ಮನುಕುಲದ ವಿನಾಶಕ್ಕೆ ರಾಸಾಯನಿಕ ಕಾರಣ: ಈಚಗಟ್ಟ ಸಿದ್ದವೀರಪ್ಪ

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ಡಿಸೆಂಬರ್ ತಿಂಗಳ ಬೆಳದಿಂಗಳ ಸವಿ ಭೋಜನ ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ಮಾತು. ಇವತ್ತಿನ ಆಧುನಿಕ ಕೃಷಿ ಸುಮಾರು ಶೇ.90ರಷ್ಟು ಬೆಳೆ ರಾಸಾಯನಿಕ ಮಿಶ್ರಿತ ಬೆಳೆ, ಉತ್ತಮ ಸಾವಯುವ ಆಹಾರ ಸೇವನೆ ಅವಶ್ಯ ಎಂದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ರಾಸಾಯನಿಕ ಬಂದು ಮನುಕುಲದ ವಿನಾಶಕ್ಕೆ ದಾರಿ ಮಾಡಿಕೊಟ್ಟಿದೆ, ವಾತಾವರಣ, ಗಾಳಿ, ಭೂಮಿ, ಪ್ರಕೃತಿ ರೋಗ ಗ್ರಸ್ತವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ಈಚಗಟ್ಟ ಸಿದ್ದವೀರಪ್ಪ ಹೇಳಿದರು.

ತಾಲೂಕಿನ ಮಳಲಿ ಗ್ರಾಮದಲ್ಲಿ ವಿಸ್ಮಯ ಗೋ ಮಂದಿರ ವತಿಯಿಂದ ಆಯೋಜಿಸಲಾಗಿದ್ದ ಡಿಸೆಂಬರ್ ತಿಂಗಳ ಬೆಳದಿಂಗಳ ಸವಿ ಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಕಲ ರೋಗಗಳು ಆಧುನಿಕ ಕೃಷಿಯ ಕೊಡುಗೆಯಾಗಿದೆ. ದೈಹಿಕ ಶ್ರಮದಿಂದ ದೂರ ಇದ್ದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಇವತ್ತಿನ ಆಧುನಿಕ ಕೃಷಿ ಸುಮಾರು ಶೇ.90ರಷ್ಟು ಬೆಳೆ ರಾಸಾಯನಿಕ ಮಿಶ್ರಿತ ಬೆಳೆಗಳೇ ಆಗಿವೆ, ಹಳ್ಳಿಗಳ ಸಮೃದ್ಧತನ ನಾಶ ಮಾಡಿದ್ದೆ ವಿಜ್ಞಾನ ಎಂದರು

ಆಡು ಮುಟ್ಟದ ಸೊಪ್ಪು, ತುಂಬಿ, ದತ್ತೂರಿ, ಇವು ಅತಿ ಕಡಿಮೆ ನೀರು ತೆಗೆದುಕೊಳ್ಳುವ ಸಸಿಯಾಗಿದ್ದು ಇಂಥವುಗಳನ್ನು ಕ್ರಾಸ್ ಮಾಡಿ ಏಕೆ ಕಡಿಮೆ ನೀರು ತೆಗೆದುಕೊಳ್ಳುವ ಬೆಳೆಯನ್ನು ರೈತರಿಗೆ ವಿಜ್ಞಾನಿಗಳು ಕೊಡಬಾರದು. ಗೋವಿನ ಉತ್ಪನ್ನಗಳು ಆರೋಗ್ಯಕ್ಕೆ ಆಸರೆಯಾಗಿವೆ. ನೂರು ವರ್ಷ ಬದುಕು ಆಸೆ ಇದ್ದರೆ ಮೊದಲು ರಾಸಾಯನಿಕ ಮುಕ್ತ ಮಾಡಿ. ನಾಟಿ ಹಸು ನಾಡಿಗೆಲ್ಲ ಮಾದರಿ. ಸಿರಿಧಾನ್ಯ ಸಿರಿವಂತರ ಆಹಾರ ವಾಗಿದೆ. ಉತ್ತಮ ಆರೋಗ್ಯಕ್ಕಾಗಿ ರಾಜ್ಯವೇ ಹೊಸದುರ್ಗದ ಜನರ ಬಳಿ ಬರಬೇಕು. ಆ ರೀತಿಯಾದ ಮಾದರಿ ತಾಲೂಕು ಮಾಡಿ ಎಂದರು.

ಬ್ರಹ್ಮ ವಿದ್ಯಾನಗರದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಮಾತನಾಡಿ, ಬೆಳದಿಂಗಳ ಸವಿಭೋಜನ ಕಾರ್ಯಕ್ರಮವು ನೆತ್ತಿಯ ಹಸಿವು ನೀಗಿಸುವ ಕಾರ್ಯಕ್ರಮವಾಗಿದೆ, ನೆತ್ತಿಯ ಹಸಿವು ಎಂದರೆ ಜ್ಞಾನದ ಹಸಿವು ಎಂದರ್ಥ. ಮಾನವ ಜನ್ಮ ತಾಳಿರುವುದೇ ಜ್ಞಾನಪಡೆಯಲು. ಮನುಷ್ಯ ತನ್ನ ರಾಕ್ಷಸ ಗುಣವನ್ನು ಹೋಗಲಾಡಿಸಿದರೆ ಮಾನವ ನಾರಾಯಣನಾಗುವನು ಎಂದರು.

ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬುದು ಗೊತ್ತಿದ್ದರೂ ಸರ್ಕಾರ ಆದಾಯ ಬರುತ್ತದೆ ಎಂದು ಜನರಿಗೆ ವಿಷ ಉಣಿಸುವ ಕೆಲಸ ಮಾಡುತ್ತಿದೆ, ಇದು ಎಲ್ಲಾ ಸರ್ಕಾರಗಳಲ್ಲೂ ಸಾಮಾನ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು ಎಲ್ಲರಿಗೂ ಜೀವ ಕೊಡುವ ರೈತರ ಕೈಗಳು ಇಂದು ಬೇಡುವ ಕೈಗಳಾಗಿವೆ ಎಂದರು.

ಮುಖಂಡ ಆಗ್ರೋ ಶಿವಣ್ಣ ಮಾತನಾಡಿ, ಸಾವಯವ ಕೃಷಿ ಎಂದರೆ ಸಾವಿಲ್ಲದ ಕೃಷಿ ಯಾಗಿದೆ. ರಾಸಾಯನಿಕ ಕೃಷಿಯಿಂದ ಬರುವ ಕಾಯಿಲೆ ಇನ್ನೂ 200 ವರ್ಷ ಕಳೆದರೂ ಗುಣಮುಖವಾಗದು, ಸಾವಯವ ಕೃಷಿ ಮಾಡುವ ಮುಖಾಂತರ ನಮ್ಮ ನಾಡಿಗೆ ಮತ್ತು ಮಕ್ಕಳಿಗೆ ಆರೋಗ್ಯ ಒದಗಿಸಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜೇನು ಕೃಷಿಕ ಬೈರೇಶ್, ರೈತ ಮುಖಂಡರಾದ ಮಹೇಶ್ವರಪ್ಪ ನೀರಗುಂದ ರಘು, ತೀರ್ಥಪ್ಪ, ಸೇರಿದಂತೆ ಹಲವು ಮುಖಂಡರು ಹಾಜರಿದ್ದರು

ಕಾರ್ಯಕ್ರಮದ ಕೊನೆಯಲ್ಲಿ ನವಣೆ ಪಾಯಸ, ಮೊಳಕೆ ಬರಿಸಿದ ಸಜ್ಜೆ ಕೋಸಂಬರಿ ಮತ್ತು ಗಾಣದ ಎಣ್ಣೆ, ಸಾವಯವ ಉಪ್ಪಿನಿಂದ ತಯಾರಿಸಿದ ರುಚಿಯಾದ ಭೋಜನವನ್ನು ಬೆಳದಿಂಗಳ ಬೆಳಕಿನಲ್ಲಿ ನೆಲದಮೇಲೆ ಕುಳಿತು ಬಾಳೆ ಎಲೆಯಲ್ಲಿ ಸವಿದರು.

Share this article