ಮಕ್ಕಳ ರಕ್ಷಣೆ, ಆರೋಗ್ಯದೆಡೆ ಗಮನ ಹರಿಸಿ

KannadaprabhaNewsNetwork |  
Published : Aug 22, 2025, 01:00 AM IST
ಸಸಸಸಸ | Kannada Prabha

ಸಾರಾಂಶ

ಮಕ್ಕಳು ಹಾಗೂ ಪರಿಸರ ಈ ದೇಶದ ಸಂಪತ್ತು. ಇವುಗಳ ಆರೋಗ್ಯದ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸೋಣ

ಗದಗ: ಅಪೌಷ್ಟಿಕತೆ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕಳೆದ ವರ್ಷ 518 ಗರ್ಭಿಣಿಯರು ಅನಿಮೀಯಾ ಕೊರತೆಯಿಂದ ಬಳಲುತ್ತಿದ್ದರು. ಆರೋಗ್ಯ ಜಾಗೃತಿ ಮೂಡಿಸದಿರುವು ಇದಕ್ಕೆ ಕಾರಣ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಬೇಸರ ವ್ಯಕ್ತಪಡಿಸಿದರು.

ಅವರು ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಮಕ್ಕಳ ಹಕ್ಕುಗಳ ರಕ್ಷಣೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳು ಹಾಗೂ ಪರಿಸರ ಈ ದೇಶದ ಸಂಪತ್ತು. ಇವುಗಳ ಆರೋಗ್ಯದ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸೋಣ. ಎಲ್ಲ ಸರ್ಕಾರಿ ಕಟ್ಟಡ ಮೇಲೆ ಮಕ್ಕಳ ರಕ್ಷಣಾ ಸಹಾಯವಾಣಿ ಸಂಖ್ಯೆ 1098 ಬರೆಸಬೇಕು. ಹೊರ ರೋಗಿಗಳ ಚೀಟಿ, ಸರ್ಕಾರಿ ಎಲ್ಲ ದಾಖಲೆಗಳ ಕೆಳಗೆ ಬಾಲ್ಯ ವಿವಾಹ ಅಪರಾಧ ಎಂದು ಬರೆಸಬೇಕು. ಮಕ್ಕಳ ಹಕ್ಕುಗಳ ಬಗ್ಗೆ ಇಲಾಖೆ ಜಾಗೃತಿ ಮೂಡಿಸಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮುಂಡರಗಿ ತಾಲೂಕಿನ ಹೈತಾಪುರದ ಕೃಷಿ ಹೊಂಡದಲ್ಲಿ 5 ವರ್ಷದ ಮಗುವಿನ ಜತೆ ತಾಯಿ ಬಿದ್ದು ಸಾವನ್ನಪ್ಪಿದ ಕುರಿತು ಚರ್ಚಿಸಲಾಯಿತು. ಕೃಷಿ ಹೊಂಡದ ಸುತ್ತಲು ರಕ್ಷಣಾ ತಂತಿ ಬೇಲಿ ಹಾಕಲು ಸರ್ಕಾರ ಆದೇಶ ನೀಡಿದೆ. ಈ ಆದೇಶ ಇಲಾಖೆ ಕಡ್ಡಾಯ ಪಾಲಿಸಬೇಕು ಎಂದು ಆಯೋಗ ನಿರ್ದೇಶನ ನೀಡಿತು. ಕಳೆದ 5 ವರ್ಷದಿಂದ ಜಿಲ್ಲೆಯಲ್ಲಿ ಮಕ್ಕಳ ಅಸಹಜ ಸಾವು ಸಂಭವಿಸಿರುವ ಮಾಹಿತಿ ನೀಡಬೇಕು ಎಂದು ಆಯೋಗ ಒತ್ತಾಯಿಸಿತು. ಅಂಗನವಾಡಿ, ಶಾಲಾ ಸಮೀಪದಲ್ಲಿ ವಿದ್ಯುತ್ ತಂತಿ, ಹೈಟೆನ್ಷನ್ ಸಂಪರ್ಕ ಇರುವ ಬಗ್ಗೆ ವರದಿ ಸಿದ್ದಪಡಿಸಿ ಇಲಾಖೆಗೆ ಸಲ್ಲಿಸಬೇಕು ಮತ್ತು ತೆರವುಗೊಳಿಸಬೇಕು ಎಂದು ಅಧ್ಯಕ್ಷ ಕೆ ನಾಗಣ್ಣಗೌಡ ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 4311ಹೈರಿಸ್ಕ ಪ್ರಗ್ನೆನ್ಸಿ ಕಂಡು ಬಂದಿದೆ. ಅಪೌಷ್ಟಿಕತೆ ಮಕ್ಕಳು ಜಿಲ್ಲೆಯಲ್ಲಿ 166 ಜನರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬಿ ಮಾತನಾಡಿ, ಮಕ್ಕಳ ರಕ್ಷಣೆಯಲ್ಲಿ ಹಲವು ಸಮಸ್ಯೆ ಎದುರಾಗುತ್ತವೆ. ಅವುಗಳನ್ನು ಸಮರ್ಥವಾಗಿ ನಿಭಾಯಿಸಬೇಕು.

ಕಳೆದ ಸಾಲಿನಲ್ಲಿ 19 ವರ್ಷದ ಒಳಗಿನ 364 ಬಾಲಕಿಯರು ಗರ್ಭಿಣಿ ಆಗಿದ್ದಾರೆ. ಕಳೆದ 5 ವರ್ಷದಲ್ಲಿ 1176 ಬಾಲಕಿಯರು ಗರ್ಭಿಣಿ ಆಗಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿಲ್ಲ. ಕಾನೂನು ಕ್ರಮ ಏಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಆರೋಗ್ಯ ಇಲಾಖೆಯ ಆರ್ ಸಿಎಚ್ ಅಧಿಕಾರಿಗಳು ಸರಿಯಾಗಿ ತಮ್ಮ ಕರ್ತವ್ಯ ನಿಭಾಯಿಸಿಲ್ಲ. ಬಾಲ ವಿವಾಹ, ಬಾಲ ಗರ್ಭಿಣಿ, ಟೀನೇಜ್ ಗರ್ಭಿಣಿ ಬಗ್ಗೆ ಸಭೆಗೆ ಸರಿಯಾಗಿ ಮಾಹಿತಿಯೊಂದಿಗೆ ಆಗಮಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಮಕ್ಕಳ ರಕ್ಷಣೆ ಬಗ್ಗೆ ಚರ್ಚಿಸಲಾಯಿತು. ಗ್ರಾಪಂನಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ, ಸಭೆಯಲ್ಲಿ ನಡಾವಳಿ ಹೇಗೆ ಬರೆಯಬೇಕು ಎಂಬಿತ್ಯಾದಿ ವಿಷಯ ಸಭೆಯಲ್ಲಿ ಚರ್ಚಿಸಲಾಯಿತು. ಗ್ರಾಪಂ ನಲ್ಲಿ ಮಕ್ಕಳ ಹಕ್ಕುಗಳ ಸಭೆ ಜರುಗಿಸದ ಬಗ್ಗೆ ಆಯೋಗದ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಗ್ರಾಮಗಳಲ್ಲಿ ವಿಕಲಚೇತನ ಮಕ್ಕಳಿಗೆ ಇಲಾಖೆಯಿಂದ ಕಾರ್ಡ್‌ ಸಿಕ್ಕಿಲ್ಲ. ಪೋಷಕರಿಗೆ ಮಾಹಿತಿ ಕೊರತೆಯಿಂದ ಇಲಾಖೆ ಸೌಲಭ್ಯ ಪಡೆಯುವ ಕಾರ್ಡ್‌ ಸಿಗುತ್ತಿಲ್ಲ ಎಂದು ಆಯೋಗದ ಸದಸ್ಯ ಡಾ. ಕೆ.ಟಿ. ತಿಪ್ಪೆಸ್ವಾಮಿ ಕಿಡಿಕಾರಿದರು.

ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ಶಿಕ್ಷಣ, ರಕ್ಷಣೆ ಬಗ್ಗೆ ನಡೆಯುತ್ತಿರುವ ಕೆಲಸಗಳ ಬಗ್ಗೆ ಚರ್ಚಿಸಲಾಯಿತು. ಶಾಲೆಗಳಲ್ಲಿ ಮಕ್ಕಳ ಸಲಹಾ ಪೆಟ್ಟಿಗೆ ಹಾಕಲಾಗುತ್ತಿಲ್ಲ. ಖಾಸಗಿ ಶಾಲಾ ವಾಹನಗಳಲ್ಲಿ ಸಿಸಿ ಕ್ಯಾಮೇರಾ, ಜಿಪಿಎಸ್ ಟ್ರ್ಯಾಕರ್ ಹಾಗೂ ಚಾಲಕನ ಮಾಹಿತಿ ಕುರಿತು ಪೊಲೀಸ್ ವೆರಿಫಿಕೇಷನ್ ಮಾಡಿರುವ ದಾಖಲೆ ಹೊಂದಿರಬೇಕು. ಶಾಲೆಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿಯ ಪೊಲೀಸ್ ವೆರಿಫೀಕೇಷನ್ ಆಗಬೇಕು. ಆದರೆ ಇವೆಲ್ಲವೂ ಖಾಸಗಿ ಶಾಲಾ ವಾಹನಗಳಲ್ಲಿ ಕಂಡು ಬಂದಿಲ್ಲ ಎಂದು ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಆರೋಪಿಸಿದರು.

ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಮುಂತಾದವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಜಾಗೃತಿ ಕತಪತ್ರ, ನೂತನ ಲೋಗೊ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಆಯೋಗದ ಸದಸ್ಯ ಶಶಿಧರ ಕೊಸಂಬಿ, ಶೇಖರಗೌಡ ರಾಮತ್ನಾಳ, ಡಾ. ಕೆ.ಟಿ.ತಿಪ್ಪೇಸ್ವಾಮಿ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಡಿವೈಎಸ್ಪಿ ಮಹಾಂತೇಶ ಸಜ್ಜನರ, ಜಯದೇವಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ