ಕನ್ನಡಪ್ರಭ ವಾರ್ತೆ ಮೈಸೂರು
ಬನ್ನೂರಿನ ಮಾಕನಹಳ್ಳಿ ಗ್ರಾಮದ ಕಾವ್ಯಾ ಎಂಬವರು ಹೆರಿಗೆಗೆಂದು ಕೆವಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲ ಹೆರಿಗೆಯಲ್ಲೂ ಇದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಅವಳಿ ಮಕ್ಕಳು ಮೃತಪಟ್ಟಿದ್ದವು. ಎರಡನೇ ಹೆರಿಗೆಗೂ ಇದೇ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಬಳಿಕ ಆರೋಗ್ಯವಾಗಿದ್ದ ಮಗು ಕೆಲ ಸಮಯದ ನಂತರ ಮೃತಪಟ್ಟಿದೆ ಎಂದು ವೈದ್ಯರು ಹೇಳಿದರು.
ಹೆರಿಗೆ ಸಂದರ್ಭದಲ್ಲಿ ಚೆನ್ನಾಗಿದ್ದ ಮಗು ಏಕಾಏಕಿ ಮೃತಪಡಲು ಕಾರಣ ಏನು ಎಂದು ಆಕ್ರೋಶಗೊಂಡ ಪೋಷಕರು, ಸಂಬಂಧಿಕರು ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ. ಮಗುವನ್ನು ಅದಲು ಬದಲು ಮಾಡಲಾಗುತ್ತಿದೆ. ಡಿಎನ್‌ಎ ಪರೀಕ್ಷೆ ಮಾಡಿಸಿ, ನಮಗೆ ನಮ್ಮ ಮಗು ಕೊಡಿಸಿ ಎಂದು ಆಗ್ರಹಿಸಿದರು.ಈ ವೇಳೆ ಕಾವ್ಯಾ ಸಂಬಂಧಿ ರೂಪಾ ಮಾತನಾಡಿ, ಗುರುವಾರ ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದೆವು. ಹೆರಿಗೆ ಆಗುತ್ತದೆ ಎಂದು ದಾಖಲು ಮಾಡಿಕೊಂಡರು. ಆದರೆ, ಸೋಮವಾರದವರೆಗೂ ಹೆರಿಗೆ ಆಗಲಿಲ್ಲ. ಮಂಗಳವಾರ ಹೆರಿಗೆ ಆಗಿದೆ. ಹುಟ್ಟಿದಾಗ ಮಗು ಚೆನ್ನಾಗಿತ್ತು. ಆದರೆ, ಬಳಿಕ ಮಗು ಸಾವನ್ನಪ್ಪಿದೆ ಎಂದರು.
ವೈದ್ಯೆ ಸುಗುಣ ಶಾಂತಿ ಮಾತನಾಡಿ, ತಾಯಿಗೆ ಆರೋಗ್ಯ ಸಮಸ್ಯೆ ಇತ್ತು. ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳು ಮೃತರಾದ ಬಳಿಕ 6 ತಿಂಗಳಲ್ಲೇ ಮತ್ತೆ ಗರ್ಭಿಣಿಯಾಗಿದ್ದರು. ಬಿಪಿ ಹೆಚ್ಚಾಗಿತ್ತು. ಈ ವೇಳೆ ಹೆರಿಗೆ ಮಾಡುವುದು ಕಷ್ಟ ಎಂದು ಪೋಷಕರು ತಿಳಿಸಲಾಗಿತ್ತು. ಅವರ ಆರೋಗ್ಯದಲ್ಲಿನ ಏರುಪೇರಿನಿಂದಾಗಿ ಮಗು ಮೃತಪಟ್ಟಿದೆ.