ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಟಿಎಪಿಸಿಎಂಎಸ್‌ನ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಚಿಕ್ಕಾಡೆ ಗಿರೀಶ್ ಹಾಗೂ ಕನಗನಮರಡಿ ಪ್ರೇಮ ಪುಟ್ಟೇಗೌಡ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.ಸಂಘದ 12 ಮಂದಿ ನಿರ್ದೇಶಕರ ಪೈಕಿ 9 ಜೆಡಿಎಸ್ ಹಾಗೂ 3 ಕಾಂಗ್ರೆಸ್ - ರೈತಸಂಘ ಬೆಂಬಲಿತ ನಿರ್ದೇಶಕರಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಚಿಕ್ಕಾಡೆ ಗಿರೀಶ್ - ಪ್ರೇಮ ಪುಟ್ಟೇಗೌಡ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಬಸವರೆಡ್ಡೆಪ್ಪರೋಣದ ಘೋಷಿಸಿದರು.
ಚಿಕ್ಕಾಡೆ ಗಿರೀಶ್ , ಪ್ರೇಮ ಪುಟ್ಟೇಗೌಡ ಆಯ್ಕೆಯಾಗುತ್ತಿದ್ದಂತೆಯೇ ಹೊರಗಡೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಇದೇ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ರೈತರು ಹಾಗೂ ಷೇರುದಾರರ ಆಶೀರ್ವಾದದಿಂದ ಜೆಡಿಎಸ್ ಬೆಂಬಲಿತ ನಿರ್ದೇಶಕರು ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ಅಧಿಕಾರ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರು ಜತೆಗೂಡಿ ಯಾವುದೇ ಕಳಂಕ ಬಾರದಂತೆ ರೈತರ ಬೆನ್ನೆಲುಬಾದ ಸಹಕಾರ ಸಂಘವನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷ ಚಿಕ್ಕಾಡೆ ಗಿರೀಶ್ ಮಾತನಾಡಿ, ನಮ್ಮ ನಾಯಕರಾದ ಸಿ.ಎಸ್.ಪುಟ್ಟರಾಜಣ್ಣ ಅವರ ಆಶೀರ್ವಾದ ಹಾಗೂ ಜೆಡಿಎಸ್ ಬೆಂಬಲಿತ ಎಲ್ಲಾ ನಿರ್ದೇಶಕ ಸಹಕಾರದಿಂದ ಅಧ್ಯಕ್ಷನಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿ ಕೆಲಸ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.ಈ ವೇಳೆ ನಿರ್ದೇಶಕರಾದ ಸಿ.ಎಸ್.ಗೋಪಾಲಗೌಡ, ವಡ್ಡರಹಳ್ಳಿ ನಿಂಗೇಗೌಡ, ಎ.ಕೃಷ್ಣ, ಪಿ.ಎಲ್.ಆದರ್ಶ, ಸಿ.ಎಂ.ಕಿರಣ್ ಕುಮಾರ್, ನರಸಿಂಹನಾಯ್ಕ, ಎಂ.ಸ್ವಾಮಿ, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಮುಖಂಡರಾದ ಚಿಕ್ಕಾಡೆ ಪ್ರಸನ್ನಕುಮಾರ್, ಕ್ಯಾತನಹಳ್ಳಿ ಗವಿಗೌಡ, ಕೋಡಾಲ ರಾಧಾಕೃಷ್ಣ, ಪುರಸಭೆ ಸದಸ್ಯ ಗಿರೀಶ್, ಕೆ.ಪುಟ್ಟೇಗೌಡ, ಚಿಕ್ಕಾಡೆ ವಿಜಿಕುಮಾರ್, ದಿಲೀಪ್, ದೇಶವಳ್ಳಿ ಪ್ರಭಾಕರ್, ಕಡಬ ಬಲರಾಮು ಸೇರಿದಂತೆ ಹಲವರು ಹಾಜರಿದ್ದರು.