ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ತಾಲೂಕಿನ ಹನುಕನಹಳ್ಳಿಯ ಶ್ರೀಶೈಲ ನೇತೃತ್ವದಲ್ಲಿ, ನಾಲ್ಕೈದು ಬಾಲಕರು ಹೊಳಗುಂದಿ ರಸ್ತೆಯಲ್ಲಿ ಕೈಯಲ್ಲಿ ಸಲಿಕೆ ಹಿಡಿದು, ಪುಟ್ಟಿಯಲ್ಲಿ ಮಣ್ಣು ತುಂಬಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಹನುಕನಹಳ್ಳಿಯ ಧೃವಂತ, ಗಣೇಶ, ಸಮರ್ಥ, ಲೋಕೇಶ ಸೇರಿದಂತೆ ಇತರರು ಗ್ರಾಮದಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದರು. ಇದರ ನೆನಪಿಗಾಗಿ ರಸ್ತೆಯಲ್ಲಿ ತಗ್ಗು ಗುಂಡಿಗಳನ್ನು ಮುಚ್ಚಲು ಸಣ್ಣದೊಂದು ಶ್ರಮದಾನ ಮಾಡಿರುವುದು, ವಾಹನ ಸವಾರರಿಗೆ ಸಮಾಧಾನ ತಂದಿದೆ.ಶ್ರೀಶೈಲ ಎಂಬವರು ಕಾರಿನಲ್ಲಿ ರಾತ್ರಿ ವೇಳೆ ಬರುವಾಗ ತಗ್ಗು-ಗುಂಡಿಗಳು ಕಾಣದೇ ಇನ್ನೇನು ಅಪಘಾತವಾಗುವ ಲಕ್ಷಣವಿತ್ತು. ಇದನ್ನರಿತ ಅವರು ಶಾಲೆ ರಜೆ ಇದ್ದ ಸಂದರ್ಭದಲ್ಲಿ ತಮ್ಮೂರಿನ ಬಾಲಕರನ್ನು ಕರೆ ತಂದು ತಾವು ಸೇರಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಿ, ಜೀವ ಉಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಎಲ್ಲ ಕಡೆಯಿಂದ ಈ ಚಿಕ್ಕ ಮಕ್ಕಳ ಶ್ರಮಕ್ಕೆ ಸೈ ಎಂದಿದ್ದಾರೆ.
ಚಿಕ್ಕ ಮಕ್ಕಳೊಂದಿಗೆ ನಾವು ಸೇರಿಕೊಂಡು ಹತ್ತಾರು ಗುಂಡಿ ಮುಚ್ಚಿದ್ದೇವೆ. ಇದರಿಂದ ತಕ್ಕಮಟ್ಟಿಗೆ ಸಮಾಧಾನ ಇದೆ. ಅನೇಕ ಜನರಿಗೆ ರಾತ್ರಿ ವೇಳೆ ಗುಂಡಿಗಳು ಕಾಣದೇ ಅಪಘಾತಕ್ಕೆ ಈಡಾಗುವ ಸಂಭವ ಹೆಚ್ಚಾಗುತ್ತಿತ್ತು. ಆದರಿಂದ ಈ ಸಣ್ಣ ಶ್ರಮದಾನ ಮಾಡಿದ್ದೇವೆ ಎಂದು ಹನುಕನಹಳ್ಳಿಯ ಶ್ರೀಶೈಲ ಹಿರೇಮಠ ಹೇಳಿದರು.