ಹುಬ್ಬಳ್ಳಿ
ಇಲ್ಲಿನ ಈಶ್ವರನಗರದ ಶ್ರೀ ವೈಷ್ಣೋದೇವಿ ಮಂದಿರದ ಮುಖ್ಯ ಅರ್ಚಕ ದೇವಪ್ಪಜ್ಜ ವನಹಳ್ಳಿ (63) ಹತ್ಯೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ತನ್ನ ಕುಟುಂಬದ ವಿರುದ್ಧ ಮಾಟ ಮಂತ್ರ ಮಾಡಿ ಪೂಜೆ ಮಾಡಿದ್ದನ್ನೇ ದ್ವೇಷವನ್ನಾಗಿಸಿಕೊಂಡು ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರ ಎದುರಿಗೆ ತಪ್ಪೊಪ್ಪಿಕೊಂಡಿದ್ದಾನಂತೆ.
ಪತ್ರಿಕಾಗೋಷ್ಠಿಯಲ್ಲಿ ಕೊಲೆಯ ವಿವರ, ಆರೋಪಿ ಬಂಧನದ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ, ಕೊಲೆಯಾದ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಸಂತೋಷ ಭೋಜಗಾರ (44) ಎಂಬಾತನೇ ಬಂಧಿತ ಆರೋಪಿ. ಈತನನ್ನು ಸೋಮವಾರ ರಾತ್ರಿ ಚೆನ್ನಮ್ಮ ಸರ್ಕಲ್ ಬಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸೇಡಿಗಾಗಿ ಕೊಲೆ:
ಆರೋಪಿ ಸಂತೋಷನ ಕುಟುಂಬದ ವಿರುದ್ಧ ಆತನ ಕೆಲ ಸಂಬಂಧಿಕರು ದೇವಪ್ಪಜ್ಜನ ಬಳಿ ಕೆಲ ವರ್ಷಗಳ ಹಿಂದೆ ಪೂಜೆ ಮಾಡಿಸಿದ್ದರಂತೆ. ಇದರಿಂದ ಸಂತೋಷನ ಕುಟುಂಬಕ್ಕೆ ತೊಂದರೆಯಾಗಿತ್ತು. ಜತೆಗೆ ಕುಟುಂಬದ ಕೆಲವರ ಆರೋಗ್ಯದಲ್ಲಿ ಏರುಪೇರಾಗಿ ಕೆಲ ದಿನಗಳಲ್ಲಿ ಮೃತಪಟ್ಟಿದ್ದರು. ಮಾನಸಿಕ ತೊಂದರೆ ಅನುಭವಿಸಿದ್ದರು. ತಮ್ಮ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳಿಗೆ ದೇವಪ್ಪಜ್ಜ ಮಾಡಿರುವ ಪೂಜೆಯೇ ಕಾರಣ ಎಂದು ದೇವಪ್ಪಜ್ಜನನ್ನು ಕೊಲ್ಲಲು ಆರು ವರ್ಷದ ಹಿಂದೆಯೇ ನಿರ್ಧರಿಸಿದ್ದನಂತೆ. ಆಗಿನಿಂದಲೂ ಸಂಚು ರೂಪಿಸುತ್ತಲೇ ಇದ್ದ. ಎರಡೂವರೆ ವರ್ಷದ ಹಿಂದೆಯೂ ಒಂದು ಸಲ ಕೊಲೆ ಯತ್ನ ನಡೆಸಿದ್ದ. ಆದರೆ ಅದು ಫಲಕೊಟ್ಟಿರಲಿಲ್ಲ. ಆ ಕುರಿತು ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ತನ್ನ ಸೇಡು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾನೆ. ತನ್ನ ಕುಟುಂಬ ಸಮಸ್ಯೆ ಸಿಲುಕಲು ದೇವಪ್ಪಜ್ಜ ಮಾಡಿರುವ ಪೂಜೆಯೇ ಕಾರಣ ಎಂದು ಭಾವಿಸಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.ಘಟನೆ ಏನು?
ಇಲ್ಲಿನ ಈಶ್ವರನಗರದ ವೈಷ್ಣೋದೇವಿ ದೇವಸ್ಥಾನದ ಮುಖ್ಯ ಅರ್ಚಕ ದೇವಪ್ಪಜ್ಜ ವನಹಳ್ಳಿ ಅವರನ್ನು ಭಾನುವಾರ ರಾತ್ರಿ 8ರ ಸುಮಾರಿಗೆ ದೇವಸ್ಥಾನ ಹಿಂಬದಿಯಲ್ಲಿ ಕೊಲೆ ಮಾಡಲಾಗಿತ್ತು. ಇದರ ಪತ್ತೆಗೆ ಪೊಲೀಸರು 8 ತಂಡ ರಚಿಸಿದ್ದರು. ಆರೋಪಿಯ ಬಂಧನಕ್ಕಾಗಿ ಈಶ್ವರ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ 180ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಪರಿಶೀಲಿಸಲಾಗಿತ್ತು. ಆರೋಪಿಯ ಗುರುತು ಪತ್ತೆ ಹಚ್ಚಿ, ಸಂಶಯಾಸ್ಪದ ವ್ಯಕ್ತಿಯ ಮಾಹಿತಿ ನೀಡುವಂತೆ ಮನವಿ ಮಾಡಿದ್ದೆವು. ಸೋಮವಾರ ರಾತ್ರಿ 11 ಗಂಟೆಯ ಸುಮಾರಿಗೆ ಚೆನ್ನಮ್ಮ ಸರ್ಕಲ್ ಬಳಿ ಆರೋಪಿ ಓಡಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿ ಬಂಧಿಸಲಾಗಿದೆ ಎಂದು ಕಮಿಷನರ್ ಹೇಳಿದರು.₹50 ಸಾವಿರ ಬಹುಮಾನ:
ಡಿಸಿಪಿ ಮಹಾನಿಂಗ ನಂದಗಾವಿ, ಅಪರಾಧ ವಿಭಾಗದ ಡಿಸಿಪಿ ರವೀಶ್ ಎಸ್, ನವನಗರ ಠಾಣೆಯ ಇನ್‌ಸ್ಪೆಕ್ಟರ್ ಸಮಿವುಲ್ಲಾ ಹಾಗೂ ಸಿಬ್ಬಂದಿಗಳ ಕ್ಷಿಪ್ರ ಕಾರ್ಯಾಚರಣೆಯಿಂದ ಈ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ತ್ವರಿತ ಕಾರ್ಯವನ್ನು ಪ್ರಶಂಸಿಸಿ ₹50 ಸಾವಿರ ನಗದು ಬಹುಮಾನ ಘೋಷಿಸಿರುವುದಾಗಿ ಕಮೀಷನರ್ ಹೇಳಿದರು.