ಸಾಮಾಜಿಕವಾಗಿ ಗುರುತಿಸಿಕೊಂಡಾಗ ಸಾರ್ವಜನಿಕ ಜೀವನದಲ್ಲಿ ಸಾರ್ಥಕತೆ ದೊರೆಯುತ್ತದೆ ಎಂದು ಉಪನ್ಯಾಸಕ, ಖ್ಯಾತ ವಾಗ್ಮಿ ದಾಮೋದರ ಶರ್ಮಾ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಸಾಮಾಜಿಕವಾಗಿ ಗುರುತಿಸಿಕೊಂಡಾಗ ಸಾರ್ವಜನಿಕ ಜೀವನದಲ್ಲಿ ಸಾರ್ಥಕತೆ ದೊರೆಯುತ್ತದೆ ಎಂದು ಉಪನ್ಯಾಸಕ, ಖ್ಯಾತ ವಾಗ್ಮಿ ದಾಮೋದರ ಶರ್ಮಾ ಹೇಳಿದರು.

ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯು ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಬಡವರು, ಶ್ರೀಮಂತರು, ವಿದ್ಯಾವಂತರು, ಅವಿದ್ಯಾವಂತರು ಸೇರಿದಂತೆ ಎಲ್ಲ ವರ್ಗದ ಜನರೂ ಇರಬೇಕು. ಇವರೆಲ್ಲರೂ ಈ ವ್ಯವಸ್ಥೆಯಲ್ಲಿ ಇದ್ದರೆ ಮಾತ್ರ ಅದನ್ನು ಸಮಾಜ ಎನ್ನುತ್ತಾರೆ. ನಾವೆಲ್ಲರೂ ತಾಯಿ ಭಾರತಿಯ ಮಕ್ಕಳಾಗಿದ್ದು, ಇಲ್ಲಿ ಯಾವುದೇ ಜಾತಿ ಬೇಧವೂ ಇಲ್ಲವಾಗಿದೆ.

ಯಾರು ಒಳ್ಳೆಯ ನಡವಳಿಕೆಯಿಂದ ತಂದೆ ತಾಯಿಯನ್ನು ಗೌರವಿಸುತ್ತಾರೋ ಆಗ ನಿಜವಾಗಿ ಜೀವನ ಸಾರ್ಥಕವಾಗಲಿದೆ. ಒಳ್ಳೆಯ ನಡತೆ ಜೀವನದ ನಿಜವಾದ ಸಂಪತ್ತು. ಆದರೆ ಇಂದು ರಾಜಕೀಯ ಪಕ್ಷಗಳಲ್ಲಿ ಇರುವವರು ಒಳ್ಳೆಯದನ್ನು, ಸತ್ಯವನ್ನು ಸಮಾಜಕ್ಕೆ ಹೇಳಲು ಹಿಂಜರಿಯುತ್ತಾರೆ. ಇದು ನಡೆಯಬಾರದು ಎಂದರು.

ಸಮಾಜಕ್ಕೆ ಕೃತಜ್ಞರಾಗಿ ಬದುಕಿದರೆ ಆ ವ್ಯಕ್ತಿಯವನ್ನು ಭೀಷ್ಮನ ಸ್ಥಾನದಲ್ಲಿ ಸಮಾಜ ಗುರುತಿಸಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಜೀವನ ಮೌಲ್ಯಗಳ ಬಗ್ಗೆ ಯೋಚನೆ ಮಾಡಬೇಕಿದೆ. ಭಾರತ ದೇಶದಲ್ಲಿದ್ದು, ಈ ದೇಶದ ಬಗ್ಗೆ, ಇಲ್ಲಿನ ತತ್ವಗಳ ಬಗ್ಗೆ ಮಾತನಾಡುವುದು ತಪ್ಪಲ್ಲ. ಯಾವುದೇ ಜಾತಿ ಧರ್ಮದ ಇತಿಹಾಸ ಕೇವಲ ಬಾಯಿ ಮಾತಿನಿಂದ ಅಲ್ಲ. ಆಯಾ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜ್ಞಾನದ ಸಂಪತ್ತಿಗೆ ಎಲ್ಲ ಧರ್ಮಗಳ ಗ್ರಂಥ ಅಧ್ಯಯನ ಮಾಡುವುದು ಅಗತ್ಯವಾಗಿದೆ. ಇವುಗಳನ್ನು ಓದಬಾರದು ಎಂದು ಎಲ್ಲೂ ಹೇಳಿಲ್ಲ. ಪ್ರತಿಯೊಂದು ಧರ್ಮ ಗ್ರಂಥಗಳಲ್ಲಿನ ಆದರ್ಶಗಳನ್ನು ಓದಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಮಾನವೀಯ ಪಾಠವನ್ನು ಭಾರತ ವಿಶ್ವಕ್ಕೆ ಕಲಿಸಿದ್ದು, ಜೀವನದಲ್ಲಿ ಒಳ್ಳೆಯ ಮಾತುಗಳನ್ನಾಡಿ ಜೀವನ ಮೌಲ್ಯ ಹೆಚ್ಚಿಸಿಕೊಳ್ಳಬೇಕಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕಲಿಸಬೇಕಿದ್ದು, ಇನ್ನೊಬ್ಬರಿಗೆ ಹೇಳುವ ಬದಲು ಒಳ್ಳೆಯದನ್ನು ನಾವು ಮೊದಲು ಅಳವಡಿಸಿಕೊಂಡು ಮಾದರಿಯಾಗಬೇಕು ಎಂದರು.

ಜೇಸಿ ನೂತನ ಅಧ್ಯಕ್ಷರಾಗಿ ಸನತ್ ಶೆಟ್ಟಿ, ಕಾರ್ಯದರ್ಶಿಯಾಗಿ ಎ.ರಂಜಿತ್, ಖಜಾಂಚಿಯಾಗಿ ವಿ.ರೋಹಿತ್, ಲೇಡಿ ಜೇಸಿ ಅಧ್ಯಕ್ಷೆಯಾಗಿ ಹಿತೈಷಿ ಚೇತನ್, ಜ್ಯೂನಿಯರ್ ಜೇಸಿ ಅಧ್ಯಕ್ಷೆಯಾಗಿ ರಿತು ಆರ್.ಸಾಲ್ಯಾನ್ ಅಧಿಕಾರ ಸ್ವೀಕರಿಸಿದರು.

ಜೇಸಿ ವಲಯಾಧ್ಯಕ್ಷ ಪ್ರಜ್ವಲ್ ಜೈನ್, ಜೇಸಿ ವಲಯ ಉಪಾಧ್ಯಕ್ಷ ಎ.ಅಶೋಕ್, ನಿರ್ಗಮಿತ ಅಧ್ಯಕ್ಷ ಇಬ್ರಾಹಿಂ ಶಾಫಿ, ಕಾರ್ಯದರ್ಶಿ ವಿ.ಅಶೋಕ, ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯಕ್ರಮ ನಿರ್ದೇಶಕ ಕೆ.ಪ್ರಶಾಂತ್‌ಕುಮಾರ್, ನಿರ್ಗಮಿತ ಲೇಡಿ ಜೇಸಿ ಅಧ್ಯಕ್ಷೆ ಫೌಜಿಯಾ ಶಾಫಿ, ನಿರ್ಗಮಿತ ಜ್ಯೂನಿಯರ್ ಜೇಸಿ ಅಧ್ಯಕ್ಷ ನಿಶ್ಚಿತ್ ಹಿಲರಿ ಮಿಸ್ಕಿತ್ ಇತರರು ಹಾಜರಿದ್ದರು.