ಸಕ್ಕರೆ ಕಾರ್ಖಾನೆ ಮುಂಭಾಗ ತೂಕದ ಯಂತ್ರ ಅಳವಡಿಕೆ ಬಗ್ಗೆ ಪರಿಶೀಲಿಸಿ: ಡಿಸಿ

KannadaprabhaNewsNetwork |  
Published : Jun 22, 2025, 11:47 PM IST
ಜಿಲ್ಲಾಧಿಕಾರಿ ಸಭೆ ನಡೆಸಿದರು  | Kannada Prabha

ಸಾರಾಂಶ

ಕಬ್ಬು ತೂಕ ಮಾಡುವ ಯಂತ್ರವನ್ನು ಅಳವಡಿಸಿದ್ದು ಇದರಿಂದಾಗಿ ಕಬ್ಬಿನ ತೂಕದ ಪ್ರಮಾಣದ ಪ್ರತಿ ಬಾರಿ ಗೊಂದಲವಾಗುತ್ತಿದೆ.

ಕಾರವಾರ: ಜಿಲ್ಲೆಯ ಕಬ್ಬು ಬೆಳಗಾರರ ಪ್ರಮುಖ ಬೇಡಿಕೆಯಾದ ಸಕ್ಕರೆ ಕಾರ್ಖಾನೆಯ ಮುಂಭಾಗದಲ್ಲಿ

ತೂಕದ ಯಂತ್ರ ಅಳವಡಿಸುವ ಕುರಿತು ಸ್ಥಳ ಪರಿಶೀಲನೆ ನಡೆಸುವಂತೆ ಕಂದಾಯ, ಪೊಲೀಸ್ ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲೆಯ ಕಬ್ಬು ಬೆಳಗಾರರ ಮತ್ತು ಸಕ್ಕರೆ ಕಾರ್ಖಾನೆಯ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಳಿಯಾಳದ ಐಇಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಒಳಭಾಗದಲ್ಲಿ ಕಬ್ಬು ತೂಕ ಮಾಡುವ ಯಂತ್ರವನ್ನು ಅಳವಡಿಸಿದ್ದು ಇದರಿಂದಾಗಿ ಕಬ್ಬಿನ ತೂಕದ ಪ್ರಮಾಣದ ಪ್ರತಿ ಬಾರಿ ಗೊಂದಲವಾಗುತ್ತಿದೆ. ಇದನ್ನು ಬಗೆಹರಿಸುವ ದೃಷ್ಠಿಯಿಂದ ಕಾರ್ಖಾನೆಯ ಮುಂಭಾಗದಲ್ಲಿ ತೂಕದ ಯಂತ್ರ ಅಳವಡಿಸುವ ಬಗ್ಗೆ ಕಬ್ಬು ಬೆಳೆಗಾರರ ಪ್ರತಿನಿಧಿಗಳು ಕೋರಿದ್ದು, ಈ ಕುರಿತಂತೆ ಕಾರ್ಖಾನೆಯ ಮುಂಭಾಗದಲ್ಲಿ ಸೂಕ್ತ ಸ್ಥಳ ಇಲ್ಲವೆಂದು ಕಾರ್ಖಾನೆಯ ಪ್ರತಿನಿಧಿಗಳು ತಿಳಿಸಿದರು. ಈ ಬಗ್ಗೆ ಕಂದಾಯ, ಪೊಲೀಸ್ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಹಿಂದಿನ ಸಾಲಿನ ಕಬ್ಬು ಅರೆಯುವ ಹಂಗಾಮು ಪ್ರಾರಂಭದಿಂದ ಮುಕ್ತಾಯದವರೆಗಿನ ಸಕ್ಕರೆ ಇಳುವರಿ ಕುರಿತಂತೆ ವಿವಿಧ ತಂಡಗಳಿಂದ ತಪಾಸಣೆ ನಡೆಸಲಾಗಿದ್ದು ಈ ಕುರಿತಂತೆ ಯಾವುದೂ ದೂರುಗಳು ಬಂದಿಲ್ಲ, ತೂಕ ಮತ್ತು ಅಳತೆ ಇಲಾಖೆ ವತಿಯಿಂದ ಸಕ್ಕರೆ ಕಾರ್ಖಾನೆಯ ತೂಕ ಯಂತ್ರದ ತಪಾಸಣೆ ನಡೆಸಿದ್ದು ಯಾವುದೇ ಉಲ್ಲಂಘನೆ ಕಂಡು ಬಂದಿರುವುದಿಲ್ಲ ಎಂದರು.

ಕಳೆದ ಸಾಲಿನ ಕಬ್ಬಿನ ಉಪ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟದ ಬಗ್ಗೆ ವಿವರಗಳನ್ನು ಸಲ್ಲಿಸುವಂತೆ ಕಾರ್ಖಾನೆಯ ಪ್ರತಿನಿಧಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಸಕ್ಕರೆ ಕಾರ್ಖಾನೆಯ ನೀರು ರೈತರ ಜಮೀನುಗಳಿಗೆ ಹೋಗುವ ಕುರಿತಂತೆ ತಪಾಸಣೆ ನಡೆಸಿ ಹಾಗೂ ಪರಿಸರದಲ್ಲಿ ಯಾವುದೇ ಮಾಲಿನ್ಯ ಉಂಟಾದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಬ್ಬು ಕಟಾವಿನ ಕುರಿತ ಲಗಾಣಿಯಲ್ಲಿ ಯಾವುದೇ ದೂರುಗಳು ಬಂದಲ್ಲಿ ಸಂಬಂಧಪಟ್ಟವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಶಾರ್ಟ್ ಸರ್ಕ್ಯೂಟ್ ಮೂಲಕ 43 ಗ್ರಾಮಗಳಲ್ಲಿ 1278 ಟನ್ ಕಬ್ಬು ಹಾಳಾಗಿದ್ದು ಈ ಬಗ್ಗೆ ಹೆಸ್ಕಾಂ ನಿಂದ ನೀಡಿರುವ ಪರಿಹಾರದ ಬಗ್ಗೆ ವರದಿ ಪಡೆಯುವಂತೆ ತಿಳಿಸಿದರು.

ಕಬ್ಬು ಸಾಗಾಣಿಕೆ ವೆಚ್ಚ ಪಾವತಿ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು, ದಾಂಡೇಲಿ ಭಾಗದಲ್ಲಿ ಕಾಡಾನೆಗಳ ಹಾವಳಿ ಅಧಿಕವಾಗಿದ್ದು, ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಹಾಗೂ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಕಬ್ಬು ಬೆಳಗಾರರು ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪ ವಿಭಾಗಾಧಿಕಾರಿ ಕನಿಷ್ಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣಕರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ