43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!

KannadaprabhaNewsNetwork |  
Published : Jun 18, 2025, 12:50 AM ISTUpdated : Jun 18, 2025, 12:01 PM IST
17ಎಚ್‌ಯುಬಿ32, 32ಎ, 32ಬಿ, 32ಸಿಇಂಗ್ಲಿಷ್‌ ಕಾಲುವೆಲ್ಲಿ ಈಜುವ ಮೂಲಕ ಇನ್‌ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ ಅವರನ್ನು ಒಳಗೊಂಡ 6 ಜನರ ಪ್ರೈಡ್‌ ಆಫ್‌ ಇಂಡಿಯಾ ತಂಡ. | Kannada Prabha

ಸಾರಾಂಶ

ಪ್ರೈಡ್‌ ಆಫ್‌ ಇಂಡಿಯಾ ತಂಡ ಜೂ.16ರಂದು ಬೆಳಗಿನ 2.15ಕ್ಕೆ ಈಜು ಆರಂಭಿಸಿದ್ದು, ಮಧ್ಯಾಹ್ನ 3.52ಕ್ಕೆ ಮುಕ್ತಾಯಗೊಳಿಸಿದೆ. ಈಜುವ ಸಂದರ್ಭದಲ್ಲಿ ಕೆಲವು ಜನರಿಗೆ ವಾಂತಿಭೇದಿ, ತಲೆ ಸುತ್ತುವುದು, ಇತರೆ ಸಮಸ್ಯೆ ಕಾಡಿದ್ದರೂ ಛಲ ಬಿಡದ ತಂಡ, ಕೆಚ್ಚೆದೆಯಿಂದ ಈ ಅಭೂತಪೂರ್ವ ಸಾಧನೆ ಮಾಡಿದೆ.

ಹುಬ್ಬಳ್ಳಿ: ಮೀನಿನಂತೆ ಈಜುವ ಮೂಲಕ ನಿರಂತರ ಸಾಧನೆ ಮಾಡುತ್ತಿರುವ ಭಾರತದ 6 ಜನರ ಪ್ರೈಡ್‌ ಆಫ್‌ ಇಂಡಿಯಾ ತಂಡ ಇದೀಗ ಇಂಗ್ಲೆಂಡ್‌ನಲ್ಲಿನ 43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆಯನ್ನು 13.37 ಗಂಟೆಯಲ್ಲಿ ಈಜುವ ಮೂಲಕ ಮತ್ತೊಂದು ದಾಖಲೆ ಮಾಡಿದೆ. ಈ ತಂಡದಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ, ಕೆಎಂಸಿಆರ್‌ಐನ ಎಂಬಿಬಿಎಸ್‌ ವಿದ್ಯಾರ್ಥಿ ಅಮನ್‌ ಶಾನಭಾಗ ಕೂಡ ಇರುವುದು ಹೆಮ್ಮೆಯ ವಿಷಯ.

ಇಂಗ್ಲೆಂಡ್‌ನ ಸ್ಯಾಮ್‌ಥೈರ್‌ ಹೊಯ್‌ ದಡದಿಂದ ಆರಂಭವಾದ ಈ ಈಜು, ಫ್ರಾನ್ಸ್‌ನ ವಿಸ್ಸೆಂಟ್‌ ಬೀಚ್‌ನಲ್ಲಿ ಮುಕ್ತಾಯವಾಯಿತು. ತಂಡದಲ್ಲಿ ಮುರುಗೇಶ ಚನ್ನಣ್ಣವರ, ಇಲ್ಲಿನ ಕೆಎಂಸಿಆರ್‌ಐ ನ ಎಂಬಿಬಿಎಸ್‌ ವಿದ್ಯಾರ್ಥಿ ಅಮನ್‌ ಶಾನಭಾಗ, ಹರಿಯಾಣದ ಐಎಎಸ್‌ ಅಧಿಕಾರಿ ದೀಪಕ್ ಬಾಬುಲಾಲ್ ಕಾರವಾ, ವಿಕಲಾಂಗ ಈಜುಗಾರರಾದ ಗಣೇಶ್ ಬಾಲಾಜಿ, ರಾಜಬೀರ, ಮಹಾರಾಷ್ಟ್ರದ ಬಿಬಿಎ ವಿದ್ಯಾರ್ಥಿ ಮಾನವ ಮೊರೆ ಇದ್ದರು.

ಇಂಗ್ಲಿಷ್‌ ಚಾನೆಲ್‌ ಅಸೋಸಿಯೇಶನ್‌ ನಿಯಮದಂತೆ ಈ 6 ಈಜುಗಾರರು ಒಬ್ಬರ ನಂತರ ಒಬ್ಬರಂತೆ ಮೇಲ್ವಿಚಾರಕ ರಾಬ್‌ ಸ್ಮಿಥ್‌, ಪೈಲೆಟ್‌ ಸ್ಟುವರ್ಟ್‌ ಹಾಗೂ ಪ್ರಶಾಂತ್ ಕರ್ಮಾಕರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಈಜಿದರು. 13ರಿಂದ 16 ಡಿಗ್ರಿ ಸೆಲ್ಸಿಯಸ್‌ ಚಳಿ, ಉಕ್ಕೇರುವ ಅಲೆಗಳ ನಡುವೆಯೂ 43 ಕಿಮೀ ದೂರವನ್ನು ಕೇವಲ 13.37 ಗಂಟೆಗಳಲ್ಲಿ ಈಜುವ ಮೂಲಕ ಗುರಿ ತಲುಪಿದ್ದಾರೆ.

ಪ್ರೈಡ್‌ ಆಫ್‌ ಇಂಡಿಯಾ ತಂಡ ಜೂ.16ರಂದು ಬೆಳಗಿನ 2.15ಕ್ಕೆ ಈಜು ಆರಂಭಿಸಿದ್ದು, ಮಧ್ಯಾಹ್ನ 3.52ಕ್ಕೆ ಮುಕ್ತಾಯಗೊಳಿಸಿದೆ. ಈಜುವ ಸಂದರ್ಭದಲ್ಲಿ ಕೆಲವು ಜನರಿಗೆ ವಾಂತಿಭೇದಿ, ತಲೆ ಸುತ್ತುವುದು, ಇತರೆ ಸಮಸ್ಯೆ ಕಾಡಿದ್ದರೂ ಛಲ ಬಿಡದ ತಂಡ, ಕೆಚ್ಚೆದೆಯಿಂದ ಈ ಅಭೂತಪೂರ್ವ ಸಾಧನೆ ಮಾಡಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಿದೆ. ಪೊಲೀಸ್‌ ಅಧಿಕಾರಿ ಮುರುಗೇಶ್ ಚನ್ನಣ್ಣವರ, ಕರ್ನಾಟಕ ಪೊಲೀಸ್ ಧ್ವಜವನ್ನು ಇಂಗ್ಲೆಂಡಿನಲ್ಲಿ ಹಾರಿಸಿ ಇಲಾಖೆಯ ಕೀರ್ತಿಯನ್ನು ವಿದೇಶದಲ್ಲಿ ಹೆಚ್ಚಿಸಿದ್ದಾರೆ.

ಸಾಧಕ ಇನ್‌ಸ್ಪೆಕ್ಟರ್‌ ಚನ್ನಣ್ಣವರ: ಇದೇ ತಂಡ ಕಳೆದ ತಿಂಗಳು ಶ್ರೀಲಂಕಾದಿಂದ ಭಾರತದ ಧನುಷ್ಕೋಡಿಯ ವರೆಗೆ ರಾಮ ಸೇತು ಮೂಲಕ 28 ಕಿ.ಮೀ. ಈಜನ್ನು ಚನ್ನಣ್ಣವರ 8 ಗಂಟೆ 30 ನಿಮಿಷ ಪೂರ್ಣಗೊಳಿಸಿದ್ದರು. ಉತ್ತರ ಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು, ಪಶ್ಚಿಮ ಬಂಗಾಲ ಮತ್ತು ಹರಿಯಾಣದ ಅಂಗವಿಕಲ ಕ್ರೀಡಾಪಟುಗಳು ಈ ತಂಡದಲ್ಲಿ ಇದ್ದರು.

ಹಿಂದೂ ಮಹಾಸಾಗರ ಮತ್ತು ಬಂಗಾಲಕೊಲ್ಲಿಯ ಸಮುದ್ರಗಳು ಸೇರುವ ಕ್ಲಿಷ್ಟಕರವಾದ 28 ಕಿ.ಮೀ. ಈಜನ್ನು ಪ್ರತಿಕೂಲ ವಾತಾವರಣ ಮತ್ತು ಭಾರೀ ಅಲೆಗಳ ನಡುವೆ ನಿರಂತರವಾಗಿ 8 ಗಂಟೆ 30 ನಿಮಿಷ ಈಜುವ ಮೂಲಕ ಪೂರ್ಣಗೊಳಿಸಿತ್ತು.

ಇದಕ್ಕೆ ಸ್ಫೂರ್ತಿಯಾಗಿ ಮುರುಗೇಶ್‌ ಅವರ ಪತ್ನಿ ಶ್ವೇತಾ ಚನ್ನಣ್ಣವರ ಕೂಡ ಜೊತೆ ಬೋಟ್‌ನಲ್ಲಿ ಶ್ರೀಲಂಕಾಗೆ ಹೋಗಿದ್ದರು. ಈ ಮೂಲಕ ಐರನ್‌ಮ್ಯಾನ್ ಖ್ಯಾತಿಯ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸೈಕ್ಲಿಂಗ್ ಮುಂತಾದ ಸಾಧನೆಗಳ ಮೂಲಕ ಪೊಲೀಸ್ ಇಲಾಖೆಯಲ್ಲಿ ಅಷ್ಟೇ ಅಲ್ಲ, ಸಾರ್ವಜನಿಕ ವಲಯದಲ್ಲಿ ಮುರುಗೇಶ್‌ ಚನ್ನಣ್ಣವರ ಹೆಸರು ಮಾಡಿದ್ದಾರೆ.

PREV
Read more Articles on

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ