ದಾರಿತಪ್ಪಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂ.1

KannadaprabhaNewsNetwork |  
Published : May 01, 2024, 01:20 AM IST
ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ ಡೇಂಜರ್‌ ಕಾಂಗ್ರೆಸ್‌ ಎಂಬ ಪೋಸ್ಟರ್‌ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ರಾಜ್ಯದ ಇತಿಹಾಸದಲ್ಲಿ ಒಂದೇ ಕಂತಿನಲ್ಲಿ ಇಷ್ಟು ಪ್ರಮಾಣದ ಬರ ಪರಿಹಾರ ಹಣ ಬಿಡುಗಡೆಯಾಗಿದ್ದು ಇದೇ ಮೊದಲು. ನಮ್ಮ ಸರ್ಕಾರ ಇದ್ದಾಗ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದೇವೆ.

ಹುಬ್ಬಳ್ಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ದಾರಿತಪ್ಪಿಸುವಲ್ಲಿ ನಂ. 1. ಹಿಂದಿನ ತಮ್ಮ ಯುಪಿಎ ಸರ್ಕಾರದ ಅವಧಿಯಲ್ಲಿ ಬರ ಆವರಿಸಿದ ವೇಳೆ ರಾಜ್ಯಕ್ಕೆ ನೀಡಿದ ಪರಿಹಾರಧನ ಎಷ್ಟು ಎಂಬುದನ್ನು ಜನರಿಗೆ ತಿಳಿಸಲಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ ಹರಿಹಾಯ್ದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಡೇಂಜರ್‌ ಕಾಂಗ್ರೆಸ್‌ ಎಂಬ ಪೋಸ್ಟರ್‌ ಬಿಡುಗಡೆಗೊಳಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಬರ ಪರಿಸ್ಥಿತಿ ಅಧ್ಯಯನ ಮಾಡಿ ಚುನಾವಣಾ ನೀತಿ ಸಂಹಿತೆ ಇದ್ದರೂ ಚುನಾವಣಾ ಆಯೋಗಕ್ಕೆ ಮನವಿ ಮಾಡಿ ಕರ್ನಾಟಕ, ಅಸ್ಸಾಂ ಹಾಗೂ ಕೇರಳ ರಾಜ್ಯಗಳಿಗೆ ಬರ ಪರಿಹಾರ ಬಿಡುಗಡೆ ಮಾಡಿದೆ. ರಾಜ್ಯದ ಇತಿಹಾಸದಲ್ಲಿ ಒಂದೇ ಕಂತಿನಲ್ಲಿ ಇಷ್ಟು ಪ್ರಮಾಣದ ಬರ ಪರಿಹಾರ ಹಣ ಬಿಡುಗಡೆಯಾಗಿದ್ದು ಇದೇ ಮೊದಲು. ನಮ್ಮ ಸರ್ಕಾರ ಇದ್ದಾಗ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದೇವೆ. ಈಗ ನೀವು ಆ ಕೆಲಸ ಮಾಡದಿದ್ದರೆ ನೀವು ರೈತರ ವಿರೋಧಿಗಳು ಎಂಬುದು ಸಾಬೀತಾಗುತ್ತದೆ ಎಂದರು.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ಹಣ ಆನೆಗೆ ಅರೆಕಾಸಿನ ಮಜ್ಜಿಗೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಉತ್ತರಿಸಿದ ಅಶೋಕ, ಯುಪಿಎ ಸರ್ಕಾರ ಇದ್ದಾಗ ರಾಜ್ಯ ಸರ್ಕಾರಕ್ಕೆ ಸಾಸಿವೆ ಕಾಳಷ್ಟು ಪರಿಹಾರ ನೀಡಿಲ್ಲ. ಮನಮೋಹನ್‌ ಸಿಂಗ್ ನೇತೃತ್ವದ ಸರ್ಕಾರ ಇದ್ದಾಗ ರಾಜ್ಯಕ್ಕೆ ಭರಪೂರ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ನಮ್ಮ ಮಾರ್ಕ್ಸ್‌ ಕಾರ್ಡ್‌:

2005ರಿಂದ 2014ರ ವರೆಗೆ ಯುಪಿಎ ಸರ್ಕಾರ ಇದ್ದಾಗ ನಾವು ₹44,838 ಕೋಟಿ ಬರ ಪರಿಹಾರ ಕೇಳಿದ್ದೆವು. ಅವರು ₹4,571 ಕೋಟಿ ನೀಡಿದ್ದರು. 2014ರಿಂದ ಈ ವರೆಗೆ ಎನ್‌ಡಿಎ ಸರ್ಕಾರಕ್ಕೆ ರಾಜ್ಯ ಸರ್ಕಾರ ₹ 25,591 ಕೋಟಿ ಕೇಳಿತ್ತು. ₹15,920 ಕೋಟಿ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಶೇ. 62.21ರಷ್ಟು ಬಿಡುಗಡೆ ಆಗಿದ್ದು, ಇದು ನಮ್ಮ ಮಾರ್ಕ್ಸ್‌ ಕಾರ್ಡ್‌ ಎಂದರು. ಈಗ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಆಗ ರಾಜ್ಯದ ಜನರ ಹಣಕ್ಕೆ ಬೆಲೆ ಇರಲಿಲ್ಲವೇ‌?, ಆಗ ಬಹುತೇಕ ನಿಮ್ಮವರೇ ಸಂಸದರಿದ್ದರು. ಅವರೇನು ನಿದ್ದೆ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ಸಿನ ಪಾತ್ರವಿಲ್ಲ:

ರಾಜ್ಯದ ಬರ ಪರಿಸ್ಥಿತಿ ಅರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಬರ ಪರಿಹಾರ ಹಣ ಬಿಡುಗಡೆಗೆ ಅನುಮತಿ ಕೋರಿದ್ದರು. ಇದು ಗೊತ್ತಾಗಿ ಕಾಂಗ್ರೆಸ್‌ನವರು ನ್ಯಾಯಾಲಯದ ಮೊರೆ ಹೋಗಿ, ನಾವೇ ಹೋರಾಟ ಮಾಡಿ ಬಿಡುಗಡೆ ಮಾಡಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಇದರಲ್ಲಿ ನಿಮ್ಮ ಪಾತ್ರ ಏನೂ ಇಲ್ಲ ಎಂದು ಅಶೋಕ ಹರಿಹಾಯ್ದರು.

ಸಾಮಾಜಿಕ ನ್ಯಾಯದ ಪರ ಮಾತನಾಡುವ ಕಾಂಗ್ರೆಸ್‌ ಸರ್ಕಾರ ಒಬಿಸಿ ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ಕೊಡಲು ಹೊರಟಿದೆ. ಧರ್ಮಾಧಾರಿತ ಮೀಸಲಾತಿ ಇಲ್ಲ ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ನೀವು ಸಂವಿಧಾನ ರಕ್ಷಕರೋ, ಭಕ್ಷಕರೋ’ ಎಂದು ಪ್ರಶ್ನಿಸಿದರು.

ವಿಧಾಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಎಂ. ನಾಗರಾಜ, ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ದತ್ತಮೂರ್ತಿ ಕುಲಕರ್ಣಿ, ಪ್ರಶಾಂತ ಕೆಡಂಜಿ, ಪಕ್ಷದ ನಾಯಕಿ, ನಟಿ ಮಾಳವಿಕಾ, ಗುರುಪಾಟೀಲ ಇದ್ದರು.ಪ್ರಜ್ವಲ್‌ ಸಂಸದರಾಗಿದ್ದು ಯಾರಿಂದ?

ಪ್ರಜ್ವಲ್‌ ರೇವಣ್ಣ ಅವರು ಈ ಹಿಂದೆ ಸಂಸದರಾಗಿದ್ದು ಯಾರಿಂದ? ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾದವರು. ಈ ಕುರಿತು ಕಾಂಗ್ರೆಸ್ಸಿನವರು ಉತ್ತರಿಸಬೇಕು. ಈಗ ಅವರ ಅಶ್ಲೀಲ ವಿಡಿಯೋ ಈಗ ಎಲ್ಲಡೆ ಹರಿದಾಡುತ್ತಿದ್ದು, ಈಗಾಗಲೇ ಸರ್ಕಾರ ಎಸ್‌ಐಟಿಗೆ ವಹಿಸಿದೆ. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲಿ, ತಪ್ಪಿತಸ್ಥರೆಂದು ಸಾಬೀತಾದರೆ ಶಿಕ್ಷೆ ನೀಡಲಿ ಎಂದು ಅಶೋಕ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ