ಗುತ್ತಲ: ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಮಗು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ನೂರಾರು ಗ್ರಾಮಸ್ಥರು ಮಗುವಿನ ಶವವನ್ನು ಆಸ್ಪತ್ರೆಯ ಮುಂದೆ ಇಟ್ಟು ಪ್ರತಿಭಟನೆ ಮಾಡಿದ ಘಟನೆ ಶುಕ್ರವಾರ ಸಮೀಪದ ಹಾವನೂರ ಗ್ರಾಮದಲ್ಲಿ ಜರುಗಿತು.
ಎಂದಿನಂತೆ ಶುಕ್ರವಾರ ಆಟವಾಡುತ್ತಿದ್ದಳು, ಒಮ್ಮೇಲೆ ಉಸಿರಾಟದ ತೊಂದರೆಯಿಂದಾಗಿ ಆರೋಗ್ಯ ಏರುಪೇರಾಗಿದೆ. ತಕ್ಷಣವೇ ತಂದೆ ಮಹೇಶ, ತಾಯಿ ಪವಿತ್ರಾ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಆದರೆ ಅಲ್ಲಿ ಯಾವುದೇ ವೈದ್ಯರಾಗಲಿ ಅಥವಾ ಶ್ರುಶೂಷಕಿಯರಾಗಲಿ ಯಾರೊಬ್ಬರು ಇಲ್ಲದ ಕಾರಣ ತಕ್ಷಣ ಅಲ್ಲಿಂದ ಗುತ್ತಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಭವಾನಿ ಸಾವನ್ನಪ್ಪಿದ್ದಾಳೆ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಹಾವನೂರ ಗ್ರಾಮಕ್ಕೆ ಮರಳಿ ಆಸ್ಪತ್ರೆ ಮುಂಭಾಗದಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವಿಷಯ ಗ್ರಾಮದಲ್ಲಿ ಹಬ್ಬುತ್ತಿದ್ದಂತೆ ನೂರಾರು ಜನರು ಆಸ್ಪತ್ರೆಗೆ ಆಗಮಿಸಿ ಪ್ರತಿಭಟನೆಗೆ ಕೈಜೋಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹಾಗೂ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಪ್ರಭಾಕರ ಎಸ್. ಕುಂದೂರ ಹಾಗೂ ಪಿಎಸ್‌ಐ ಪರಶುರಾಮ ಲಮಾಣಿ ಪ್ರತಿಭಟನಾಕಾರರೊಂದಿಗೆ ಕೆಲ ಗಂಟೆಗಳ ಕಾಲ ಚರ್ಚಿಸಿದ ನಂತರ ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇಲ್ಲಿಗೆ ಸಿಬ್ಬಂದಿ ನಿಯೋಜನೆ ಮಾಡುತ್ತೇವೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.ಕೇವಲ 13 ತಿಂಗಳ ಭವಾನಿಯ ಸಾವಿನ ನೋವನ್ನು ತಡೆದುಕೊಳ್ಳಲಾರದೆ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಭವಾನಿಯ ತಂದೆ, ತಾಯಿ ಹಾಗೂ ಕುಟುಂಬಸ್ಥರ ಕಣ್ಣೀರನ್ನು ಕಂಡ ಜನತೆ ಸಹ ಕಣ್ಣೀರಿಟ್ಟು ಯಾವ ತಂದೆ-ತಾಯಿಗೂ ಇಂತಹ ಸ್ಥಿತಿ ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದ ದೃಶ್ಯ ಎಲ್ಲರ ಮನಕಲಕುವಂತಿತ್ತು.
ಸುಮಾರು 12 ಸಾವಿರಕ್ಕೂ ಅಧಿಕ ಜನಸಂಖ್ಯೆಯಿರುವ ಗ್ರಾಮದಲ್ಲಿ ವೈದ್ಯರ ಕೊರತೆಯಿಂದ ಸಾವು ನೋವುಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿವೆ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಗಮನ ಹರಿಸದೇ ಬಡವರ ಜೀವದ ಜೊತೆ ಆಟವಾಡುತ್ತಿದೆ. ಶೀಘ್ರವೇ ವೈದ್ಯರು ಹಾಗೂ ದಾದಿಯರ ನೇಮಕಾತಿ ಮಾಡದಿದ್ದಲ್ಲಿ ಮುಂದಿನ ದಿನದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಹಾವನೂರ ಕರವೇ ಗ್ರಾಮ ಘಟಕದ ಅಧ್ಯಕ್ಷ ದಾದಾಪೀರ ಕಲಾರಿ ಹೇಳಿದರು.