ನೀಟ್ ಅಕ್ರಮ ಖಂಡಿಸಿ ಛಾತ್ರೋನ್ ಕಿ ಗೂಂಜ್ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Jul 24, 2026, 12:15 AM IST
 | Kannada Prabha

ಸಾರಾಂಶ

‘ನೀಟ್ ಹಗರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು ಎಂದು ಘೋಷಣೆಗಳನ್ನು ಕೂಗಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಶಿಕ್ಷಣ ವ್ಯವಸ್ಥೆ ಯಲ್ಲಿ ಪಾರದರ್ಶಕತೆ ಕಾಪಾಡುವಂತೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಗುರುವಾರ ‘ಛಾತ್ರೋನ್ ಕಿ ಗೂಂಜ್’ ಹೆಸರಿನಲ್ಲಿ ಬೃಹತ್ ಪ್ರತಿಭಟನೆಯನ್ನು ನಗರದಲ್ಲಿ ಗುರುವಾರ ನಡೆಸಲಾಯಿತು.

ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಕಾಂಗ್ರೆಸ್ ನಾನಾ ಬ್ಲಾಕ್ ಗಳು, ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ‘ಬಿಜೆಪಿ ಹಠವೋ–ದೇಶ ಬಚಾವೋ’, ‘ವಿದ್ಯಾರ್ಥಿಗಳಿಗೆ ನ್ಯಾಯ ಬೇಕು’, ‘ನೀಟ್ ಹಗರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು ಎಂದು ಘೋಷಣೆಗಳನ್ನು ಕೂಗಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಾಂಗ್ರೆಸ್ ಯುವ ಮುಖಂಡ ರವಿ ಭೋಸರಾಜು ಮಾತನಾಡಿ, ಸಂಸತ್ ಭವನ ಚಲೋ ಹೋರಾಟದಲ್ಲಿ ವಿದ್ಯಾರ್ಥಿಗಳ ಮೇಲೆ ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿಚಾರ್ಜ್ ನಡೆಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ನ್ಯಾಯಯುತವಾಗಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರ ಲಾಠಿಚಾರ್ಜ್ ಮಾಡಿ ದೌರ್ಜನ್ಯ ಎಸಗಿದೆ. ತಮ್ಮ ಹಕ್ಕಿಗಾಗಿ ಹೋರಾಡುವುದು ತಪ್ಪಾ? ಯುವಕರ ಸಮಸ್ಯೆ ಕೇಳದ ಇಂತಹ ಸರ್ಕಾರ ಬೇಕಾ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಪ್ರಶ್ನಿಸಿದರು.

ಭಗತ್ ಸಿಂಗ್, ಮಾಹಾತ್ಮಾ ಗಾಂಧೀ, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಖದೇವ, ರಾಜಗುರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಹಕ್ಕು, ಸರ್ಕಾರವನ್ನು ಆರಿಸುವ ಮತದಾನದ ಹಕ್ಕು, ಸಮಾನ ಶಿಕ್ಷಣದ ಹಕ್ಕು ನೀಡಿದ್ದಾರೆ ಆದರೆ ಬಿಜೆಪಿಯ ಕೇಂದ್ರ ಸರ್ಕಾರ ಎಸ್ಐಆರ್ ಮೂಲಕ ಮತದಾನದ ಹಕ್ಕು, ಪೇಪರ್ ಲೀಕ್ ಮೂಲಕ ಶಿಕ್ಷಣದ ಹಕ್ಕು, ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡುವ ಮೂಲಕ‌ ಸಂವಿಧಾನದತ್ತ ಹಕ್ಕು ಕಸಿದುಕೊಳ್ಳುತ್ತಿದ್ದಾರೆ, ಆಗಸ್ಟ್ ನಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ದೇಶ ವಿರೋಧಿ ಸರ್ಕಾರ ವನ್ನು ಕಿತ್ತೆಸೆಯಬೇಕು, ಹೋರಾಟವನ್ನು ಯಾವುದೇ ಕಾರಣಕ್ಕೆ ಸ್ಥಗಿತ ಗೊಳಿಸದೇ ತೀವ್ರಗೊಳಿಸುತ್ತೇವೆ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧರಾಗೋಣ ಎಂದು ನೀಡಿದರು.

ಜಂತರ್ ಮಂತರ್ ನಲ್ಲಿ ಹೋರಾಟ ನಡೆಸಿದ ವಿದ್ಯಾರ್ಥಿಗಳ ಮೇಲೆ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ದೇಶದ ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಹಲವು ವರ್ಷಗಳ ಶ್ರಮ ಹಾಗೂ ಭವಿಷ್ಯಕ್ಕೆ ಗಂಭೀರ ಧಕ್ಕೆಯಾಗಿದೆ. ಪರೀಕ್ಷಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಕುಸಿದಿದ್ದು, ತಪ್ಪಿತಸ್ಥರ ವಿರುದ್ಧ ಯಾವುದೇ ರಾಜಕೀಯ ಒತ್ತಡವಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇಲ್ಲದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಪಕ್ಷದ ಮುಖಂಡರು, ವಿವಿಧ ಸಂಘಟನೆಗಳ ಪಾದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಕಾರ್ಯಕರ್ತರು ಇದ್ದರು.

ಕೇಂದ್ರ ಸಚಿವ ಪ್ರಧಾನ್ ಅವರ ಅಣಕು ಶವ ಯಾತ್ರೆ:

ಇದೇ ವೇಳೆ ವಿವಿಧ ದಲಿತಪರ ಸಂಘಟನೆಗಳು ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಅಣಕು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅಣಕು ಶವ ಯಾತ್ರೆ ನಡೆಸಿದರು.

ಅಣಕು ಶವಯಾತ್ರೆಯಲ್ಲಿ ಶಾಸ್ತೋತ್ತರವಾಗಿ ನಡೆಸಿ, ದಾರಿ ಉದ್ದಕ್ಕೂ ಟಮಾಟೆ ಬಾರಿಸುತ್ತಾ ಮಂಡಕ್ಕಿ ತೂರಿದರು ನಂತರ ಪೂಜೆ ಸಲ್ಲಿಸಿ, ಅವರ ಭಾವಚಿತ್ರ ತುಳಿದು ಆಕ್ರೋಶ ವ್ಯಕ್ತಪಡಿಸಿದರು.

ಎಐಡಿಎಸ್‌ಒ ದಿಂದ ಪ್ರತಿಭಟನೆ:

ಸಂಸದ್ ಚಲೋ ಭಾಗವಾಗಿ ಸಂಸತ್ತಿನತ್ತ ತೆರಳುತ್ತಿದ್ದ ಜಂತರ್ ಮಂತರ್‌ನ ಪ್ರತಿಭಟಕಾರರ ಮೇಲೆ ಪೊಲೀಸರು ನಡೆಸಿರುವ ಲಾಠಿಚಾರ್ಜ್ ಖಂಡಿಸಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರುಗಡೆ ಎಐಡಿಎಸ್ ಒ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಬಸವರಾಜ,ಪಾದಾಧಿಕಾರಿಗಳಾದ ನಂದ ಗೋಪಾಲ್, ನಂದಿನಿ, ತೇಜ, ಸಂಗೀತ ಹಾಗೂ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಯರಗೇರಾದಲ್ಲಿ ರಾಷ್ಟ್ರಪತಿಗೆ ಮನವಿ:

NEET-UG ಪರೀಕ್ಷೆ ಸೋಲಿನಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು: ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತಕ್ಷಣ ಕ್ರಮ ಕೈಗೊಳ್ಳಲಿ ಆಗ್ರಹಿಸಿ ರಾಯಚೂರು ತಾಲೂಕಿನ ಯರಗೇರಾ ನಾಡ ತಹೇಸೀಲ್ದಾರರ ಕಚೇರಿ ಮುಂದೆ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಯರಗೇರಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಅಲ್ಲಿನ ಅಧಿಕಾರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಮುಂಜಾಹಿದ್ ಪಟೇಲ್ , ಎಂಡಿ ಇಸ್ಮಾಯಿಲ್,ಇಕ್ಬಾಲ್ ಅಹ್ಮದ್,ರಿಯಾಜ್ ಮಂಚಲ್, ಅಫ್ರೋಜ್ ಅಹ್ಮದ್, ಮೌಲನ ಬಷೀರ್ ಅಹ್ಮದ್, ಸಯ್ಯದ್ ಐಯಾಜ್, ಮುಹಮ್ಮದ್ ರಿಯಾಜ್ ಇದ್ದರು.* ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

ಕನ್ನಡಪ್ರಭ ವಾರ್ತೆ ಹಟ್ಟಿ ಚಿನ್ನದಗಣಿ

ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕಾಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ಸಮಾನ ಅವಕಾಶಗಳು ಇರಬೇಕು. ನೀಟ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಯತ್ತ ತಳ್ಳುತ್ತವೆ. ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ ಶಿಕ್ಷಣ ವ್ಯವಸ್ಥೆ ಯನ್ನು ಬಲಪಡಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಮಾಚನೂರು ಆಗ್ರಹಿಸಿದರು.

ನೀಟ್ ಪರೀಕ್ಷೆ ಅಕ್ರಮ ಕುರಿತು ಭಾರತ ವಿದ್ಯಾರ್ಥಿ ಫೆಡರೇಶನ್ ಹಟ್ಟಿ ಘಟಕದ ನೇತೃತ್ವದಲ್ಲಿ ಗುರುವಾರ ಹಟ್ಟಿ ಪಟ್ಟಣದಲ್ಲಿ ನಡೆದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ಪ್ರಜಾಪ್ರಭುತ್ವದ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ಧ್ವನಿಯನ್ನು ಸರ್ಕಾರ ಆಲಿಸಿ, ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸವನ್ನು ಮರು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಾವಿರಾರು ವಿದ್ಯಾರ್ಥಿಗಳೊಂದಿಗೆ ಹಳೆಯ ಬಸ್ ನಿಲ್ದಾಣದಿಂದ ಆರಂಭವಾದ ಪ್ರತಿಭಟನಾ ರ‍್ಯಾಲಿಯು ಹೊಸ ಬಸ್ ನಿಲ್ದಾಣ ಮೂಲಕ ಕ್ಯಾಂಪ್ ಬಸ್ ನಿಲ್ದಾಣದವರೆಗೆ ಸಾಗಿತು. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಶಿಕ್ಷಣ ನೀತಿ, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ವಿದ್ಯಾರ್ಥಿ ವಿರೋಧಿ ಧೋರಣೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನಾಕಾರರು ಭಾರತದ ರಾಷ್ಟ್ರಪತಿ ಅವರಿಗೆ ಬರೆದ ಮನವಿ ಪತ್ರವನ್ನು ಲಿಂಗಸುಗೂರು ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಮೂಲಕ ಸಲ್ಲಿಸಿದರು.

ವಿನಾಯಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರಸಪ್ಪ ಯಾದವ್ ಮಾತನಾಡಿದರು. ಪ್ರಮುಖರಾದ ರಮೇಶ ಜೆ., ಮೌನೇಶ ಕಡ್ಡೋಣಿ, ಡಿವೈಎಫ್‌ಐ ಮುಖಂಡರಾದ ಇಮ್ರಾನ್ ಪಾಷಾ, ರಿಯಾಜ್ ಖುರೇಷಿ, ಪಯಾಜ್, ಮಹಿಬೂಬ್, ಮಹಾಂತೇಶ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ವನಜಾಕ್ಷಿ, ಸಾಹೀರಾ ಬಾನು, ಶಾಂತಕುಮಾರಿ, ಸಿಐಟಿಯು ಮುಖಂಡರಾದ ಯಂಕೋಬ್ ಮಿಯ್ಯಾಪೂರು, ರಮೇಶ ಬಾಬು, ಜಮದಗ್ನಿ ಕೋಠಾ, ಬಾಬು ಭೂಪುರ್, ಮಲ್ಲಿಕಾರ್ಜುನ್ ಕಡೇಚೂರು ಸೇರಿದಂತೆ ನಾನಾ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಇದ್ದರು.ನೀಟ್‌ ಪ್ರಶ್ನೆಪತ್ರಿಕೆಯ ಸೋರಿಕೆ: ಸಚಿವರ ರಾಜೀನಾಮೆಗೆ ಆಗ್ರಹಮುದಗಲ್: ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಯಲ್ಲಿನ ಅಕ್ರಮಗಳನ್ನು ತಡೆಗಟ್ಟಲು ಕೇಂದ್ರ ಶಿಕ್ಷಣ ಇಲಾಖೆ ಮತ್ತು ಸಚಿವರು ವಿಫಲರಾಗಿದ್ದು, ಕೂಡಲೇ ಕೇಂದ್ರ ಶಿಕ್ಷಣ ಇಲಾಖೆಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸೋಲಿಡಾರಿಟಿ ಯುತ್ ಮೂವ್ ಮೆಂಟ್‌ನ ಮುದಗಲ್‌ ಘಟಕದ ಪದಾಧಿಕಾರಿಗಳು ಬುಧವಾರ ನಾಡ ತಹಸೀಲ್ದಾರ್‌ ತುಳುಜಾರಾಮ್ ಸಿಂಗ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಆಗಬೇಕು, ಪರೀಕ್ಷಾ ಅಕ್ರಮ, ಭ್ರಷ್ಟಾಚಾರ, ನಿರ್ಲಕ್ಷ್ಯ ಅಥವಾ ಪರೀಕ್ಷೆಯ ಗೌಪ್ಯತೆಯನ್ನು ಕಾಪಾಡುವಲ್ಲಿ ವಿಫಲರಾದ ಎಲ್ಲ ವ್ಯಕ್ತಿಗಳು, ಅಧಿಕಾರಿಗಳು ಹಾಗೂ ಸಂಸ್ಥೆಗಳ ವಿರುದ್ಧ ಕಾನೂನುಬದ್ಧ ಮತ್ತು ಇಲಾಖಾ ಮಟ್ಟದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಸೇರಿದಂತೆ ಅನೇಕ ಮನವಿಗಳುಳ್ಳ ಪತ್ರವನ್ನು ನಾಡ ತಹಸೀಲ್ದಾರ್‌ಗೆ ಸಲ್ಲಿಸಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಫಾರೂಕ್ ಕಲಾಂ, ಅಮನ ಶೇಖ, ಯಾಕೂಬ್, ರೆಹಮಾನ್ ಮೌಲಾನಾ, ಮಂಜೂರ ಮೇಸ್ತ್ರಿ ,ಖಾಸಿಂ, ಆಸೀಫ್ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದಲ್ಲಿ ಅರಾಜಕತೆ ಸೃಷ್ಟಿಗೆ ಕಾಂಗ್ರೆಸ್ ಯತ್ನ: ರೇಣು
ಸಿರಿಗೆರೆ ರಸ್ತೆಗೆ ₹೧೦ ಕೋಟಿ ಅನುದಾನ: ಶಾಸಕ ಡಾ.ಚಂದ್ರಪ್ಪ