ಗದಗ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಹಿರಿಯ ಅಧಿಕಾರಿಗಳು ಗದಗ ಜಿಲ್ಲೆಗೆ ಭೇಟಿ ನೀಡಿದಾಗ ಅಧಿಕಾರಿಗಳ ನಿರ್ಲಕ್ಷ್ಯ ವ್ಯಾಪಕವಾಗಿ ಕಂಡು ಬಂದಿತು.
ಆಸ್ಪತ್ರೆಯಿಂದ ಹಿಡಿದು ಶಾಲಾ, ಕಾಲೇಜುಗಳವರೆಗೆ ವ್ಯಾಪಕ ಅವ್ಯವಸ್ಥೆ ಕಂಡು ಬಂದಿದ್ದು, ಮಕ್ಕಳ ಭವಿಷ್ಯದ ಮೇಲೆ ಬೀರುತ್ತಿರುವ ಗಂಭೀರ ಪರಿಣಾಮಗಳ ಕುರಿತು ಆತಂಕವನ್ನು ಆಯೋಗದ ಸದಸ್ಯರು ವ್ಯಕ್ತ ಪಡಿಸಿದರು.ಆಯೋಗದ ಸದಸ್ಯ ಶಶಿಧರ ಕೊಸಂಬೆ ನೇತೃತ್ವದಲ್ಲಿ ತಂಡವು ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗಕ್ಕೆ ಭೇಟಿ ನೀಡಿದಾಗ, ಅಲ್ಲಿನ ಸ್ಥಿತಿ ಕಂಡು ಬೆಚ್ಚಿಬಿದ್ದಿರು. ಬಾಣಂತಿ ಹಾಗೂ ನವಜಾತ ಶಿಶುಗಳು ವಾರ್ಡ್‌ಗಳಲ್ಲಿ ಶುದ್ಧ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇರಲಿಲ್ಲ. ಎಸಿ ಯಂತ್ರಗಳು ಇದ್ದರೂ ಅವು ಸುಸ್ಥಿತಿಯಲ್ಲಿ ಇಲ್ಲದಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಮಕ್ಕಳ ಆರೋಗ್ಯದ ವಿಷಯದಲ್ಲಿ ಇಷ್ಟೊಂದು ನಿರ್ಲಕ್ಷ್ಯ ಸರಿಯೇ ? ಎಂದು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ರೋಗಿಗಳಿಗೆ ನೀಡಲಾಗುವ ಆಹಾರದ ಗುಣಮಟ್ಟ ಪರಿಶೀಲಿಸಿ ಹಾಳಾದ ಐಸಿಯು ಘಟಕಗಳನ್ನು ಕೂಡಲೇ ದುರಸ್ತಿ ಪಡಿಸಲು ಸೂಚನೆ ನೀಡಲಾಯಿತು.
ಗದಗ ತಾಲೂಕಿನ ನಾಗಾವಿ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ತೊಗರಿಬೇಳೆ ಬಳಸುತ್ತಿರುವುದು ಕಂಡು ಬಂದಿದ್ದು, ಇದು ಮಕ್ಕಳ ಪೌಷ್ಟಿಕಾಂಶದ ಮೇಲೆ ನೇರವಾಗಿ ಪರಿಣಾಮ ಬೀರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಭೇಟಿ ನೀಡಿದ ವೇಳೆಯಲ್ಲಿ ಪ್ರಾಚಾರ್ಯೆ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ. ಈ ನಿರ್ಲಕ್ಷ್ಯಕ್ಕಾಗಿ ಪ್ರಾಚಾರ್ಯೆಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಮಹಾವಿದ್ಯಾಲಯದಲ್ಲಿನ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿತ್ತು. ಕೊಳಕಾದ ವಾತಾವರಣ ಮತ್ತು ಅವ್ಯವಸ್ಥೆ ಗಮನಿಸಿದ ಆಯೋಗವು ತಕ್ಷಣವೇ ಹಾಸ್ಟೆಲ್‌ನ ವಾರ್ಡನ್‌ರನ್ನು ಅಮಾನತುಗೊಳಿಸಲು ಆದೇಶಿಸಿದೆ.ನಿರ್ದಿಷ್ಟ ನಿಯಮಗಳ ಪಾಲನೆಗೆ ಸೂಚನೆ
ಪೊಲೀಸ್ ಇಲಾಖೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಆಯೋಗ ಸೂಚನೆ ನೀಡಿದೆ. ಮುಳಗುಂದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಕ್ಕಳ ಕೇಸ್‌ಗಳಿಗೆ ಪ್ರತ್ಯೇಕ ರೆಜಿಸ್ಟರ್ ಇಟ್ಟು ನಿರ್ವಹಿಸಬೇಕು ಮತ್ತು ಮಕ್ಕಳ ಪೊಲೀಸ್ ಕಲ್ಯಾಣ ಅಧಿಕಾರಿಯ ಸಹಿ ಇರಬೇಕು ಎಂದು ತಾಕೀತು ಮಾಡಿದರು.