ಚಿಕ್ಕಮಗಳೂರು : ಮಂಡ್ಯ ಜಿಲ್ಲೆಯ ಮದ್ದೂರು ಗಣಪತಿ ಗಲಾಟೆ ಪೂರ್ಣ ಪ್ರಮಾಣದಲ್ಲಿ ಮುಸ್ಲಿಂ ಕಡೆಯಿಂದಲೇ ಆಗಿದ್ದು, ಗಲಭೆಗೆ ಕಾರಣರಾದವರನ್ನು ಬಂಧಿಸಲಾಗಿದೆ. ಹಿಂದೂಗಳ ಮೇಲೆ ಎಫ್‌ಐಆರ್ ಹಾಕಿಲ್ಲ ಯಾರನ್ನೂ ಬಂಧನ ಮಾಡಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಂಧಿತರಲ್ಲಿ ಇಬ್ಬರು ಚನ್ನಪಟ್ಟಣದವರು, ಉಳಿದವರೆಲ್ಲ ಮದ್ದೂರು ಪಟ್ಟಣದವರು. ಪ್ರಕರಣದಲ್ಲಿ ಸ್ವಲ್ಪ ಮಟ್ಟಿಗೆ ಕಾನೂನು ಸುವ್ಯವಸ್ಥೆಯಲ್ಲಿ ವೈಫಲ್ಯವಾಗಿರುವ ಅನುಮಾನವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಗಿಯುವವರೆಗೂ ಏನೂ ಹೇಳುವುದಿಲ್ಲ.
ಈ ಪ್ರಕರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ. ಅವರಿಗೆ ಶಾಂತಿ ಬೇಕಿಲ್ಲ. ಅದಕ್ಕೆ ಶಾಂತಿ ಸಭೆಗೆ ಬಂದಿಲ್ಲ ಎಂದರು. ನನ್ನ ಮಾಹಿತಿ ಪ್ರಕಾರ ಮದ್ದೂರಲ್ಲಿ ಇನ್ನೂ ನಾಲ್ಕೈದು ಸಾಮೂಹಿಕ ಗಣಪತಿ ಇವೆ. ಆದರೆ, ನಂಬರ್ ಜಾಸ್ತಿ ಮಾಡಲು ಬಿಜೆಪಿ-ಜೆಡಿಎಸ್ ನಾಯಕರು ಬೆಂಗಳೂರಿನಿಂದ ಗಣೇಶ ಮೂರ್ತಿ ಖರೀದಿ ಮಾಡಿ ತಂದಿದ್ದಾರೆ ಎಂದು ಹೇಳಿದರು.