- ಹೊನ್ನಾಳಿ ತಾಲೂಕು ಕಚೇರಿ ಕಾರ್ಯಕ್ರಮದಲ್ಲಿ ವೀರಣ್ಣ ಬೆನಕನಹಳ್ಳಿ ಶ್ಲಾಘನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕಿತ್ತೂರು ರಾಣಿ ಚೆನ್ನಮ್ಮ ಅಪ್ರತಿಮ ಸಾಹಸಿ, ಉತ್ತಮ ಆಡಳಿತಗಾರ್ತಿ. ತನ್ನ ಕಿತ್ತೂರು ಸಂಸ್ಥಾನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬ್ರಿಟಿಷರ ವಿರುದ್ಧ ತೋರಿದ ಧೈರ್ಯ, ಸಾಹಸ, ಎದೆಗಾರಿಕೆ ವರ್ಣಿಸಲು ಸಾಧ್ಯವಿಲ್ಲ ಎಂದು ತಾಲೂಕು ಪಂಚಮಸಾಲಿ ಸಮಾಜ ಅಧ್ಯಕ್ಷ ವೀರಣ್ಣ ಬೆನಕನಹಳ್ಳಿ ಹೇಳಿದರು.ಬುಧವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯ ಪಂಚಮಸಾಲಿ ಸಮಾಜದ ಪದಾಧಿಕಾರಿಗಳು ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿಗೆ ಬದಲಾಗಿ, ವಿಜಯೋತ್ಸವ ಆಚರಿಸುವಂತೆ ಕರೆ ನೀಡಿದ್ದು, ಅದೇ ರೀತಿ ನಾವೆಲ್ಲರೂ ಮುಂದುವರಿಯೋಣ ಎಂದರು.
ಕಿತ್ತೂರು ರಾಣಿ ಚನ್ಮಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಂಬಂಧ ತಾಯಿ ಮಗನ ಸಂಬಂಧವಾಗಿದ್ದು, ಐತಿಹಾಸಿಕವಾಗಿ ಪ್ರಸಿದ್ಧಿಯಾಗಿದೆ. ಕೇಂದ್ರ ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮನ ಸವಿನೆನಪಿಗಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವುದು ಸಮಾಜಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದರು.ಪಂಚಮಸಾಲಿ ಸಮಾಜ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟ್ಟಣಶೆಟ್ಟಿ ಪರಮೇಶ್ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ಒಂದು ಕಿರೀಟವನ್ನು ತಂದುಕೊಟ್ಟ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಎಂದರು.
ಉಪವಿಭಾಗಾಧಿಕಾರಿ ಅಭಿಷೇಕ್ ಅವರು ರಾಣಿ ಚೆನ್ನಮ್ಮನ ಹೋರಾಟದ ಇತಿಹಾಸ ಕುರಿತು ಮಾತನಾಡಿದರು. ಹಿರೇಮಠದ ರೈತ ಮುಖಂಡ ಬಸವರಾಜಪ್ಪ ಹಾಗೂ ವರದಿಗಾರ ಗಿರೀಶ್ ನಾಡಿಗ್ ಮಾತನಾಡಿದರು.ಸಮಾರಂಭದಲ್ಲಿ ತಹಸೀಲ್ದಾರ್ ಪಟ್ಟರಾಜಗೌಡ, ತಾಲೂಕು ಯುವ ಘಟಕ ಅಧ್ಯಕ್ಷರಾದ ಹಾಲೇಶ್, ಮಹಿಳಾ ಘಟಕ ಅಧ್ಯಕ್ಷೆ ಶಿಲ್ಪಾ ರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ, ರೈತ ಸಂಘದ ಅಧ್ಯಕ್ಷ ಕೆ.ಸಿ. ಬಸವರಾಜಪ್ಪ, ಮಾಜಿ ಸೈನಿಕ ವಾಸಪ್ಪ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
- - - -23ಎಚ್.ಎಲ್.ಐ1:ಹೊನ್ನಾಳಿ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಅಂಗವಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ಸುರೇಂದ್ರಗೌಡ, ತಹಸೀಲ್ದಾರ್ ಪಟ್ಟರಾಜಗೌಡ, ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಅವರು ಪುಷ್ಪನಮನ ಸಲ್ಲಿಸಿದರು.