ಅವ್ಯವಸ್ಥೆ: ನಮ್ಮನಾಡು ಗೋ ಶಾಲೆ ಹಸುಗಳ ಸ್ಥಳಾಂತರ

KannadaprabhaNewsNetwork |  
Published : Jun 07, 2025, 01:15 AM IST
05ಜಿಯುಡಿ1 | Kannada Prabha

ಸಾರಾಂಶ

ನಮ್ಮ ನಾಡು ಗೋಶಾಲೆಯ ಅವ್ಯವಸ್ಥೆಗಳ ಬಗ್ಗೆ ನ್ಯಾಯಾಧೀಶೆ ಶಿಲ್ಪಾ ರವರು ನೀಡಿದ ದೂರಿನ ಮೇರೆಗೆ ಗೋಶಾಲೆಯ ಮಾಲೀಕ ವೆಂಕಟೇಶ್ ನನ್ನು ಬಂಧನ ಮಾಡಲಾಗಿದೆ. ಇನ್ನೂ ನ್ಯಾಯಾಧೀಶರ ಸಮ್ಮುಖದಲ್ಲಿ ನಮ್ಮ ನಾಡು ಗೋಶಾಲೆಯಲ್ಲಿದ್ದ ಹಸುಗಳನ್ನು ಬೇರೆ ಗೋಶಾಲೆಗಳಿಗೆ ಸ್ಥಳಾಂತರ ಮಾಡಲಾಯಿತು

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಶಿಲ್ಪಾ ರವರು ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ರೂರಲ್ ಗುಡಿಬಂಡೆಯ ಅಂಗನವಾಡಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು.

ತಾಲೂಕಿನ ನಡುವಣಹಳ್ಳಿ ಗ್ರಾಮದ ಬಳಿ ನಡೆಸಲಾಗುತ್ತಿದ್ದ ನಮ್ಮನಾಡು ಗೋ ಶಾಲೆಯ ಅವ್ಯವಸ್ಥೆಗಳ ಕುರಿತು ದೂರು ನೀಡಿದ್ದ ನ್ಯಾಯಾಧೀಶೆ ಶಿಲ್ಪಾ ರವರು ಜೂ.6 ರಂದು ಗೋಶಾಲೆಗೆ ಮತ್ತೆ ಭೇಟಿ ನೀಡಿ ಪರಿಶೀಲಿಸಿದರು.

ಗೋಶಾಲೆ ಹಸುಗಳ ಸ್ಥಳಾಂತರ

ನಮ್ಮ ನಾಡು ಗೋಶಾಲೆಯ ಅವ್ಯವಸ್ಥೆಗಳ ಬಗ್ಗೆ ನ್ಯಾಯಾಧೀಶೆ ಶಿಲ್ಪಾ ರವರು ನೀಡಿದ ದೂರಿನ ಮೇರೆಗೆ ಗೋಶಾಲೆಯ ಮಾಲೀಕ ವೆಂಕಟೇಶ್ ನನ್ನು ಬಂಧನ ಮಾಡಲಾಗಿದೆ. ಇನ್ನೂ ನ್ಯಾಯಾಧೀಶರ ಸಮ್ಮುಖದಲ್ಲಿ ನಮ್ಮ ನಾಡು ಗೋಶಾಲೆಯಲ್ಲಿದ್ದ ಹಸುಗಳನ್ನು ಬೇರೆ ಗೋಶಾಲೆಗಳಿಗೆ ಸ್ಥಳಾಂತರ ಮಾಡಲಾಯಿತು.

ಶಿಡ್ಲಘಟ್ಟದ ನಾಗಿರೆಡ್ಡಿಹಳ್ಳಿ ಗ್ರಾಮದ ಬಳಿಯ ಸರ್ಕಾರಿ ಗೋಶಾಲೆಗೆ ಹಾಗೂ ದೇವರಹೊಸಹಳ್ಳಿ ಗ್ರಾಮದ ಬಳಿಯ ಶ್ರೀಕೃಷ್ಣ ಗೋಶಾಲೆಗೆ ಹಸುಗಳನ್ನು ಸಾಗಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಡಾ.ರಂಗಪ್ಪ, ತಹಸೀಲ್ದಾರ್ ಅನೀಲ್, ಗುಡಿಬಂಡೆ ಆರಕ್ಷಕ ಉಪನಿರೀಕ್ಷಕ ಗಣೇಶ್ ರವರುಗಳು ಈ ಸಮಯದಲ್ಲಿ ಹಾಜರಿದ್ದರು.

ಆಸ್ಪತ್ರೆ ಸ್ವಚ್ಛತೆ ಕಾಪಾಡಿ

ಬಳಿಕ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ನ್ಯಾಯಾಧೀಶೆ ಶಿಲ್ಪಾ ರವರು ಔಷಧಾಲಯ, ರಕ್ತ ಪರೀಕ್ಷಾ ಕೇಂದ್ರ, ವಿವಿಧ ವಾರ್ಡ್‌ಗಳನ್ನು ಪರಿಶೀಲಿಸಿದರು. ಈ ಸಮಯದಲ್ಲಿ ಅಲ್ಲಿದ್ದ ರೋಗಿಗಳು ಹಾಗೂ ಸಾರ್ವಜನಿಕರ ಕ್ಷೇಮ ಸಮಾಚಾರವನ್ನು ವಿಚಾರಿಸಿದರು. ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಹಾಗೂ ಸ್ವಚ್ಚತೆ ಕಾಪಾಡುವಂತೆ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತನೆ ಮಾಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಗುಡಿಬಂಡೆ ತಾಲೂಕಿನ ರೂರಲ್ ಗುಡಿಬಂಡೆಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ನ್ಯಾಯಧೀಶರು ಕೇಂದ್ರಗಳಲ್ಲಿನ ಅವ್ಯವಸ್ಥೆಗಳ ಕುರಿತು ಅಸಮಧಾನ ವ್ಯಕ್ತಪಡಿಸಿದರು. ಅಂಗನವಾಡಿ ಕೇಂದ್ರದಲ್ಲಿ ಅವಧಿ ಮುಗಿದ ಕೆಲವೊಂದು ಆಹಾರ ಪದಾರ್ಥಗಳನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಜೊತೆಗೆ ಕೇಂದ್ರದ ಮಕ್ಕಳಿಗೆ ಸರಿಯಾಗಿ ಮೊಟ್ಟೆ ನೀಡದ ಬಗ್ಗೆಯೂ ಆಕ್ರೋಶ ಹೊರಹಾಕಿದರು. ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಸೀಜ್ ಮಾಡಿದರು.

ಕಾರ್ಯಕರ್ತೆಯರಿಗೆ ತರಾಟೆ

ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಮಯದಲ್ಲಿ ಅಂಗನವಾಡಿ ಶಿಕ್ಷಕಿ, ಸಹಾಯಕಿಯರನ್ನು ತರಾಟೆಗೆ ತೆಗೆದುಕೊಂಡರು. ಮಕ್ಕಳಿಗೆ ನೀಡುವ ಆಹಾರವನ್ನು ಸರಿಯಾಗಿ ನೀಡಬೇಕು. ನಿಮ್ಮ ಮನೆ ಮಕ್ಕಳಿಗೂ ಇದೇ ರೀತಿಯ ಆಹಾರ ಹಾಕುತ್ತೀರಾ ಹೇಳಿ. ಈ ರೀತಿಯ ನಡವಳಿಕೆ ಸರಿಯಲ್ಲ ಎಂದು ನ್ಯಾಯಾಧೀಶರು ಅಂಗನವಾಡಿ ನೌಕರರನ್ನು ತರಾಟೆಗೆ ತೆಗೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''