಸ್ವತ್ತು ಧ್ವಂಸದ ಘಟನೆ ವೀಡಿಯೋ ಆದರಿಸಿ ಶೋಧ- ಪೊಲೀಸ್ ಭಯಕ್ಕೆ ಊರು ಬಿಟ್ಟಿರುವ ದುಷ್ಕರ್ಮಿಗಳಿಗಾಗಿ ಹುಡುಕಾಟ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಚನ್ನಗಿರಿ ಪೊಲೀಸ್ ಠಾಣೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ, ಸರ್ಕಾರಿ ಸ್ವತ್ತು ಧ್ವಂಸಗೊಳಿಸಿ, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಅಧಿಕಾರಿಗಳು- ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸ್ ಉಪಾಧೀಕ್ಷಕಿ ಕನಕಲಕ್ಷ್ಮೀ ನೇತೃತ್ವದ ತಂಡವು ಸೋಮವಾರ ಚನ್ನಗಿರಿ ಪಟ್ಟಣದಲ್ಲಿ ತನಿಖೆ, ವಿಚಾರಣೆ ಕೈಗೊಂಡಿದೆ.
ಕಳೆದ ಶುಕ್ರವಾರ ರಾತ್ರಿಯಿಂದ ಚನ್ನಗಿರಿ ಠಾಣೆ ಆವರಣದಲ್ಲಿ ಆಗಿರುವ ಘಟನೆ, ಕೃತ್ಯದ 6 ಪ್ರಕರಣಗಳ ಮಾಹಿತಿಯನ್ನು ಡಿವೈಎಸ್‌ಪಿ ಕನಕಲಕ್ಷ್ಮಿ ನೇತೃತ್ವದ ತಂಡ ಕಲೆ ಹಾಕಿತು. ಠಾಣೆ ಗಾಜುಗಳನ್ನು ಕಲ್ಲು ತೂರಿ ಒಡೆದು ಹಾಕಿರುವುದು, ವಾಹನಗಳನ್ನು ಜಖಂಗೊಳಿಸಿರುವುದು, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವುದು ಹೀಗೆ ಎಲ್ಲ ಮಾಹಿತಿಗಳನ್ನು, ಸಾಕ್ಷ್ಯಗಳನ್ನು ತಂಡ ಕಲೆ ಹಾಕುತ್ತಿದೆ.ಘಟನೆ ನಡೆದ ಸ್ಥಳದಲ್ಲಿ ಇಂಚಿಂಚು ಪರಿಶೀಲಿಸಿದ ತಂಡದವರು ಸಿಬ್ಬಂದಿಯಿಂದ ಹೇಳಿಕೆಗಳನ್ನು ದಾಖಲಿಸಿದರು. ಘಟನಾ ಸ್ಥಳದಲ್ಲಿದ್ದ ಕಲ್ಲುಗಳು, ಜಖಂಗೊಂಡ ಸರ್ಕಾರಿ ಸ್ವತ್ತು, ವಾಹನಗಳ ಪರಿಶೀಲನೆ ನಡೆಸಿತು.
ಐಜಿಪಿ ಆದೇಶ- ಅಧಿಕಾರಿಗಳ ರಿಲೀವ್:ಮತ್ತೊಂದು ಕಡೆ ಡಿವೈಎಸ್‌ಪಿ ಪ್ರಶಾಂತ ಮನ್ನೋಳಿ, ವೃತ್ತ ನಿರೀಕ್ಷಕ ನಿರಂಜನರನ್ನು ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಅಮಾನುತುಗೊಳಿಸಿ, ಆದೇಶಿಸಿದ್ದರಿಂದ ಭಾನುವಾರ ಇಬ್ಬರನ್ನೂ ರಿಲೀವ್ ಮಾಡಲಾಯಿತು. ಸಬ್ ಇನ್‌ಸ್ಪೆಕ್ಟರ್ ಅಕ್ತರ್‌ಗೆ ಸೋಮವಾರ ಅಮಾನತು ಆದೇಶ ಹೊರಬಿದ್ದಿದ್ದರಿಂದ ಸೇವೆಯಿಂದ ಬಿಡುಗಡೆ ಮಾಡಲಾಯಿತು. ಇಡೀ ಚನ್ನಗಿರಿ ಪಟ್ಟಣದಲ್ಲಿ ಪೊಲೀಸ್ ಕಣ್ಗಾವಲಿಟ್ಟಿದೆ. ಕಳೆದ ಶುಕ್ರವಾರ ತಡರಾತ್ರಿಯಿಂದಲೂ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮುಂದುವರಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಈವರೆಗೆ 30 ಆರೋಪಿಗಳನ್ನು ಬಂಧಿಸಿ, ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡ ದುಷ್ಕರ್ಮಿಗಳಿಗಾಗಿ ಚನ್ನಗಿರಿ, ನಲ್ಲೂರು, ಹೊನ್ನೆಬಾಗಿ ಸೇರಿದಂತೆ ಹಲವಾರು ಗ್ರಾಮಗಳು, ಊರುಗಳಲ್ಲಿ ಶೋಧ ನಡೆಸಲಾಗುತ್ತಿದೆ.ಇಡೀ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಘಟನೆ ನಡೆದ ದಿನದ ಎಲ್ಲ ಸಿಸಿ ಟಿವಿ ಕ್ಯಾಮೆರಾಗಳು, ವೀಡಿಯೋ ದೃಶ್ಯಾವಳಿಗಳನ್ನು ಆಧರಿಸಿ, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ವೀಡಿಯೋ, ಸಿಸಿ ಕ್ಯಾಮ್ ದೃಶ್ಯಾವಳಿ, ಫೋಟೋಗಳಲ್ಲಿದ್ದವರು, ಅಂದಿನ ಪ್ರತಿಭಟನೆಯಲ್ಲಿದ್ದವರನ್ನು ಕರೆ ತಂದು, ವಿಚಾರಣೆ ಮುಂದುವರಿಸಿದ್ದಾರೆ. ಸದ್ಯಕ್ಕೆ ಪಟ್ಟಣ ಸಹಜ ಸ್ಥಿತಿಗೆ ಮರಳುತ್ತಿದೆ.
- - - ಬಾಕ್ಸ್-1 * ಚನ್ನಗಿರಿ ಡಿವೈಎಸ್ಪಿ, ಸಿಪಿಐ, ಎಸ್ಐ ಅಮಾನತು ಕನ್ನಡಪ್ರಭ ವಾರ್ತೆ, ದಾವಣಗೆರೆಆದಿಲ್ ಸಾವಿನ ಹಿನ್ನೆಲೆ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಸರ್ಕಾರಿ ಸ್ವತ್ತು ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಚನ್ನಗಿರಿ ಪೊಲೀಸ್ ಉಪಾಧೀಕ್ಷಕ, ವೃತ್ತ ನಿರೀಕ್ಷಕ ಹಾಗೂ ಉಪ ನಿರೀಕ್ಷಕರನ್ನು ಅಮಾನತುಗೊಳಿಸಿ ಅಧಿಕೃತ ಆದೇಶದ ಹಿನ್ನೆಲೆಯಲ್ಲಿ ಮೂವರೂ ಸೇವೆಯಿಂದ ಬಿಡುಗಡೆ ಆಗಿದ್ದಾರೆ.
ಚನ್ನಗಿರಿ ಡಿವೈಎಸ್‌ಪಿ ಪ್ರಶಾಂತ ಮನ್ನೋಳಿ, ವೃತ್ತ ನಿರೀಕ್ಷಕ ನಿರಂಜನ ಹಾಗೂ ಸಬ್ ಇನ್‌ಸ್ಪೆಕ್ಟರ್ ಅಕ್ತರ್ ಅಮಾನತುಗೊಂಡ ಅಧಿಕಾರಿಗಳು. ಚನ್ನಗಿರಿ ಪೊಲೀಸ್ ವಶದಲ್ಲಿದ್ದ ಆದಿಲ್ ಮೃತಪಟ್ಟ ಹಿನ್ನೆಲೆ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಸಾರ್ವಜನಿಕ ಸ್ವತ್ತು ಧ್ವಂಸ, 11 ಪೊಲೀಸರು ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳ ಅಮಾನತುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು.ಡಿವೈಎಸ್ಪಿ, ಸಿಪಿಐ ಹಾಗೂ ಎಸ್ಐ ಅಮಾನತುಗೊಳಿಸಿ ಅಧಿಕೃತ ಆದೇಶದ ನಂತರ ಮೂವರನ್ನೂ ಸೇವೆಯಿಂದ ರಿಲೀವ್ ಆಗಿದ್ದಾರೆ. ಮೂವರು ಚನ್ನಗಿರಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು. ಡಿವೈಎಸ್ಪಿ, ಸಿಪಿಐ, ಎಸ್ಐ ಅಮಾನತುಗೊಳಿಸಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
- - - ಬಾಕ್ಸ್-2 * ಒಟ್ಟು 30 ಆರೋಪಿಗಳು ಕೋರ್ಟ್‌ಗೆ ಹಾಜರುದಾವಣಗೆರೆ: ಮಟ್ಕಾ ಜೂಜಾಟ ಪ್ರಕರಣದ ವಿಚಾರಣೆಗೆ ಕರೆ ತಂದಿದ್ದ ಆದಿಲ್ ಸಾವಿನ ಹಿನ್ನೆಲೆಯಲ್ಲಿ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಸರ್ಕಾರಿ ಸ್ವತ್ತು ಧ್ವಂಸ, ಕರ್ತವ್ಯಕ್ಕೆ ಅಡ್ಡಿ, ಪೊಲೀಸರ ಮೇಲೆ ಕಲ್ಲು ತೂರಾಟದ ಒಟ್ಟು 6 ಪ್ರಕರಣಗಳ ಪೈಕಿ 4 ಪ್ರಕರಣಕ್ಕೆ ಸಂಬಂಧಿಸಿದಂತೆ 25 ಆರೋಪಿಗಳನ್ನು ಸೋಮವಾರ ತಾಲೂಕು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಚನ್ನಗಿರಿ ಠಾಣೆ ವ್ಯಾಪ್ತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಪೊಲೀಸರು ಒಟ್ಟು 30 ಜನರನ್ನು ಬಂಧಿಸಿದ್ದಾರೆ. ಮುಂಚೆ ಬಂಧಿತರಾಗಿದ್ದ 25 ಜನ ಸೇರಿದಂತೆ ಒಟ್ಟು 30 ಆರೋಪಿಗಳನ್ನು ಬಂಧಿಸಿದಂತಾಗಿದೆ. ನಿನ್ನೆಯಷ್ಟೇ 25 ಜನ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ದಾವಣಗೆರೆ ಜಿಲ್ಲಾ ಉಪ ಕಾರಾಗೃಹಕ್ಕೆ ಕಳಿಸಲಾಗಿತ್ತು. ಸೋಮವಾರ ಆರೋಪಿಗಳನ್ನು ಚನ್ನಗಿರಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.- - -
ಬಾಕ್ಸ್-3 * ಅಮಾಯಕರ ಬಂಧಿಸದಂತೆ ಮನವಿಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದವರ ಪೈಕಿ ಒಟ್ಟು 30 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಘಟನೆ ನಡೆದ ದಿನ ಊರಲ್ಲಿಯೇ ಇಲ್ಲದವರನ್ನೂ ಪೊಲೀಸರು ಬಂಧಿಸಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗುತ್ತಿದೆ.
ಘಟನೆ ನಡೆದ ದಿನ ಯಾಸಿನ್ ಎಂಬಾತ ಸ್ಥಳದಲ್ಲೇ ಇರಲಿಲ್ಲ. ಆದರೆ, ಆತನನ್ನು ಪೊಲೀಸರು ಬಂಧಿಸಿ, ಕರೆದೊಯ್ದಿದ್ದಾರೆ ಎಂದು ಚನ್ನಗಿರಿಯಲ್ಲಿ ಬಂಧಿತ ಯಾಸಿನ್ ಎಂಬ ಯುವಕನ ಚಿಕ್ಕಪ್ಪ ಯೂನಸ್ ಹೇಳಿದ್ದಾರೆ.ಠಾಣೆ ಮೇಲೆ ಕಲ್ಲು ತೂರಾಟ ನಡೆದ ದಿನ ಯಾಸಿನ್ ಸ್ಥಳದಲ್ಲೇ ಇರಲಿಲ್ಲ. ಅವರು ಪತ್ನಿಯ ಊರಿಗೆ ಹೋಗಿದ್ದರು. ಅಂದು ಬೆಳಗ್ಗೆ ಊರಿಗೆ ಹೋಗಿದ್ದ ಯಾಸಿನ್ ವಾಪಸ್ ಬಂದಿದ್ದು ಶನಿವಾರ ಬೆಳಗ್ಗೆ. ಠಾಣೆಯ ಮುಂದೆ ಗಲಾಟೆ, ಕಲ್ಲು ತೂರಾಟ ನಡೆದಿರುವುದು ಶುಕ್ರವಾರ ರಾತ್ರಿ. ಊರಿನಿಂದ ಬಂದವನು ಗ್ಯಾರೇಜ್ ಬಾಗಿಲು ಹಾಕಿಕೊಂಡು ಬರಲು ಹೋಗಿದ್ದಾಗ ಯಾಸಿನ್‌ಗೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅಮಾಯಕರನ್ನು ಇಲಾಖೆ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.
- - -(ಸಾಂದರ್ಭಿಕ ಚಿತ್ರ)