ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ದಲಿತ ಪರ ವಿವಿಧ ಸಂಘಟನೆಗಳ ಮುಖಂಡರ ಆಂತರಿಕ ಭಿನ್ನಾಭಿಪ್ರಾಯ ಅಂಬೇಡ್ಕರ್ ಜಯಂತಿಯಲ್ಲಿ ಸ್ಪೋಟ ಗೊಂಡಿತು. ಕಾರ್ಯಕ್ರಮದ ಆರಂಭದಲ್ಲಿ ಉಂಟಾದ ಗದ್ದಲ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಮಯ ವ್ಯರ್ಥ ವಾದ ಘಟನೆ ನಡೆದಿದೆ.ಇದಕ್ಕೆ ಕಾರಣ, ಕಾರ್ಯಕ್ರಮಕ್ಕೆ ಉನ್ಯಾಸಕರ ಆಯ್ಕೆ, ಜಿಲ್ಲಾಡಳಿತದಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಪೂರ್ವ ಭಾವಿ ಸಭೆ ಕರೆದಾಗ ಉಪನ್ಯಾಸಕರ ಆಯ್ಕೆ ಬಗ್ಗೆ ಗದ್ದಲ ಉಂಟಾಗಿತ್ತು. ನಿಪ್ಪಾಣಿಯ ಡಾ. ಅನುಪಮ ಅವರನ್ನು ಕಾರ್ಯ ಕ್ರಮದಲ್ಲಿ ಉಪನ್ಯಾಸ ನೀಡಲು ಆಹ್ವಾನಿಸಲಾಗಿತ್ತು. ಆಹ್ವಾನ ಪತ್ರಿಕೆಯಲ್ಲೂ ಹೆಸರು ಮುದ್ರಣ ಮಾಡಲಾಗಿತ್ತು.
ಯಾರನ್ನು ಕೇಳಿ ಉಪನ್ಯಾಸಕರನ್ನು ಆಯ್ಕೆ ಮಾಡಿದ್ದೀರಾ ಎಂದು ಒಂದು ಬಣ ಜಿಲ್ಲಾಡಳಿತವನ್ನು ಪ್ರಶ್ನೆ ಮಾಡಿತು. ಇದಕ್ಕೆ ಇನ್ನೊಂದು ಬಣ ಸಮಜಾಯಿಸಿ ನೀಡಿತ್ತು. ಸ್ಥಳೀಯರಾದ ಪರಮೇಶ್ ಅವರಿಗೆ ಉಪನ್ಯಾಸ ನೀಡಲು ಅವಕಾಶ ನೀಡ ಬೇಕೆಂದು ಕೆಲವರು ಹೇಳಿದಾಗ ಅವರು ಬಿಎಸ್‌ಪಿ ಪಕ್ಷದ ಜಿಲ್ಲಾಧ್ಯಕ್ಷರು, ಅವರ ಆಯ್ಕೆ ಸೂಕ್ತವಲ್ಲ ಎಂದು ಹೇಳಿದರು.ಹೀಗಾಗಿ ಡಾ. ಅನುಪಮ ಅವರನ್ನು ಕೈ ಬಿಡುವ ಜತೆಗೆ ಪರಮೇಶ್ ಅವರನ್ನು ಸಹ ಕೈ ಬಿಟ್ಟು ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಅವರ ಉಪನ್ಯಾಸ ಮಾಡಿಸಲು ಜಿಲ್ಲಾಡಳಿತ ತೀರ್ಮಾನ ಕೈಗೊಂಡು ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತ ಕೋರುವ ವೇಳೆಯಲ್ಲಿ ಡಾ. ಮಂಜುಳಾ ಹುಲ್ಲಹಳ್ಳಿ ಅವರನ್ನು ವೇದಿಕೆ ಆಹ್ವಾನಿಸಲಾಯಿತು.
ಗಣ್ಯರ ಸಾಲಿನಲ್ಲಿ ಪರಮೇಶ್ ಕುಳಿತು ಕೊಂಡಿದ್ದರು. ಅವರನ್ನು ವೇದಿಕೆಗೆ ಕರೆದಿಲ್ಲ ಎಂಬ ಕಾರಣಕ್ಕಾಗಿ ದಲಿತಪರ ಸಂಘಟನೆಗಳ ಮುಖಂಡರು ತಕರಾರು ಎತ್ತಿದರು. ಏರು ಧ್ವನಿಯಲ್ಲಿ ಮಾತನಾಡುತ್ತಿದ್ದಂತೆ ಗೊಂದಲ ಆರಂಭವಾಯಿತು. ಕೆಲವು ಮಂದಿ ದಲಿತ ಮುಖಂಡರು ವೇದಿಕೆಯಲ್ಲಿ ಆಸೀನರಾಗಿದ್ದರು. ಅವರನ್ನು ಸಹ ಕೆಳಗೆ ಇಳಿಯುವಂತೆ ಆಗ್ರಹಿಸಿದರು.ಶಾಸಕ ಎಚ್.ಡಿ. ತಮ್ಮಯ್ಯ ಸೇರಿದಂತೆ ಗಣ್ಯರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ತಕ್ಷಣಕ್ಕೆ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿರಲಿಲ್ಲ. ಪರಮೇಶ್ ಅವರನ್ನು ವೇದಿಕೆಗೆ ಕರೆಸಲಾಯಿತು. ಉಪನ್ಯಾಸಕ್ಕೆ ಆಹ್ವಾನಿಸಿದಾಗ ಈ ರೀತಿ ಗೊಂದಲದ ವಾತಾವರಣದಲ್ಲಿ ನಾನೇ ಉಪನ್ಯಾಸ ನೀಡುವುದು ಸರಿಯಲ್ಲ. ಡಾ. ಮಂಜುಳಾ ಹುಲ್ಲಹಳ್ಳಿ ಅವರಿಗೆ ಅವಕಾಶ ನೀಡಬೇಕೆಂದು ಪರಮೇಶ್ ಹೇಳಿದ ನಂತರ ಪರಿಸ್ಥಿತಿ ತಿಳಿಯಾಗಿ ಕಾರ್ಯಕ್ರಮ ಮುಂದುವರಿಯಿತು.
14 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ವೇಳೆ ದಲಿತ ಪರ ಸಂಘಟನೆಗಳ ಮುಖಂಡರು ಉಪನ್ಯಾಸಕರ ಆಯ್ಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.