ಕನ್ನಡಪ್ರಭ ವಾರ್ತೆ ಮುಂಡಗೋಡ
ಚರಸ್ ವ್ಯವಹಾರದಲ್ಲಿ ತೊಡಗಿದ್ದ ಎಂಜಿನಿಯರ್‌ನನ್ನು ಮುಂಡಗೋಡ ಪೊಲೀಸರು ಶುಕ್ರವಾರ ಬೆಳಗಿನ ಜಾವ ಪಟ್ಟಣದ ಹುಬ್ಬಳ್ಳಿ ರಸ್ತೆಯ ಬಸ್ ಡಿಪೋ ಬಳಿ ಬಂಧಿಸಿದ್ದು, ಸುಮಾರು ₹೮ ಲಕ್ಷ ಮೌಲ್ಯದ ೭೮೧ ಗ್ರಾಂ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.ಪಟ್ಟಣದ ಸುಭಾಸನಗರ ಬಡಾವಣೆ ನಿವಾಸಿ ಎಂಜಿನಿಯರ್ ಸಚಿನ್ ಟೇಕಬಹುದ್ದೂರ್ ಗೋರ್ಖಾ(೨೬) ಬಂಧಿತ. ಆರೋಪಿ.
ಪಟ್ಟಣದ ಹುಬ್ಬಳ್ಳಿ ರಸ್ತೆಯ ಬಸ್ ಡಿಪೋ ಹತ್ತಿರ ತನ್ನ ಬೈಕ್‌ನಲ್ಲಿ ಚರಸ್ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ಮಾಡಿ ಮಾಲು ಸಮೇತ ಆರೋಪಿಯನ್ನು ಬಂಧಿಸಲಾಗಿದ್ದು, ಎನ್.ಡಿ.ಪಿ.ಎಸ್ ಕಾಯ್ದೆ ೧೯೮೫ ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.ಸಿಪಿಐ ರಂಗನಾಥ್ ನೀಲಮ್ಮನವರ್ ಹಾಗೂ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ನೇತೃತ್ವದಲ್ಲಿ ಸಿಬ್ಬಂದಿ ಕೋಟೇಶ ನಾಗರೊಳ್ಳಿ, ಅಣ್ಣಪ್ಪ ಬುಡಿಗೇರ, ಮಹಾಂತೇಶ ಮುಧೋಳ, ಶಿವಾನಂದ ದಾನಣ್ಣನವರ, ಅನ್ವರ್ ಬಮ್ಮಿಗಟ್ಟಿ, ಚಾಲಕ ಗುರುರಾಜ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.ಈಜುಕೊಳಕ್ಕೆ ಬಿದ್ದು ಬಾಲಕ ಸಾವು:
ಭಟ್ಕಳದ ಜಾಲಿ ಬೀಚ್ ಸಮೀಪ ಇರುವ ಖಾಸಗಿ ರೆಸಾರ್ಟ್ ಒಂದರ ಈಜುಕೊಳದಲ್ಲಿ ೫ ವರ್ಷದ ಬಾಲಕನೋರ್ವ ಅಕಸ್ಮಾತ್ ಬಿದ್ದು, ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಮೌಲವಿ ಶಾಹಿದುಲ್ಲಾಹ ಅವರ ಪುತ್ರ ಮೊಹಮ್ಮದ್ ಮುಸ್ತಾಕೀಮ್ ಶೇಖ್ (೫) ಮೃತ ಬಾಲಕ.ಬಾಲಕ ಸ್ಥಳೀಯ ಮದ್ರಸಾದ ಎಲ್‌ಕೆಜಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತಾಯಿ ಹಾಗೂ ತಂಗಿಯೊಂದಿಗೆ ರೆಸಾರ್ಟ್‌ಗೆ ಬಂದಿದ್ದ ವೇಳೆ ಈ ದುರಂತ ಸಂಭವಿಸಿದೆ. ತಾಯಿ ಮುಂದಕ್ಕೆ ನಡೆದು ಹೋಗುತ್ತಿದ್ದಾಗ ಗಮನ ತಪ್ಪಿದ ಕ್ಷಣದಲ್ಲಿ ಸುಮಾರು ಐದು ಅಡಿ ಆಳದ ಈಜುಕೊಳಕ್ಕೆ ಬಾಲಕ ಜಾರಿ ಬಿದ್ದಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಬಳಿಕ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಬಾಲಕನ ದೇಹವನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಈ ಬಗ್ಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.