ಕನಕಗಿರಿ: ಕನ್ನಡ ನಮ್ಮ ಉಸಿರಾಗುವ ನಿಟ್ಟಿನಲ್ಲಿ ನೆಲ, ಜಲ,ಭಾಷೆಯ ಬೆಳವಣಿಗೆಗೆ ಎಲ್ಲರ ಶ್ರಮ ಅಗತ್ಯವಿದೆ ಎಂದು ಪಟ್ಟಣದ ಎಕ್ಷೆಲ್ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕಿ ಅರುಣಾ ವಸ್ತ್ರದ್ ಹೇಳಿದರು.
ಅವರು ಶುಕ್ರವಾರ ಪಟ್ಟಣದ ತೇರಿನ ಹನುಮಪ್ಪ ದೇವಸ್ಥಾನದ ಬಳಿ ಹಮ್ಮಿಕೊಂಡಿದ್ದ ಕನ್ನಡ ಸಪ್ತಾಹ ಕಾರ್ಯಕ್ರಮದ ಭಾಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂಗ್ಲೀಷ್ ಶಾಲೆಗಳಲ್ಲಿ ಕನ್ನಡ ಎನ್ನಡವಾಗಬಾರದು. ಮಕ್ಕಳಿಗೆ ಇಂಗ್ಲೀಷ್ ಜತೆಗೆ ಕನ್ನಡಾಭಿಮಾನ, ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಸತತ 10 ವರ್ಷಗಳಿಂದಲೂ ನವೆಂಬರ್ ತಿಂಗಳಲ್ಲಿ ಶಾಲೆಯಿಂದ ಕನ್ನಡ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡ ಬೆಳವಣಿಗೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.ಇದಕ್ಕೂ ಮೊದಲು ಮುಖಂಡ ಸಣ್ಣ ಕನಕಪ್ಪ ಮಾತನಾಡಿ, ರಾಜ್ಯೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ಭುವನೇಶ್ವರಿ, ಜವಾಹರಲಾಲ್ ನೆಹರು, ಭಕ್ತ ಕನಕದಾಸ, ಒನಕೆ ಓಬವ್ವ ಸೇರಿ ವಿವಿಧ ಮಹನೀಯರ ಛದ್ಮವೇಷ, ಹಳದಿ-ಕೆಂಪು ಮಿಶ್ರಿತ ಖಾದ್ಯಗಳ ತಯಾರಿ, ವಚನ ಮತ್ತು ಗಾದೆಗಳ ಪಠಣ, ನೃತ್ಯ, ಭಾಷಣ, ರಾಜ್ಯೋತ್ಸವ ಕುರಿತಂತೆ ಪ್ರಬಂಧ ಸ್ಪರ್ಧೆ ಸೇರಿದಂತೆ ನಾನಾ ಸ್ಪರ್ಧೆಗಳ ಮೂಲಕ ಮಕ್ಕಳಿಗೆ ಏಳು ದಿನಗಳ ಕಾಲ ಕನ್ನಡಾಭಿಮಾನ ಬೆಳೆಸುವ ಉದ್ದೇಶದಿಂದ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರಶಂಶನೀಯ ಎಂದರು.
ತೇರಿನ ಹನುಮಪ್ಪ ದೇವಸ್ಥಾನದಿಂದ ಐತಿಹಾಸಿಕ ಕನಕಾಚಲಪತಿ ದೇವಸ್ಥಾನದವರೆಗೆ ಜಾಗೃತಿ ಜಾಥಾ ನಡೆಯಿತು. ನಾಡಿನ ಕುರಿತು ಕವಿಗಳು ರಚಿಸಿದ ಘೋಷ ವಾಕ್ಯಗಳು ಜಾಥಾದಲ್ಲಿ ಮೊಳಗಿದವು. ಕನ್ನಡ ಬಾವುಟ ಪ್ರದರ್ಶನಗೊಂಡಿತು.ಪ್ರಗತಿ ಒಕ್ಕೂಟದ ತಾಲೂಕು ಸಂಚಾಲಕ ಪಾಮಣ್ಣ ಅರಳಿಗನೂರು, ಗ್ರಾಪಂ ಮಾಜಿ ಸದಸ್ಯ ಲಿಂಗಪ್ಪ ಪೂಜಾರ, ಶಿಕ್ಷಕರಾದ ಪ್ರಶಾಂತ ನಾಯಕ, ಸಂಗೀತಾ ಗೋಡೆ, ಪಾರ್ವತಿ, ಮಂಜುನಾಥ, ದುರುಗೇಶ, ಶೃತಿ, ಜ್ಯೋತಿ, ಸುಧಾ, ಸ್ಪಂಧನಾ, ಸುಜಾತ, ಸೃಜನ, ಭಾನು ಸೇರಿ ಇತರರಿದ್ದರು.