ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಬಾಲ್ಯದಲ್ಲೇ ಮಕ್ಕಳು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವತ್ತ ಶಿಕ್ಷಣ ಸಹಕಾರಿಯಾಗಬೇಕು. ಗುಣಮಟ್ಟದ ಮತ್ತು ಉತ್ತಮ ತಂತ್ರಜ್ಞಾನದಿಂದ ಮಾತ್ರ ಮಕ್ಕಳು ಸಾಧನೆ ಮೆರೆಯಲು ಸಾಧ್ಯವಾಗುತ್ತದೆಂದು ಕೊಲ್ಹಾಪುರದ ಪ್ರಾಚಾರ್ಯೆ ಸಸ್ಮಿತಾ ಮೊಹಂತಿ ಕರೆ ನೀಡಿದರು.ತೇರದಾಳದ ಎಸ್‌ಡಿಎಂ ಟ್ರಸ್ಟ್‌ನ ಡಾ.ಸಿದ್ಧಾಂತ ದಾನಿಗೊಂಡ ಸಿಬಿಎಸ್‌ಇ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಗುಣಮಟ್ಟದ, ಉತ್ತಮ ಬೋಧಕರ ಪಡೆ, ಮಗುವಿನ ಸರ್ವಾಂಗೀಣ ಪ್ರಗತಿಗೆ ಪೂರಕ ಸೌಲಭ್ಯಗಳನ್ನು ಹೊಂದಿರುವ ಶಾಲೆಗಳು ಇಂದು ದೇಶದಲ್ಲಿ ವಿರಳವಾಗಿವೆಯಾದರೂ ಗ್ರಾಮೀಣ ಪರಿಸರದಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿರುವ ಎಸ್ಡಿಎಂ ಸಂಸ್ಥೆ ಮುಖ್ಯಸ್ಥ ಡಾ.ಮಹಾವೀರ ದಾನಿಗೊಂಡ ತನ್ನೂರಿನ ಪ್ರಗತಿಗೆ ನೀಡಿರುವ ಕೊಡುಗೆ ಮಹತ್ತರವಾಗಿದ್ದು, ಮಕ್ಕಳು ಈ ಅವಕಾಶ ಬಳಸಿಕೊಂಡು ನಾಡಿನ ಹೆಮ್ಮೆಯ ಆಸ್ತಿಯಾಗಬೇಕು. ಶೈಕ್ಷಣಿಕ ವ್ಯವಸ್ಥೆ ಇಂದು ಕೌಶಲ, ವ್ಯವಹಾರಿಕ ವಿಧಾನಗಳಡಿ ಬದಲಾವಣೆಗೊಂಡಿದೆ. ಶಾಲೆಗೆ ಮಗುವನ್ನು ಬಿಟ್ಟು ತೆರಳುವುದುರಿಂದ ಪಾಲಕರ ಹೊಣೆಗಾರಿಕೆ ಮುಗಿಯುವುದಿಲ್ಲ ಬದಲಾಗಿ ಮನೆಯಲ್ಲಿ ಪಾಲಕರು ಶಿಕ್ಷಕರಾಗಬೇಕು ಮತ್ತು ಶಾಲೆಯಲ್ಲಿ ಶಿಕ್ಷಕರು ಪಾಲಕರಾಗಬೇಕು. ಅಂದಾಗ ಮಾತ್ರ ಶಿಕ್ಷಣದ ಸಾರ್ಥಕತೆ ಸಾಧ್ಯವೆಂದರು.
ಯುವ ವಿಜ್ಞಾನಿ, ತಂತ್ರಜ್ಞಾನಿ ಮತ್ತು ಬಿಳಿರಕ್ತಕಣಗಳ ದಾನಿಯಾಗಿ ದಾಖಲೆ ಬರೆದ ವಿಶ್ವಜೀತ್ ಕಾಶಿದ್ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ಶಿಕ್ಷಣದ ನಿಜವಾದ ಅರ್ಥವಿದೆ ಎಂಬುದನ್ನು ನಾನು ಭಾರತದಾದ್ಯಂತ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಗಮನಿಸಿದ್ದೇನೆ. ಅದು ಗ್ರಾಮೀಣ ಪರಿಸರದಲ್ಲಿರುವ ಈ ಶಾಲೆಯಲ್ಲಿ ಅಡಕವಾಗಿರುವುದು ಸಂತಸ ತಂದಿದೆ. ಸುರಕ್ಷತೆ, ಸಾಮಾಜಿಕ ಬದ್ಧತೆ ಮತ್ತು ಪಾಲಕರ ಸ್ಪಂದನೆ ಇದ್ದಲ್ಲಿ ಮಗುವಿನ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಕಾರಣವಾಗುವುದು. ಇತಿಹಾಸ ವಿಜಯಶಾಲಿಯನ್ನು ಗುರ್ತಿಸುತ್ತದೆ. ಮಕ್ಕಳು ವಿಜಯದತ್ತ ಸಾಗಲು ಕಠಿಣ ಪರಿಶ್ರಮ, ಸತತ ಅಧ್ಯಯನಶೀಲತೆ ಮತ್ತು ವಿಷಯದಲ್ಲಿನ ಬದ್ಧತೆಯತ್ತ ಸಂಕಲ್ಪಿತರಾಗಬೇಕು. ಯಶಸ್ಸು ಹೊಂದಲು ಗುರಿ ಅಚಲವಾಗಿರಬೇಕು.ಅಂತರ್‌ಶಕ್ತಿ ಬಲದಿಂದ ಅಸಾಧ್ಯವೂ ಸಾಧ್ಯವಾಗುತ್ತದೆ ಎಂಬುದನ್ನು ಮಕ್ಕಳು ಮರೆಯಬಾರದೆಂದರು.ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಮಾತನಾಡಿ, ಡಾ.ದಾನಿಗೊಂಡ ಶಿಕ್ಷಣ ಸಂಸ್ಥೆಯನ್ನು ತಮ್ಮ ಕನಸಿನಂತೆ ರೂಪಿಸಲು ಪಟ್ಟಿರುವ ಪಡಿಪಾಟಲು, ಎದುರಿಸಿದ ಹಲವಾರು ಸಮಸ್ಯೆಗಳು ಇಂದು ವಿಶಾಲ ಪ್ರದೇಶದಲ್ಲಿ ಸಾಕಾರಗೊಂಡಿವೆ. ಹೆತ್ತವರಿಗೆ, ಹಿರಿಯರಿಗೆ ಗೌರವ ಕೊಡುವ ಪರಂಪರೆ ಇಂದು ನಶಿಸುತ್ತಿದೆ. ತಂತ್ರಜ್ಞಾನಯುತ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಪರಂಪರೆಯ ಐತಿಹ್ಯಗಳನ್ನು ಶಿಕ್ಷಣ ದಾಸೋಹದಲ್ಲಿ ಅಳವಡಿಸಿದ ಕ್ರಮ ಸ್ತುತ್ಯಾರ್ಹವಾಗಿದೆ ಎಂದರು.
ವೇದಿಕೆಯಲ್ಲಿ ಪ್ರಾಚಾರ್ಯ ಪ್ರದೀಪ ಪಾಟೀಲ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಡಾ.ಪುಷ್ಪದಂತ ದಾನಿಗೊಂಡ, ಪ್ರತಿಭಾ ದಾನಿಗೊಂಡ, ಡಾ.ಮಧುರಾ ದಾನಿಗೊಂಡ, ಜಿನ್ನಪ್ಪ ಸವದತ್ತಿ, ಪ್ರಭು ಹಿಪ್ಪರಗಿ, ಪ್ರಾಚಾರ್ಯ ಡಾ.ಪ್ರಭಾಕರ ಅಪರಾಜ, ಉಪಪ್ರಾಚಾರ್ಯ ಡಾ.ಬಿ.ಬಿ.ಉಗಾರೆ, ಡಾ.ಮಹಾದೇವ ಬಡಿಗೇರ, ಡಾ.ಸಚಿನ್, ರಾಜೆಂದ್ರ ಪರೀಟ, ಶಬನಂ ರಾಜಣ್ಣವರ, ರಾಜು ಉಳಗೊಂಡ, ವಿಜಯಕುಮಾರ ಕಾಗಿ, ಬಾಬು ಸವದತ್ತಿ, ಸಾಗರ ಬಣಜವಾಡ, ಸುರೇಶ ಮರಡಿ, ಈರಣ್ಣಾ ಸಂಪಗಾಂವಿ, ಅಮಿತ್ ನಾಶಿ, ಮಲ್ಲಿಕಾರ್ಜುನ ಮುತ್ತೂರ, ಶ್ರೀಧರ ಬೆಳಗಲಿ ಸೇರಿದಂತೆ ಪಾಲಕರು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.---
ಕೋಟ್ಮಕ್ಕಳು ಸುರಕ್ಷಿತ ಕೈಗಳಲ್ಲಿ ಉತೃಷ್ಠ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆಂಬುದನ್ನು ಪಾಲಕರು ಮರೆಯಬಾರದು ಜೊತೆಗೆ ತಮ್ಮ ಜವಾಬ್ದಾರಿಗಳನ್ನೂ ನಿರ್ವಹಿಸಿದಲ್ಲಿ ಮಕ್ಕಳ ಭವಿತವ್ಯದ ಜೀವನ ಉಜ್ವಲವಾಗಿರುತ್ತದೆ.
-ಶಂಭು ಕಲ್ಲೋಳಿಕರ ನಿವೃತ್ತ ಐಎಎಸ್ ಅಧಿಕಾರಿ