ಹಳಿಯಾಳ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಉದ್ದೇಶಪೂರ್ವಕವಾಗಿ ಚಾರ್ಜ್‌ಶೀಟ್ ಮಾಡಿ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ದ್ವೇಷ, ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಗುರುವಾರ ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ದ್ವೇಷ ರಾಜಕಾರಣವನ್ನು ಖಂಡಿಸಲು ನನಗೆ ಶಬ್ದಗಳು ಸಿಗುತ್ತಿಲ್ಲ ಎಂದರು.
ಸುಳ್ಳು ಚಾರ್ಜ್‌ಶೀಟ್ ಹಾಕಿ ಹೆದರಿಸುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಯಾರೂ ಭಯ ಪಡುವುದಿಲ್ಲ. ನನಗೆ ಸಂಪೂರ್ಣ ವಿಶ್ವಾಸವಿದೆ. ಇಂತಹ ಸುಳ್ಳು ಪ್ರಕರಣಗಳಿಗೆ ಯಾವತ್ತೂ ಜಯ ಲಭಿಸುವುದಿಲ್ಲ. ಸೋನಿಯಾಗಾಂಧಿ, ರಾಹುಲ್ ಗಾಂಧಿ ವ್ಯಕ್ತಿತ್ವ ಜನಪ್ರಿಯತೆಗೆ ಧಕ್ಕೆಯಾಗುವುದಿಲ್ಲ ಎಂದರು.
ನಾವು ಹೆದರುವುದಿಲ್ಲ:ಪ್ರತಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರದ ದ್ವೇಷ ರಾಜಕಾರಣದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಲಿದ್ದಾರೆ. ಇದು ಕೇವಲ ಪಕ್ಷದ ವಿಷಯವಲ್ಲ. ಇದು ಸಂವಿಧಾನ ಮತ್ತು ಪ್ರಜಾಪ್ರಭುತವನ್ನು ರಕ್ಷಿಸುವ ಹೋರಾಟವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ರವಿ ತೋರಣಗಟ್ಟಿ ಇದ್ದರು.