ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲಾ ಭೇಟಿ ಕಾರ್ಯಕ್ರಮವನ್ನು ಜಿಲ್ಲೆಯ ಯಾವುದೇ ಶಾಸಕರ ಗಮನಕ್ಕೆ ತಾರದೇ ಇರುವುದು, ಉಡುಪಿ ಜಿಲ್ಲೆಯಲ್ಲಿ ಐದೂ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ ಎಂಬ ಕಾರಣಕ್ಕೆ ತೋರಿದ ಸರ್ವಾಧಿಕಾರಿ ಧೋರಣೆಯೇ ? ಜನ ಸಾಮಾನ್ಯರ ಧ್ವನಿಯಾಗಿ ಶಾಸಕರು ಉಸ್ತುವಾರಿ ಸಚಿವರ ನಡೆಯನ್ನು ಪ್ರಶ್ನಿಸುವುದೇ ತಪ್ಪೇ ? ಎಂದು ಅವರು ಪ್ರಶ್ನಿಸಿದ್ದಾರೆ.
ಉಡುಪಿ ಜಿಲ್ಲೆಯ ಬಗ್ಗೆ ನಿರಂತರ ನಿರ್ಲಕ್ಷ್ಯ ವಹಿಸುತ್ತಾ ಸ್ವಯಂ ಕಾಂಗ್ರೆಸ್ ಕಾರ್ಯಕರ್ತರ ‘ಗೋ ಬ್ಯಾಕ್ ಅಭಿಯಾನ’ಕ್ಕೆ ಬೆದರಿ ಓಡೋಡಿ ಬಂದು ಕಾಟಾಚಾರಕ್ಕೆ ಪ್ರಾಕೃತಿಕ ವಿಕೋಪದ ಪರಿಶೀಲನೆ ನಡೆಸಿರುವ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡೆಯನ್ನು ಖಂಡಿಸಿರುವ ಉಡುಪಿ ಶಾಸಕರ ವಿರುದ್ಧ ಕಾಂಗ್ರೆಸ್ ಮುಖಂಡರು ಕ್ಷುಲ್ಲಕ ಮತ್ತು ಹತಾಶ ಹೇಳಿಕೆ ನೀಡುತ್ತಿರುವುದು ಖಂಡನೀಯ. ಶಾಸಕರ ಸಾಮಾಜಿಕ ಕಳಕಳಿಯ ಕಾರ್ಯವೈಖರಿ ಹಾಗೂ ತತ್ವ ಸಿದ್ಧಾಂತಗಳ ಬದ್ಧತೆಯ ಬಗ್ಗೆ ಕಾಂಗ್ರೆಸ್ ನಾಯಕರ ಸರ್ಟಿಫಿಕೇಟ್ ಅಗತ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬೈಂದೂರು-ಸೋಮೇಶ್ವರ ಗುಡ್ಡ ಕುಸಿತ ವೀಕ್ಷಣೆಯ ಸಂದರ್ಭದಲ್ಲಿ ಸಾರ್ವಜನಿಕರು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದನ್ನು ಕಾಂಗ್ರೆಸ್ ನಾಯಕರು ನೆನಪಿಸಿಕೊಳ್ಳುವುದು ಉತ್ತಮ.
ರಾಜ್ಯ ಸರ್ಕಾರ ಯಾವುದೇ ಯೋಜನೆಗಳಿಗೆ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ಚಿಕ್ಕಾಸನ್ನೂ ನೀಡಲು ಅಸಮರ್ಥವಾಗಿದ್ದರೂ, ಉಡುಪಿಗೆ ಯಾವ ಯೋಜನೆ ತಂದಿದ್ದೀರಿ ಎಂದು ಕಾಂಗ್ರೆಸ್ ನಾಯಕರು ಶಾಸಕರನ್ನು ಪ್ರಶ್ನಿಸುತ್ತಿರುವುದು ಅತ್ಯಂತ ಹಾಸ್ಯಾಸ್ಪದವೆನಿಸಿದೆ.ಉಡುಪಿ ಶಾಸಕರು ಮಹಿಳೆಯ ಗೌರವ, ಹಿಂದುತ್ವ ಪಾಲನೆ, ಅಭಿವೃದ್ಧಿ ಹಾಗೂ ರಾಷ್ಟ್ರೀಯತೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡವರಲ್ಲ. ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು, ಪಕ್ಷ ನಿಷ್ಠೆ ಮತ್ತು ಸತತ ಪರಿಶ್ರಮದಿಂದ ಹಂತ ಹಂತವಾಗಿ ಬೆಳೆದು ಓರ್ವ ಮಾದರಿ ಶಾಸಕರಾಗಿ ಜನತೆಯ ಅಶೋತ್ತರಗಳಿಗೆ ಸ್ಪಂದಿಸುವ ಮೂಲಕ ತನ್ನ ಜವಾಬ್ದಾರಿಯನ್ನು ನಿಷ್ಠೆ ಮತ್ತು ಬದ್ಧತೆಯಿಂದ ನಿರ್ವಹಿಸುತ್ತಿದ್ದಾರೆ. ಉಡುಪಿಯ ಪ್ರಜ್ಞಾವಂತ ಜನತೆ ಕಳೆದ ಲೋಕಸಭೆ, ವಿಧಾನ ಪರಿಷತ್ ಚುನಾವಣೆ ಹಾಗೂ ಉಡುಪಿ ನಗರಸಭೆಯ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಪಕ್ಷ ಮತ್ತು ಶಾಸಕರ ಕಾರ್ಯ ಕ್ಷಮತೆಯನ್ನು ಬೆಂಬಲಿಸಿ ಆಶೀರ್ವದಿಸಿದ್ದಾರೆ.
ಚುನಾವಣೆಗಳ ಸರಣಿ ಸೋಲಿನ ಮೂಲಕ ಕಂಗೆಟ್ಟಿರುವ ಉಡುಪಿ ಕಾಂಗ್ರೆಸ್ ಮುಖಂಡರು ಶಾಸಕರ ವಿರುದ್ಧ ಅಸಂಬದ್ಧ ಹಾಗೂ ಹತಾಶ ಹೇಳಿಕೆಗಳನ್ನು ನೀಡುತ್ತಾ ಅಸ್ತಿತ್ವಕ್ಕಾಗಿ ಪುಕ್ಕಟೆ ಪ್ರಚಾರ ಗಿಟ್ಟಿಸಲು ವಿಫಲ ಯತ್ನ ನಡೆಸುತ್ತಿರುವುದು ಶೋಚನೀಯ ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.