ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಇಲ್ಲಿನ ಜಗದ್ಗುರು ರಂಭಾಪುರಿ ಪೀಠದಲ್ಲಿ ನಿರ್ಮಿಸಲು ಉದ್ದೇಶಿಸಿರುವ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಕೆತ್ತನಗೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕು ಹೊಸಕೆರೆ ಗ್ರಾಮದಿಂದ ಹೊರಟಿದ್ದ ಬೃಹತ್ ಶಿಲೆ ಹೊತ್ತ ಲಾರಿ ಸೋಮವಾರ ರಂಭಾಪುರಿ ಪೀಠಕ್ಕೆ ಆಗಮನವಾಗಿದೆ.

ಜ.26ರಂದು ಮಧುಗಿರಿ ತಾಲೂಕಿನ ಹೊಸಕೆರೆ-ಮಡಕಶಿರಾದಿಂದ ಶಿಲೆ ಹೊತ್ತು ಹೊರಟಿದ್ದ ಬೃಹತ್ ಲಾರಿ 15 ದಿನಗಳ ನಂತರ ಶ್ರೀಪೀಠಕ್ಕೆ ತಲುಪಿತ್ತು. ಶ್ರೀಪೀಠಕ್ಕೆ ಬಂದ ಬೃಹತ್ ಶಿಲೆಯನ್ನು ರಂಭಾಪುರಿ ಖಾಸಾ ಶಾಖಾ ಯಡಿಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಬರ ಮಾಡಿಕೊಂಡರು.

ಬೃಹತ್ ಶಿಲೆಯು 34 ಅಡಿ ಉದ್ದ, 16 ಅಡಿ ಅಗಲ, 18 ಅಡಿ ಎತ್ತರ ಹೊಂದಿದ 850 ಟನ್ ತೂಕದ ಕಲ್ಲು ಇದಾಗಿದ್ದು, ಮೂರ್ತಿ ನಿರ್ಮಾಣಕ್ಕೆ ಅಗತ್ಯವಿದೆ. ವಿವಿಧ 3 ಬೃಹತ್ ಶಿಲೆಗಳು ಈ ಹಿಂದೆಯೇ ರಂಭಾಪುರಿ ಪೀಠಕ್ಕೆ ತರಲಾಗಿದ್ದು, ಆ ಶಿಲೆಗಳ ಕೆತ್ತನೆ ಕಾರ್ಯ ಈಗಾಗಲೇ ಮುಕ್ತಾಯಗೊಂಡಿದೆ.

ಸೋಮವಾರ ಶಿಲೆ ಹೊತ್ತು ತಂದ ಲಾರಿಯು 126 ಚಕ್ರ, 3 ಎಂಜಿನ್‌ಗಳನ್ನು ಹೊಂದಿದ್ದು, ಬೃಹತ್ ಶಿಲೆ ಮತ್ತು ಲಾರಿಯನ್ನು ವೀಕ್ಷಿಸಲು ಜನರು ಕುತೂಹಲಭರಿತರಾಗಿ ಆಗಮಿಸಿದ್ದರು. ಪ್ರಸ್ತುತ ತಂದಿರುವ ಶಿಲೆಯು ರೇಣುಕಾಚಾರ್ಯರ ಮೂರ್ತಿ ನಿರ್ಮಾಣಕ್ಕೆ ಬಳಲಾಗುವುದು. ಈ ಹಿಂದೆ ತಂದ ಶಿಲೆಗಳನ್ನು ಪಾಣಿ ಪೀಠ, ಶಿವಲಿಂಗು ಮುಂತಾದವುಕ್ಕೆ ಬಳಸಲಾಗಿದೆ.


ಪ್ರಸ್ತುತ ಆಗಮಿಸಿರುವ ಶಿಲೆಯಲ್ಲಿ ಒಂದು ವರ್ಷದೊಳಗೆ ಮೂರ್ತಿ ನಿರ್ಮಾಣ ಮಾಡಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ರೇಣುಕಾಚಾರ್ಯರ ಮೂರ್ತಿ ಸ್ಥಾಪಿಸುವ ಜಾಗದ ಎದುರು ಭಾಗದಲ್ಲಿ ಆಕರ್ಷಕ ಪಾರ್ಕ್, ರೇಣುಕಾಚಾರ್ಯರ ಮ್ಯೂಸಿಯಂ ನಿರ್ಮಾಣ ಮಾಡಲು ಯೋಜಿಸಲಾಗಿದ್ದು, ಮಾ.1ರಂದು ರಂಭಾಪುರಿ ಪೀಠದಲ್ಲಿ ನಡೆಯುವ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೂರ್ತಿ ಸ್ಥಾಪನೆಗೆ ಅಡಿಗಲ್ಲು ಹಾಕಲಿದ್ದಾರೆ ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪತ್ರಿಕೆಗೆ ತಿಳಿಸಿದ್ದಾರೆ.