ಧಾರವಾಡ:
ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿ ಗುರುವಾರ ಸಂಭ್ರಮದಿಂದ ಜರುಗಿತು.
ಆರಂಭದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಸಮಾಜದ ವಿವಿಧ ಗಣ್ಯರು, ಜನಪ್ರತಿನಿಧಿಗಳು ಛತ್ರಪತಿ ಶಿವಾಜಿ ಶೌರ್ಯ ಮತ್ತು ಆಡಳಿತ ವೈಖರಿ ಸ್ಮರಿಸಿದರು. ಬೆಳಗ್ಗೆ ಶಿವಾಜಿ ಮೂರ್ತಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.ವಿಧಾನ ಪರಿಷತ್ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಮಾತನಾಡಿ, ಶಿವಾಜಿ ಮಹಾರಾಜರು ಒಂದು ಸಮಾಜಕ್ಕೆ ಸೀಮಿತವಲ್ಲ, ಅವರು ದೇಶದ ಅಸ್ಮಿತೆ. ಅವರ ಶಿಸ್ತು, ಸ್ತ್ರೀ ಗೌರವ ಮತ್ತು ರಾಷ್ಟ್ರಪ್ರೇಮ ಯುವ ಪೀಳಿಗೆಗೆ ದಾರಿದೀಪ. ಶಿವಾಜಿ ಕೇವಲ ಅಪ್ರತಿಮ ಯೋಧರಲ್ಲ, ಅವರು ಶಿಸ್ತುಬದ್ಧ ಆಡಳಿತಗಾರ. ಅವರ ಸೈನ್ಯದಲ್ಲಿ ಸರ್ವ ಧರ್ಮಿಯರಿಗೂ ಸ್ಥಾನವಿತ್ತು. ಅವರ ಹೋರಾಟ ಧರ್ಮದ ವಿರುದ್ಧವಲ್ಲ, ಅಧರ್ಮ ಮತ್ತು ಅನ್ಯಾಯ ವಿರುದ್ಧವಿತ್ತು ಎಂದರು.
ಪೊಲೀಸ್ ಮಕ್ಕಳ ವಸತಿ ಶಾಲೆ ಪ್ರಾಚಾರ್ಯ ಮಹಾದೇವಪ್ಪ ಯಾದವಾಡ, ಮರಾಠ ಮಂಡಳದ ಕಾರ್ಯಾಧ್ಯಕ್ಷ ಸುನೀಲ ಮೋರೆ, ಮುಖಂಡ ಭೀಮಪ್ಪ ಕಸಾಯಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಮರಾಠ ಮಂಡಳದ ಅಧ್ಯಕ್ಷ ಎಂ.ಎನ್. ಮೋರೆ ಮಾತನಾಡಿದರು.
ಇದಕ್ಕೂ ಮೊದಲು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಗಣ್ಯರನ್ನು ಸನ್ಮಾನಿಸಲಾಯಿತು. ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿ, ವಂದಿಸಿದರು. ಶಿವಾಜಿ ಮಹಾರಾಜರ ಜೀವನ ಚರಿತ್ರೆ ಸಾರುವ ಪವಾಡ ಹಾಗೂ ದೇಶಭಕ್ತಿ ಗೀತೆಗಳ ಗಾಯನ ಪ್ರಸ್ತುಪಡಿಸಿದರು. ಜತೆಗೆ ಪುಟಾಣಿ ಮಕ್ಕಳು ಶಿವಾಜಿ ಹಾಗೂ ಜಿಜಾಬಾಯಿ ಛದ್ಮವೇಷ ತೊಟ್ಟು ಗಮನ ಸೆಳೆದರು.ಛತ್ರಪತಿ ಶಿವಾಜಿ ಮಹಾರಾಜ ಸ್ತಬ್ಧಚಿತ್ರದ ಭವ್ಯ ಮೆರವಣಿಗೆಗೆ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡಿದರು. ನಗರದ ಶಿವಾಜಿ ವೃತ್ತದಿಂದ ಆರಂಭವಾದ ಮೆರವಣಿಗೆ ರೀಗಲ್ ಸರ್ಕಲ್, ಮಣಿಕಿಲ್ಲಾ, ಹರಿಮಂದಿರ, ಹೆಬ್ಬಳ್ಳಿ ಅಗಸಿ, ಶಿವಾಜಿ ರಸ್ತೆ, ಗಾಂಧಿ ಚೌಕ, ಸುಭಾಷ ರಸ್ತೆ, ವಿವೇಕಾನಂದ ವೃತ್ತ, ರಾಣಾ ಪ್ರತಾಪ ವೃತ್ತ, ವಿಜಯಾ ರಸ್ತೆ ಮೂಲಕ ಮರಳಿ ಮಂಡಳಕ್ಕೆ ಬಂದ ಸಂಪನ್ನಗೊಂಡಿತು.