ಕನ್ನಡಪ್ರಭ ವಾರ್ತೆ ಮೈಸೂರು
ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ನ್ಯಾಯಲಯಗಳಿಗಿಂತ ಜನತಾ ನ್ಯಾಯಾಲಯ ಮುಖ್ಯ. ಆತ್ಮಸಾಕ್ಷಿ ಮುಖ್ಯ ಎನ್ನುವ ಮಹಾತ್ಮಗಾಂಧಿ ಅವರ ಮಾತನ್ನು ಅಧಿಕಾರಿಗಳಿಗೆ ನೆನಪಿಸಿದರು.
ನೆಪ ಹೇಳುವುದು, ಸುಳ್ಳು ಹೇಳುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ಒಂದು ಸುಳ್ಳು ಹೇಳಿದರೆ ಅದನ್ನು ಸಮರ್ಥಿಸಲು ಮತ್ತೊಂದು, ಇನ್ನೊಂದು ಸುಳ್ಳನ್ನು ಹೇಳುತ್ತಲೇ ಹೋಗಬೇಕಾಗುತ್ತದೆ. ಹೀಗಾಗಿ ಸುಳ್ಳು ಮತ್ತು ನೆಪ ಹೇಳುವ ಅಧಿಕಾರಿಗಳು ಸಿಕ್ಕಿ ಬೀಳುತ್ತಾರೆ. ಇದು ನಿಮ್ಮ ವೃತ್ತಿ ಜೀವನಕ್ಕೆ ಒಳ್ಳೆಯದಲ್ಲ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ಕಾನೂನು ಸುವ್ಯವಸ್ಥೆ ಸರಿ ಇಲ್ಲದಿದ್ದರೆ ರಾಜ್ಯದ ಅಭಿವೃದ್ಧಿ ಮತ್ತು ಆರ್ಥಿಕತೆಯ ಪ್ರಗತಿ ಅಸಾಧ್ಯ. ಪೊಲೀಸ್ ಇಲಾಖೆಯ ಬೇಜವಾಬ್ದಾರಿಯಿಂದ ಅಪರಾಧಗಳು ಆಗಬಾರದು. ರಾಜ್ಯದ ಬಂಡವಾಳ ಹೂಡಿಕೆಗೂ, ಕಾನೂನು-ಸುವ್ಯವಸ್ಥೆಗೂ ನೇರಾನೇರ ಸಂಬಂಧವಿದೆ. ಈ ಬಗ್ಗೆ ಕಟ್ಟೆಚ್ಚರವಹಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ನಾವು ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವುದನ್ನು ಮೊದಲ ಆಧ್ಯತೆಯನ್ನಾಗಿ ಪರಿಗಣಿಸಬೇಕು. ಈ ಐದೂ ಗ್ಯಾರಂಟಿಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶವೇ ಇಲ್ಲದಂತೆ ನೇರವಾಗಿ ಫಲಾನುಭವಿಗಳ ಮಡಿಲಿಗೆ ಸೇರುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ವಿಚಾರದಲ್ಲಿ ಅಸಡ್ಡೆ ಮತ್ತು ಉದಾಸೀನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸರ್ಕಾರ ಅಗತ್ಯವಿದ್ದಷ್ಟು ಹಣವನ್ನು ನೀಡುತ್ತಿದೆ. ಈ ಹಣ ಫಲಾನುವಿಗಳಿಗೆ ತಲುಪದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ಅಂತಹ ಅಧಿಕಾರಿಗಳನ್ನು ನಮ್ಮ ಸರ್ಕಾರ ಸಹಿಸಲ್ಲ. ಜಿಲ್ಲಾ ಮಂತ್ರಿಗಳೂ ಈ ವಿಚಾರದಲ್ಲಿ ಮುಲಾಜು ತೋರಿಸಬಾರದು. ಮೈಸೂರು ಸಾಂಸ್ಕೃತಿಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಪ್ರತಿ ವರ್ಷ ದಸರಾ ಮಹೋತ್ಸವವನ್ನು ಸರ್ಕಾರ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಕಳೆದ ವರ್ಷ ಬರಗಾಲ ಇತ್ತು. ಭೀಕರ ಬರಗಾಲ. ಈ ವರ್ಷ ಮಳೆ ಆಗಿದೆ. ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಎಲ್ಲಾ ಜಲಾಶಯಗಳೂ ತುಂಬಿವೆ. ಹೀಗಾಗಿ ಬರಗಾಲ ಇಲ್ಲದಿರುವುದರಿಂದ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ದಸರಾ ಆಚರಿಸುವ ಜೊತೆಗೆ ವೈಭವ ಮತ್ತು ಸಂಭ್ರಮಕ್ಕೆ ಕೊರತೆ ಆಗಬಾರದು. ನಮ್ಮ ಪರಂಪರೆ, ಚರಿತ್ರೆ, ಇತಿಹಾಸದ ವೈಭವ ಮಹೋತ್ಸವದಲ್ಲಿ ಮತ್ತು ಮಹೋತ್ಸವದ ಪರಿಣಾಮದಲ್ಲಿ ಜನರಿಗೆ ಕಾಣಿಸಬೇಕು ಎಂದು ಅವರು ಹೇಳಿದರು.
ಸುಮಾರು ಇಪ್ಪತ್ತು ಸಾವಿರ ಕೋಟಿ ಸರ್ಕಾರದ ಮೇಲೆ ಹೊರೆ ಆದರೂ ಏಳನೇ ವೇತನ ಆಯೋಗ ಜಾರಿ ಮಾಡಿ ನಿಮ್ಮ (ಅಧಿಕಾರಿಗಳ-ಸಿಬ್ಬಂದಿಯ) ವೇತನ ಹೆಚ್ಚಿಸಿದ್ದೇವೆ. ಗ್ಯಾರಂಟಿಗಳಿಗೆ ಹಣ ಕೊಟ್ಟೂ ಕೂಡ ನಿಮ್ಮ ಕೆಲಸಕ್ಕೆ ತಕ್ಕಂತೆ ಸಂಬಳ ಕೊಡಬೇಕು ಎನ್ನುವ ಉದ್ದೇಶದಿಂದ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಿಸಿದ್ದೇವೆ. ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ಜಾತಿ ಸೋಂಕು ಇರಬಾರದು. ಸಂವಿಧಾನ ಮತ್ತು ಜಾತ್ಯತೀತವಾಗಿ ಸರ್ಕಾರದ ಕಾರ್ಯಕ್ರಮಗಳನ್ನು, ಜನರ ಸೇವೆಯನ್ನು ಮಾಡಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್, ಶಾಸಕರಾದ ಜಿ.ಟಿ. ದೇವೇಗೌಡ, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ಜಿ.ಡಿ. ಹರೀಶ್‌ಗೌಡ, ಕೆ. ಹರೀಶ್‌ಗೌಡ, ವಿಧಾನ ಪರಿಷತ್‌ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಡಾ. ಯತೀಂದ್ರ ಸಿದ್ದರಾಮಯ್ಯ, ಕೆ. ವಿವೇಕಾನಂದ, ಸಿ.ಎನ್. ಮಂಜೇಗೌಡ, ಗ್ಯಾರಂಟಿ ಯೋಜನೆ ಜಾರಿ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಇದ್ದರು.