ಕೊಪ್ಪಳ: ಬಾಲ್ಯವಿವಾಹ ಮಾಡುವುದರಿಂದ ಹೆಣ್ಣುಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿ ಅಪೌಷ್ಟಿಕ ವಿಕಲಾಂಗ ಮಗುವಿನ ಜನನ, ಗರ್ಭಪಾತ ಹಾಗೂ ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿ.ಪಿ. ಶಿವಾನಂದ ಹೇಳಿದರು.
ಕುಕನೂರಿನ ವಿದ್ಯಾನಂದ ಗುರುಕುಲ ಕಾಲೇಜಿನ ಸಭಾಂಗಣದಲ್ಲಿ ನಡೆದ ಬಾಲ್ಯವಿವಾಹ ನಿಷೇಧ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಎಂಬ ವಿಷಯದ ಕುರಿತು ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಬಾಲ್ಯವಿವಾಹ ಸಮಾಜದ ಒಂದು ಪಿಡುಗು, ಸರ್ಕಾರ ನಿಗದಿಪಡಿಸಿದ ಸರಿಯಾದ ವಯಸ್ಸಿಗೆ ಮದುವೆ ಮಾಡಬೇಕು. ಮಕ್ಕಳ ಬಾಲ್ಯವನ್ನು ಅವರಿಗೆ ಅನುಭವಿಸಲು ಬೀಡಬೇಕು. ಬಾಲ್ಯವಿವಾಹ ಮಾಡಿದರೆ ಅಂತವರಿಗೆ 2 ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಲಾಗುತ್ತದೆ. ಬಾಲ್ಯವಿವಾಹ ಮಾಡಲು ಪಾಲಕರಲ್ಲಿರುವ ಮೂಡನಂಬಿಕೆ, ಅನಕ್ಷರತೆ, ಆಸ್ತಿ ಉಳಿಸಿಕೊಳ್ಳುವಿಕೆ ಮುಂತಾದ ಕಾರಣಗಳಿಂದ ಬಾಲ್ಯವಿವಾಹ ನಡೆಯುತ್ತವೆ. ಆದ್ದರಿಂದ ಗ್ರಾಮದಲ್ಲಿ ಯಾರೂ ಬಾಲ್ಯವಿವಾಹ ಮಾಡದಂತೆ ಜಾಗೃತ ವಹಿಸಬೇಕು. ಎಲ್ಲರೂ ಸೇರಿ ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಬೇಕು ಎಂದು ತಿಳಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಂಕ್ರಯ್ಯ ಪಿ.ಆರೋಗ್ಯ ನಿರೀಕ್ಷಣಾಧಿಕಾರಿ ಕಾಳಪ್ಪ, ಪಾಂಡುರಂಗ ಸೇರಿದಂತೆ ಅನೇಕರು ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಆರ್.ಕೆ.ಎಸ್.ಕೆ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಮಹೆಬೂಬ್, ಸಹ ಉಪನ್ಯಾಸಕ ಆರ್.ಕೆ. ಪಾಟೇಲ್, ಎಸ್.ಸಿ. ಹಳ್ಳಿಗುಡಿ, ನರೇಂದ್ರ ರಾಠೋಡ್, ಹರಿಪ್ರೀಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯಾಧಿಕಾರಿಗಳು, ಆಪ್ತಸಮಾಲೋಚಕರು ಸೇರಿದಂತೆ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.